ಮುಂಬೈಯಲ್ಲಿ ಮಹಾಮಳೆ: 1 ಸಾವು, ರೆಡ್ ಅಲರ್ಟ್, ಶಾಲೆ-ಕಾಲೇಜು ಬಂದ್
x
ಮುಂಬೈನಲ್ಲಿ ಮಳೆಯಿಂದ ರೈಲು ಹಳಿಗಳು ಜಲಾವೃತವಾಗಿದ್ದು, ರೈಲು ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಮುಂಬೈಯಲ್ಲಿ ಮಹಾಮಳೆ: 1 ಸಾವು, ರೆಡ್ ಅಲರ್ಟ್, ಶಾಲೆ-ಕಾಲೇಜು ಬಂದ್

ಮುಂಬೈ, ರತ್ನಗಿರಿ, ರಾಯಗಢ, ಸತಾರಾ, ಪುಣೆ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಥಾಣೆ ಹಾಗೂ ಪಾಲ್ಘರ್‌ಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.


ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ತುಂತುರು ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಉಪನಗರ ರೈಲು ಸೇವೆ ಮತ್ತು ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಶಾರ್ಟ್ ಸರ್ಕಿಟ್‌ನಿಂದ ಉಂಟಾದ ಸುಟ್ಟಗಾಯಗಳಿಂದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ರಸ್ತೆಗಳು ನೀರಿನಿಂದ ತುಂಬಿಕೊಂಡಿದ್ದು, ಜನ ಪರದಾಡಿದರು.

ಮುಂಬೈ, ಥಾಣೆ, ನವಿ ಮುಂಬೈ, ಪನ್ವೇಲ್, ಪುಣೆ ಮತ್ತು ರತ್ನಗಿರಿ-ಸಿಂಧುದುರ್ಗದ ಗ್ರಾಮೀಣ ಭಾಗಗಳಲ್ಲಿನ ಶಾಲೆಗಳು ಮತ್ತು ಜೂನಿಯರ್ ಕಾಲೇಜುಗಳು ಮಂಗಳವಾರವೂ ಮುಚ್ಚಲ್ಪಡುತ್ತವೆ. ಈ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ನೀಡಿದೆ.

ಮುಂಬೈ, ರತ್ನಗಿರಿ, ರಾಯಗಢ, ಸತಾರಾ, ಪುಣೆ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಮತ್ತು ಥಾಣೆ ಹಾಗೂ ಪಾಲ್ಘರ್‌ಗೆ ಮಂಗಳವಾರ (ಜುಲೈ 9) ಆರೆಂಜ್ ಅಲರ್ಟ್ ಘೋಷಿಸಿದೆ.

ಮನೆ-ಗೋಡೆ ಕುಸಿತದ 10 ಘಟನೆ: ಸೋಮವಾರ ಸಂಜೆ 6 ಗಂಟೆಗೆ ಕೊನೆಗೊಂಡ 10 ಗಂಟೆಗಳ ಅವಧಿಯಲ್ಲಿ ನಗರದಲ್ಲಿ ಸರಾಸರಿ 47.93 ಮಿಮೀ ಮಳೆಯಾಗಿದೆ. ಮಹಾನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಕ್ರಮವಾಗಿ 18.82 ಮಿಮೀ ಮತ್ತು 31.74 ಮಿಮೀ ಮಳೆಯಾಗಿದೆ.

ʻ24 ಗಂಟೆಗಳ ಅವಧಿಯಲ್ಲಿ ಮುಂಬೈ 115.63 ಮಿಮೀ, ಪೂರ್ವ ಮುಂಬೈ 168.68 ಮಿಮೀ ಮತ್ತು ಪಶ್ಚಿಮ ಮುಂಬೈ 165.93 ಮಿಮೀ ಮಳೆಯನ್ನು ದಾಖಲಿಸಿದೆ. ನಗರದಲ್ಲಿ 40 ಮರ ಅಥವಾ ಕೊಂಬೆ ಬಿದ್ದ ಘಟನೆಗಳು ವರದಿಯಾಗಿವೆ. ಆದರೆ, ಯಾವುದೇ ಸಾವಿನ ವರದಿಯಾಗಿಲ್ಲ. ಕೆಲವು ವಾಹನಗಳಿಗೆ ಹಾನಿಯಾಗಿದೆ,ʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʻನಗರದಲ್ಲಿ ಶಾರ್ಟ್ ಸರ್ಕೀಟ್‌ ನ 12 ಘಟನೆಗಳು ವರದಿಯಾಗಿವೆ. ಸಾಂತಾಕ್ರೂಜ್ ಪೂರ್ವದಲ್ಲಿ 72 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ದತ್ತ ಮಂದಿರ ರಸ್ತೆಯಲ್ಲಿರುವ ಹಾಜಿ ಸಿದ್ಧಿಕಿ ಚಾಲ್ ಅವರ ಕೊಠಡಿಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿತು. ಮುಂಬೈನಲ್ಲಿ 10 ಮನೆ ಅಥವಾ ಗೋಡೆ ಕುಸಿತದ ಘಟನೆಗಳು ದಾಖಲಾಗಿವೆ,ʼ ಎಂದು ಹೇಳಿದರು.

ಒಂದು ಗಂಟೆ ಕಾಲ ರನ್‌ವೇ ಬಂದ್‌: ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳಿಗೆ ಧಕ್ಕೆಯಾಗಿದೆ. ರನ್‌ವೇ ಕಾರ್ಯಾಚರಣೆಯನ್ನು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಳಿಸಿದ್ದು, ಸುಮಾರು 50 ವಿಮಾನಗಳನ್ನು ರದ್ದುಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ. ರದ್ದುಗೊಂಡ 50 ವಿಮಾನಗಳಲ್ಲಿ 42 ಇಂಡಿಗೋ ಮತ್ತು ಆರು ಏರ್ ಇಂಡಿಯಾ ವಿಮಾನಗಳು ಇವೆ. ಜೊತೆಗೆ, ಸರ್ಕಾರಿ ಸ್ವಾಮ್ಯದ ಅಲಯನ್ಸ್ ಏರ್ ಎರಡು ವಿಮಾನಗಳನ್ನು ರದ್ದುಗೊಳಿಸಿತು ಎಂದು ಮೂಲಗಳು ತಿಳಿಸಿವೆ.

ರೈಲುಗಳು ಸ್ಥಗಿತ:ಉಪನಗರ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ. ಮುಂಬೈನ ಕೆಲವು ಪ್ರದೇಶಗಳಲ್ಲಿ ಕೇವಲ ಆರು ಗಂಟೆಗಳಲ್ಲಿ 300 ಮಿಮೀ ಗಿಂತ ಹೆಚ್ಚು ಮಳೆ ಸುರಿದಿದೆ. ಇದರಿಂದ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಭಾರತೀಯ ಹವಾಮಾನ ಇಲಾಖೆ ಮಂಗಳವಾರವೂ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ತಗ್ಗು ಪ್ರದೇಶಗಳಲ್ಲಿ ಅಧಿಕ ಸಾಮರ್ಥ್ಯದ ಪಂಪ್‌ಗಳನ್ನು ಅಳವಡಿಸಿದ್ದರೂ, ಸೆಂಟ್ರಲ್ ರೈಲ್ವೆ ಸೇವೆಗಳು ಗಮನಾರ್ಹ ಅಡಚಣೆ ಎದುರಿಸಿದವು. ಸ್ಥಳೀಯ ರೈಲುಗಳು ಗಂಟೆಗಳ ಕಾಲ ಹಳಿ ಮೇಲೆ ನಿಂತಿದ್ದರಿಂದ ಸಾವಿರಾರು ಪ್ರಯಾಣಿಕರಿಗೆ ಅನನುಕೂಲವಾಯಿತು. ಮುಂಬೈಗೆ ತೆರಳುತ್ತಿದ್ದ ಹಲವು ಹೊರಗಡೆಯ ರೈಲುಗಳು ಕೂಡ ಸಿಕ್ಕಿಬಿದ್ದಿವೆ.

ವಡಾಲಾ ನಿಲ್ದಾಣ ಜಲಾವೃತಗೊಂಡ ಕಾರಣ, ವಡಾಲಾ ಮತ್ತು ಸಿಎಸ್‌ಎಂಟಿ ನಡುವಿನ ಸೇವೆಗಳನ್ನು ರಾತ್ರಿ 10:15 ಕ್ಕೆ ಸ್ಥಗಿತಗೊಳಿಸಲಾಯಿತು. ಪಶ್ಚಿಮ ರೈಲ್ವೆಯ ದಾದರ್-ಮಾತುಂಗಾ ರಸ್ತೆ ನಡುವಿನ ಹಳಿಗಳು, ಮಧ್ಯ ರೈಲ್ವೆಯ ಮುಖ್ಯ ಮಾರ್ಗದ ದಾದರ್ ಮತ್ತು ವಿದ್ಯಾವಿಹಾರ್ ಮತ್ತು ಹಾರ್ಬರ್ ಲೈನ್‌ನ ವಡಾಲಾದಲ್ಲಿ ಹಳಿಗಳು ನೀರಿನಲ್ಲಿ ಮುಳುಗಿವೆ ಎಂದು ಮೂಲಗಳು ತಿಳಿಸಿವೆ.

ಬಸ್ ಸೇವೆಗೆ ಹೊಡೆತ: ಮಳೆ ಬೆಸ್ಟ್ ಬಸ್ ಸೇವೆ ಮೇಲೆ ಪರಿಣಾಮ ಬೀರಿತು. ಪರೇಲ್, ಗಾಂಧಿ ಮಾರುಕಟ್ಟೆ, ಸಂಗಮ್ ನಗರ ಮತ್ತು ಮಲಾಡ್ ಸುರಂಗಮಾರ್ಗದಂತಹ ಪ್ರದೇಶಗಳು ಜಲಾವೃತವಾಗುವುದರಿಂದ, ಬಸ್‌ ಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿದವು.

ಉಭಯ ಸದನ‌ ಮುಂದಕ್ಕೆ: ಮಳೆಯ ಅಬ್ಬರದಿಂದ ಹಲವು ಶಾಸಕರು ಮತ್ತು ಅಧಿಕಾರಿಗಳು ವಿಧಾನ ಭವನಕ್ಕೆ ತೆರಳಲು ಸಾಧ್ಯವಾಗದ ಕಾರಣ ಮಹಾರಾಷ್ಟ್ರ ವಿಧಾನಮಂಡಲದ ಉಭಯ ಸದನಗಳನ್ನು ಮುಂದೂಡಲಾಯಿತು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂತ್ರಾಲಯದಲ್ಲಿ ಸನ್ನಿವೇಶವನ್ನು ಅವಲೋಕಿಸುವ ಸಭೆಯ ಅಧ್ಯಕ್ಷತೆ ವಹಿಸಿದರು. ಆನಂತರ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ಕುರ್ಲಾ ಮತ್ತು ಘಾಟ್‌ಕೋಪರ್, ಥಾಣೆ, ವಸಾಯಿ (ಪಾಲ್ಘರ್), ಮಹಾದ್ (ರಾಯಗಢ), ಚಿಪ್ಲುನ್ (ರತ್ನಗಿರಿ), ಕೊಲ್ಹಾಪುರ, ಸಾಂಗ್ಲಿ, ಸತಾರಾ ಮತ್ತು ಸಿಂಧುದುರ್ಗ ಮತ್ತಿತರ ಭಾಗಗಳಲ್ಲಿ ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

ಪುಣೆಯಲ್ಲೂ ಮಳೆ: ಪುಣೆ ಜಿಲ್ಲೆಯಲ್ಲೂ ಎಲ್ಲ ಶಾಲೆಗಳು ಮತ್ತು ಜೂನಿಯರ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುಣೆ ಕಲೆಕ್ಟರ್ ಸುಹಾಸ್ ದಿವಾಸೆ ಅವರು ಹೊರಡಿಸಿದ ಮಾರ್ಗಸೂಚಿ ಅನ್ವಯ 12ನೇ ತರಗತಿವರೆಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಆದರೆ, ಪ್ರಾಚಾರ್ಯರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ವಿಪತ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದೆ. ಅಗತ್ಯವಿದ್ದರೆ ಮಾತ್ರ ಸಾರ್ವಜನಿಕರು ಮನೆಯಿಂದ ಹೊರಬರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Read More
Next Story