ಜೈಲಿನಲ್ಲಿ ನಿಧಾನ ವಿಷಪ್ರಾಶನ: ಮುಖ್ತಾರ್ ಅನ್ಸಾರಿ ಪುತ್ರ ಆರೋಪ, ತನಿಖೆಗೆ ಆಗ್ರಹ
ಮಾ.29- ಉತ್ತರ ಪ್ರದೇಶದ ಬಂದಾ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಸಾವಿಗೀಡಾದ ತನ್ನ ತಂದೆಗೆ ಜೈಲಿನಲ್ಲಿ ನಿಧಾನ ವಿಷ ನೀಡಲಾಗಿತ್ತು ಎಂದು ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪುತ್ರ ದೂರಿದ್ದಾರೆ. ಆದರೆ, ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಮುಖ್ತಾರ್ ಅನ್ಸಾರಿ ಅವರನ್ನು ʻಪ್ರಜ್ಞಾಹೀನ ಸ್ಥಿತಿಯಲ್ಲಿʼ ಜಿಲ್ಲಾ ಕಾರಾಗೃಹದಿಂದ ಬಂದಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಕರೆತರಲಾಯಿತು. ಪ್ರಾಂಶುಪಾಲ ಸುನೀಲ್ ಕೌಶಲ್ ಪ್ರಕಾರ, ಗುರುವಾರ (ಮಾ.28) ಹೃದಯಸ್ತಂಭನದಿಂದ ಅವರು ಆಸ್ಪತ್ರೆಯಲ್ಲಿ ನಿಧನರಾದರು.
ಮೌ ಸದರ್‌ನಿಂದ ಐದು ಬಾರಿ ಶಾಸಕರಾಗಿದ್ದಅನ್ಸಾರಿ(63), 2005 ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಜೈಲಿನಲ್ಲಿದ್ದರು. ಅವರ ವಿರುದ್ಧ 60 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಅನ್ಸಾರಿಗೆ ಶಿಕ್ಷೆ ವಿಧಿಸಿವೆ.ಅವರನ್ನುಬಂದಾ ಜೈಲಿನಲ್ಲಿ ಸೆಪ್ಟೆಂಬರ್ 2022 ರಿಂದ ಇರಿಸಲಾಗಿತ್ತು. ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಸಿದ್ಧಪಡಿಸಿದ 66 ದರೋಡೆಕೋರರ ಪಟ್ಟಿಯಲ್ಲಿ ಅವರ ಹೆಸರಿತ್ತು.
ʻನನಗೆ ನಿಧಾನ ವಿಷ ಪ್ರಾಷನ ಮಾಡಲಾಗುತ್ತಿದೆ ಎಂದು ತಂದೆ ಹೇಳಿದ್ದರುʼ ಎಂದು ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ ಸುದ್ದಿಗಾರರಿಗೆ ತಿಳಿಸಿದರು. ಈಗ ಇಡೀ ದೇಶಕ್ಕೆ ಅದರ ಬಗ್ಗೆ ತಿಳಿದಿದೆ ಎಂದು ಹೇಳಿದರು. ಅನ್ಸಾರಿ ಅವರ ಸಹೋದರ ಮತ್ತು ಗಾಜಿಪುರ ಸಂಸದ ಅಫ್ಜಲ್ ಅನ್ಸಾರಿ, ತಮಗೆ ಜೈಲಿನಲ್ಲಿ ನಿಧಾನ ವಿಷ ನೀಡಲಾಗುತ್ತಿದೆ ಎಂದು ಮಂ ಗಳವಾರ (ಮಾರ್ಚ್ 26) ಆರೋಪಿಸಿದ್ದಾರೆ.
ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ: ಶುಕ್ರವಾರ ಬೆಳಗ್ಗೆ ಮುಖ್ತಾರ್ ಅನ್ಸಾರಿ ಅವರ ನಿವಾಸದಲ್ಲಿ ಜನ ಜಮಾಯಿಸಿದ್ದರು. ಮನೆ ಹಾಗೂ ಆಸ್ಪತ್ರೆ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ʻಮರಣೋತ್ತರ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ, ಬೆಳಗ್ಗೆ ಶವವನ್ನು ಹಸ್ತಾಂತರಿಸಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆಡಳಿತ ಏಕೆ ವಿಳಂಬ ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿʼ ಎಂದು ಅನ್ಸಾರಿ ಅವರ ಹಿರಿಯ ಸಹೋದರ ಸಿಬ್ಗತುಲ್ಲಾ ಅನ್ಸಾರಿ ಸುದ್ದಿಗಾರರಿಗೆ ತಿಳಿಸಿದರು.
ಉಮರ್ ಅವರ ಆರೋಪದ ಬಗ್ಗೆ ಕೇಳಿದಾಗ, ʻ...ಇಂಥ ಸಂಗತಿಗಳು ನಡೆಯುತ್ತಿವೆ ಎಂದು ಅನ್ಸಾರಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಲಿಖಿತವಾಗಿ ತಿಳಿಸಿದ್ದಾರೆʼ ಎಂದರು. ನಿಷೇಧಾಜ್ಞೆ: ಸೆಕ್ಷನ್ 144 ರಡಿ ರಾಜ್ಯಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ. ಬಂದಾ, ಮೌ, ಗಾಜಿಪುರ ಮತ್ತು ವಾರಾಣಸಿ ಜಿಲ್ಲೆಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಮೌ ಮೂಲದ ಅನ್ಸಾರಿ, ಗಾಜಿಪುರ ಮತ್ತು ವಾರಾಣಸಿ ಜಿಲ್ಲೆಗಳಲ್ಲಿಯೂ ಪ್ರಭಾವ ಹೊಂದಿದ್ದಾರೆ ಎಂದು ನಂಬಲಾಗಿದೆ. ಅನ್ಸಾರಿ ಅವರ ಮರಣೋತ್ತರ ಪರೀಕ್ಷೆಯನ್ನು ಬಂದಾದಲ್ಲಿ ಮಾಡಲಾಗುವುದು ಮತ್ತು ಅದನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಅಗತ್ಯವಿದ್ದರೆ ಒಳ ಅಂಗಗಳನ್ನು ಸಂರಕ್ಷಿಸಲಾಗುವುದು ಎಂದು ಲಕ್ನೋದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.