ಪ್ರತಿಷ್ಠಿತ ಕುಟುಂಬದಿಂದ ಬಂದ ಮುಖ್ತರ್‌ ಅನ್ಸಾರಿ ಡಾನ್‌ ಆಗಿದ್ದುಹೇಗೆ?
x

ಪ್ರತಿಷ್ಠಿತ ಕುಟುಂಬದಿಂದ ಬಂದ ಮುಖ್ತರ್‌ ಅನ್ಸಾರಿ ಡಾನ್‌ ಆಗಿದ್ದುಹೇಗೆ?


ಉತ್ತರಪ್ರದೇಶದ ಮುಖ್ತರ್‌ ಅನ್ಸಾರಿ ಅಪರಾಧ ಮತ್ತು ರಾಜಕೀಯ ಪ್ರಪಂಚವನ್ನು ವಿಸ್ತರಿಸಿದರು. ಈ ದರೋಡೆಕೋರ-ರಾಜಕಾರಣಿ ಮೇಲೆ ಕೊಲೆಯಿಂದ ಹಿಡಿದು ಸುಲಿಗೆಯವರೆಗೆ 65 ಕ್ರಿಮಿನಲ್ ಪ್ರಕರಣ ದಾಖಲಾಗಿದೆ; ಅವರು ವಿವಿಧ ರಾಜಕೀಯ ಪಕ್ಷಗಳಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಅನ್ಸಾರಿ(61) ಮಾ.28ರಂದು ಬಂದಾ ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ನಿಧನರಾದರು.

ವಿಶಿಷ್ಟ ವಂಶ: ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಭಾವಿ ಕುಟುಂಬದಲ್ಲಿ 1963 ರಲ್ಲಿ ಜನಿಸಿದರು. ಅವರ ತಂದೆಯ ಅಜ್ಜ, ಮುಖ್ತರ್‌ ಅಹ್ಮದ್ ಅನ್ಸಾರಿ, 1927ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ಆನಂತರ 1936ರಲ್ಲಿ ಸಾಯುವವರೆಗೂ ಜಾಮಿಯಾ ಮಿಲಿಯಾ ಇಸ್ಮಾಲಿಯಾದ ಚಾನ್ಸೆಲರ್ ಆಗಿದ್ದರು. ಅವರ ತಾಯಿಯ ಅಜ್ಜ ಭಾರತೀಯ ಸೇನೆಯ ಹಿರಿಯ ಅಲಂಕೃತ ಅಧಿಕಾರಿ ಬ್ರಿಗೇಡಿ ಯರ್ ಮೊಹಮ್ಮದ್ ಉಸ್ಮಾನ್. 1948ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ಅವರಿಗೆ ಮಹಾವೀರ ಚಕ್ರವನ್ನುಮರಣೋತ್ತರವಾಗಿ ನೀಡಲಾಯಿತು. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮುಖ್ತಾರ್ ಅವರ ಸೋದರ ಸಂಬಂಧಿ.

ಅಪರಾಧದ ಬದುಕು 17 ನೇ ವಯಸ್ಸಿನಲ್ಲಿ ಪ್ರಾರಂಭ: ಮುಖ್ತರ್‌ ಅನ್ಸಾರಿ ಹದಿಹರೆಯದಲ್ಲಿದ್ದಾಗ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಗುತ್ತಿಗೆದಾರರಾಗಿ ತಮ್ಮನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅಪರಾಧದ ಜಗತ್ತಿಗೆ ಕಾಲಿಟ್ಟರು. 1980 ರಲ್ಲಿ 17 ವರ್ಷ ಆಗಿದ್ದಾಗ ಅವರ ಮೇಲೆ ಘಾಜಿಪುರದ ಸೈದ್‌ಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಯಿತು. 1986 ರ ಹೊತ್ತಿಗೆ ಘಾಜಿಪುರದ ಮುಹಮ್ಮದ್ ಪೊಲೀಸ್ ಠಾಣೆಯಲ್ಲಿ ಕೊಲೆಯ ಆರೋಪದ ಮೇಲೆ ಎಫ್‌ಐಆರ್ ಕೂಡ ದಾಖಲಾಗಿತ್ತು.

ಮುಂದಿನ ದಶಕದಲ್ಲಿ ಅನ್ಸಾರಿ ವಿರುದ್ಧ ಕನಿಷ್ಠ 14 ಪ್ರಕರಣ ದಾಖಲಾಗಿದ್ದವು. ಘಾಜಿಪುರ ಮತ್ತು ನೆರೆಯ ಪಟ್ಟಣಗಳಲ್ಲಿ ದರೋಡೆಕೋರನೆಂಬ ಖ್ಯಾತಿ ಹೆಚ್ಚುತ್ತಿದ್ದಂತೆ, ಅವರ ಔದಾರ್ಯವೂ ಮನೆಮಾತಾಯಿತು. ಘಾಜಿಪುರದಲ್ಲಿರುವ ಅನ್ಸಾರಿಯ ನಿವಾಸ ʻಫಾಟಕ್‌ʼನಿಂದ ಸಹಾಯದ ಅಗತ್ಯವಿರುವ ಯಾರೂ ಬರಿಗೈಯಲ್ಲಿ ಹಿಂತಿರುಗಲಿಲ್ಲ ಎಂಬ ಕಥೆಗಳು ಪೂರ್ವಾಂಚಲದಾದ್ಯಂತ ಹಬ್ಬಿದವು. ಅವರ ಔದಾರ್ಯದ ಲಾಭ ಪಡೆದ ಗಾಜಿಪುರ ಮತ್ತು ಅದರ ಪಕ್ಕದ ಜಿಲ್ಲೆಗಳ ಜನರ ಪ್ರಕಾರ, 1980 ರ ದಶಕದಲ್ಲಿ ಅಸ್ತಿತ್ವದಲ್ಲಿದ್ದ ಸರ್ಕಾರಿ ಗುತ್ತಿಗೆ ಮಾಫಿಯಾವನ್ನು ಛಿದ್ರಗೊಳಿಸಲು ದೃಢ ನಿಶ್ಚಯ ಮಾಡಿದ್ದ ಅವರ ಅಪರಾಧ ಜಗತ್ತಿನ ಪ್ರವೇಶ ಅನಿವಾರ್ಯವಾಗಿತ್ತು. ಆಗ ಪೂರ್ವಾಂಚಲದ ಬಹುತೇಕ ಸ್ಥಳೀಯ ಬಲಾಢ್ಯರು ಸರ್ಕಾರಿ ಗುತ್ತಿಗೆ ಮಾಫಿಯಾದಲ್ಲಿ ಪ್ರಮುಖ ಹೆಸರುಗಳಾಗಿದ್ದ ಠಾಕೂರ್ ಮತ್ತು ಭೂಮಿಹಾರರು.ಬ್ರಿಜೇಶ್ ಸಿಂಗ್ ಮತ್ತು ಅವಧೇಶ್ ರೈ ಅವರಂಥವರ ಏಕಸ್ವಾಮ್ಯವನ್ನು ಮುರಿಯಲು ಪ್ರಯತ್ನಿಸಿದ ಮೊದಲ ಮುಸ್ಲಿಂ ಅನ್ಸಾರಿ.

ನಂತರದ ವರ್ಷಗಳಲ್ಲಿ ಉತ್ತರಪ್ರದೇಶದ ರಾಜಕೀಯವನ್ನು ಹಿಂದುತ್ವದ ಕಥಾನಕ ನುಂಗಿತು. ಆನಂತರ ಕಳೆದ ಏಪ್ರಿಲ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಕೊಲ್ಲಲ್ಪಟ್ಟ ಅತೀಕ್ ಅಹ್ಮದ್‌ನಂತಹ ಕ್ರಿಮಿನಲ್-ರಾಜಕಾರಣಿಗಳೊಂದಿಗೆ ಅನ್ಸಾರಿಯನ್ನು ಮುಸ್ಲಿಂ ದರೋಡೆಕೋರ ಎಂದು ಕರೆಯಲಾಯಿತು. ವಾಸ್ತವವೇನೆಂದರೆ, 2005 ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರನ್ನು ಗುಂಡಿಕ್ಕಿ ಕೊಂದ ಮುನ್ನಾ ಬಜರಂಗಿ ಸೇರಿದಂತೆ ಅನ್ಸಾರಿಯ ಬಹುತೇಕ ಹಿಂಬಾಲಕರು ಹಿಂದುಗಳು. ಅನ್ಸಾರಿ ತನ್ನ ಕ್ರಿಮಿನಲ್ ಚಟುವಟಿಕೆ ಇಲ್ಲವೇ ಜನರಿಗೆ ಸಹಾಯ ಮಾಡುವುದರಲ್ಲಾಗಲೀ ಹಿಂದೂ ಮತ್ತು ಮುಸ್ಲಿಂ ಎಂದು ತಾರತಮ್ಯ ಮಾಡುತ್ತಿರಲಿಲ್ಲ ಎಂದು ಘಾಜಿಪುರದ ಸ್ಥಳೀಯರು ಹೇಳುತ್ತಾರೆ.

ರಾಜಕೀಯಕ್ಕೆ ಪ್ರವೇಶ: ಈ ರಾಬಿನ್ ಹುಡ್‌ ಗುಣ ಅವರನ್ನು ರಾಜಕೀಯಕ್ಕೆ ಸೆಳೆಯಿತು. ನಂತರದ ವರ್ಷಗಳಲ್ಲಿ, ಅವರ ಕುಟುಂಬದ ಭದ್ರಕೋಟೆಯಾದ ಘಾಜಿಪುರವನ್ನು ಮೀರಿ, ಅವರ ರಾಜಕೀಯ ಪ್ರಭಾವವನ್ನು ಬಲಪಡಿಸಿತು. ಅನ್ಸಾರಿ 1996 ರಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಟಿಕೆಟ್‌ನಲ್ಲಿ ಮೌ ನಿಂದ ಯುಪಿ ಶಾಸನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2002 ಮತ್ತು 2007 ರ ವಿಧಾನಸಭೆ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಯಶಸ್ಸಿನ ಓಟವನ್ನು ಮುಂದುವರಿಸಿದರು. 2012 ರಲ್ಲಿ ಕ್ವಾಮಿ ಏಕತಾ ದಳ (ಕ್ಯುಇಡಿ)ವನ್ನು ಪ್ರಾರಂಭಿಸಿದರು ಮತ್ತು ಮೌದಿಂದ ಮತ್ತೆ ಗೆದ್ದರು. 2017 ರಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದರು. ಕುತೂಹಲಕರ ಅಂಶವೆಂದರೆ, 2005 ರಿಂದ ಯುಪಿ ಮತ್ತು ಪಂಜಾಬಿನ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದರೂ, 2017 ರವರೆಗೆ ಅವರ ಚುನಾವಣೆ ಗೆಲುವು ಮುಂದುವರಿಯಿತು. 2022 ರಲ್ಲಿ ಅವರು ಮಗ ಅಬ್ಬಾಸ್ ಅನ್ಸಾರಿಗಾಗಿ ಸ್ಥಾನ ತೆರವು ಮಾಡಿದರು. ಆಗ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ)ದ ಮಿತ್ರಪಕ್ಷ ವಾಗಿದ್ದಒ.ಪಿ. ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಟಿಕೆಟ್‌ನಿಂದ ಗೆದ್ದರು.

ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ ಸರ್ಕಾರವು ಅನ್ಸಾರಿಯನ್ನು ʻತಟಸ್ಥಗೊಳಿಸಿರುವʼ ಸಾಧ್ಯತೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾವಿಗೆ ಒಂದು ವಾರ ಮೊದಲು ವಿಶೇಷ ನ್ಯಾಯಾಲಯಕ್ಕೆ ಬರೆದ ಪತ್ರದಲ್ಲಿ ತಮಗೆ ಜೈಲು ಅಧಿಕಾರಿಗಳು ನಿಧಾನವಿಷ ನೀಡುತ್ತಿದ್ದಾರೆ ಎಂದು ಅನ್ಸಾರಿ ಆರೋಪಿಸಿ ದ್ದರು. ಎಸ್‌ಬಿಎಸ್‌ಪಿ ಕಳೆದ ವರ್ಷ ಎಸ್‌ಪಿಯೊಂದಿಗೆ ಸಂಬಂಧ ಕಡಿದುಕೊಂಡು, ಎನ್‌ಡಿಎ ಒಕ್ಕೂಟಕ್ಕೆ ಸೇರಿತ್ತು. ಹೀಗಾಗಿ, ಅವರ ಮಗ,‌ ಅಬ್ಬಾಸ್, ಈಗ ತಾಂತ್ರಿಕವಾಗಿ ಎನ್‌ಡಿಎ ಶಾಸಕ.

ಅಪರಾಧಗಳ ಸರಮಾಲೆ: ಅನ್ಸಾರಿ ಮೇಲೆ ಕೊಲೆ ಸೇರಿದಂತೆ 28 ಕ್ರಿಮಿನಲ್ ಮೊಕದ್ದಮೆಗಳಿವೆ ಮತ್ತು 2005 ರಿಂದ ಉತ್ತರಪ್ರದೇಶದ ದರೋಡೆಕೋರ ಕಾಯಿದೆಯಡಿಯಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ 2022 ರಿಂದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದರು ಮತ್ತು 21 ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಆದಿತ್ಯನಾಥ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಅನ್ಸಾರಿ ವಿರುದ್ಧ ದೋಷಾರೋಪಗಳು ಹೆಚ್ಚಿದವು.

37 ವರ್ಷಗಳ ಹಿಂದೆ ಶಸ್ತ್ರಾಸ್ತ್ರ ಪರವಾನಗಿಯನ್ನು ಮೋಸದಿಂದ ಪಡೆದ ಪ್ರಕರಣದಲ್ಲಿ ಮಾರ್ಚ್‌ ಆರಂಭದಲ್ಲಿ ವಾರಾಣಸಿಯ ಜನಪ್ರತಿನಿಧೀಗಳ ನ್ಯಾಯಾಲಯವು ಅನ್ಸಾರಿಗೆ ಜೀವಾವಧಿ ಶಿಕ್ಷೆ ಮತ್ತು 2.02 ಲಕ್ಷ ರೂ.ದಂಡ ವಿಧಿಸಿತ್ತು. ಯುಪಿಯ ವಿವಿಧ ನ್ಯಾಯಾಲಯಗಳು ಕಳೆದ 18 ತಿಂಗಳಲ್ಲಿ ಅವರಿಗೆ ಶಿಕ್ಷೆ ವಿಧಿಸಿದ ಎಂಟನೆಯ ಮತ್ತು ಜೀವಾವಧಿ ಶಿಕ್ಷೆ ವಿಧಿಸಿದ ಎರಡನೇ ಪ್ರಕರಣ ಇದಾಗಿದೆ.

ಡಿಸೆಂಬರ್ 15, 2023 ರಂದು ಬಿಜೆಪಿ ಮುಖಂಡ ಮತ್ತು ಕಲ್ಲಿದ್ದಲು ವ್ಯಾಪಾರಿ ನಂದ್ ಕಿಶೋರ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನೀಡಿದ್ದ ಮಹಾವೀರ್ ಪ್ರಸಾದ್ ರುಂಗ್ಟಾಗೆ ಬೆದರಿಕೆ ಹಾಕಿದ್ದಕ್ಕೆ ವಾರಾಣಸಿಯ ಜನಪ್ರತಿನಿಧಿಗಳ ನ್ಯಾಯಾಲಯ ಐದೂವರೆ ವರ್ಷ ಶಿಕ್ಷೆ ವಿಧಿಸಿತು. ಜನವರಿ 22, 1997 ರಂದು ರುಂಗ್ಟಾ ಹತ್ಯೆ ನಡೆದಿತ್ತು.

ಅಕ್ಟೋಬರ್ 27, 2023 ರಂದು ಘಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯವು 2010 ರಲ್ಲಿ ಅವರ ವಿರುದ್ಧ ದಾಖಲಾದ ದರೋಡೆಕೋರ ಕಾಯಿದೆ ಪ್ರಕರಣದಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ದಂಡ ವಿಧಿಸಿತು. ಜೂನ್ 5, 2023 ರಂದು ವಾರಾಣಸಿಯ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಕಾಂಗ್ರೆಸ್ ಶಾಸಕ ಮತ್ತು ಪ್ರಸ್ತುತ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರ ಹಿರಿಯ ಸಹೋದರ ಅವದೇಶ್ ರೈ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು. ಆಗಸ್ಟ್ 3, 1991 ರಂದು ಅವದೇಶ್ ರೈ ಮತ್ತು ಅವರ ಸಹೋದರ ಅಜಯ್ , ವಾರಾಣಸಿಯ ಲಾಹುರಾಬೀರ್ ಪ್ರದೇಶದ ತಮ್ಮ ಮನೆ ಹೊರಗೆ ನಿಂತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಏಪ್ರಿಲ್ 29, 2023 ರಂದು ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲಿ ಘಾಜಿಪುರ ಜನಪ್ರತಿನಿಧಿಗಳ ನ್ಯಾಯಾಲಯ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಸೆಪ್ಟೆಂಬರ್ 23, 2022 ರಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು,1999 ರಲ್ಲಿ ಲಕ್ನೋದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಅನ್ಸಾರಿ ವಿರುದ್ಧ ದಾಖಲಾದ ದರೋಡೆಕೋರ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಗೆ 50,000 ರೂ.ದಂಡ ವಿಧಿಸಿತು. ಡಿಸೆಂ ಬರ್ 15, 2022 ರಂದು ಗಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯ 1996 ಮತ್ತು 2007 ರಲ್ಲಿ ದಾಖಲಾದ ದರೋಡೆಕೋರ ಕಾಯಿದೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅವರಿಗೆ 10 ವರ್ಷ ಸೆರೆಮನೆವಾಸ ಮತ್ತು ತಲಾ 5 ಲಕ್ಷ ರೂ. ದಂಡ ವಿಧಿಸಿತು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು 2003ರಲ್ಲಿ ಲಕ್ನೋ ಜಿಲ್ಲಾ ಕಾರಾಗೃಹದ ಜೈಲರ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ಅವರಿಗೆ ಸೆಪ್ಟೆಂಬರ್ 21, 2022 ರಂದು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತು.

ಪಂಜಾಬ್ ಜೈಲಿನಿಂದ ಯುಪಿಗೆ ರವಾನೆ: ಪಂಜಾಬ್‌ನ ರೋಪರ್ ಜೈಲಿನಿಂದ ಅನ್ಸಾರಿ ಅವರನ್ನು ಉತ್ತರಪ್ರದೇಶಕ್ಕೆ ಕರೆತರಲು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾ ಯಿತು. ಬಿಎಸ್‌ಪಿ ಶಾಸಕರಾಗಿದ್ದ ಅನ್ಸಾರಿ ಅವರನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 2019ರಲ್ಲಿ ರೋಪರ್ ಜೈಲಿನಲ್ಲಿ ಇರಿಸಲಾಗಿತ್ತು ಮತ್ತು ಎರಡು ವರ್ಷಕ್ಕೂ ಹೆಚ್ಚು ಕಾಲ ಅಲ್ಲಿ ಇದ್ದರು. ಮಾರ್ಚ್ 2021 ರಲ್ಲಿ ಅನ್ಸಾರಿ ಕಸ್ಟಡಿಯನ್ನು ಯುಪಿಗೆ ಹಸ್ತಾಂತರಿಸುವಂತೆ ಎಸ್‌ಸಿ ಪಂಜಾಬ್ ಸರ್ಕಾರಕ್ಕೆ ಆದೇಶಿಸಿತ್ತು.

2020 ರಿಂದ ಅನ್ಸಾರಿ ಗ್ಯಾಂಗ್ ಪೊಲೀಸರಿಂದ ನಿರಂತರ ದಾಳಿಗೆ ಸಿಲುಕಿದೆ. 608 ಕೋಟಿ ರೂ.ಮೌಲ್ಯದ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಅಥವಾ ನೆಲಸಮ ಮಾಡಿದ್ದಾರೆ. 215 ಕೋಟಿ ರೂ. ಹೆಚ್ಚು ಮೊತ್ತದ ಅಕ್ರಮ ವ್ಯವಹಾರ, ಗುತ್ತಿಗೆ ಅಥವಾ ಟೆಂಡರ್‌ಗಳನ್ನು ತಡೆಯಲಾಗಿದೆ.

2005 ಮೌ ಗಲಭೆ: 2005 ರ ಅಕ್ಟೋಬರ್‌ನಲ್ಲಿ ಮುಖ್ತರ್‌ ಭದ್ರಕೋಟೆ ಮತ್ತು ಕ್ಷೇತ್ರವಾದ ಮೌ ಪಟ್ಟಣದಲ್ಲಿ ನಡೆದ ಗಲಭೆಗಳು ಉತ್ತರಪ್ರದೇಶದ ಮುಖ್ಯಮಂತ್ರಿಯೊಂದಿಗೆ ಸಂಬಂಧ ಹೊಂದಿರುವ ಹಿಂದೂ ಯುವ ವಾಹಿನಿಯಿಂದ ಪ್ರಚೋದಿತವಾಗಿತ್ತು ಎಂಬುದಕ್ಕೆ ಸಾಕಷ್ಟು ದಾಖಲೆಯಿದೆ. ಆದರೆ, ಗಲಭೆಯ ಹೊಣೆಗಾರಿಕೆ ಅನ್ಸಾರಿ ಮೇಲೆ ಬಿದ್ದಿತು ಮತ್ತು ಈ ಸಂಬಂಧ ಅವರು ಮತ್ತು ಅವರ ಹಲವಾರು ಬೆಂಬಲಿಗರ ಮೇಲೆ ಹಲವು ಪ್ರಕರಣಗಳು ದಾಖಲಾದವು.

ಹಿಂದಿ ಸುದ್ದಿ ವಾಹಿನಿಗಳು ಅನ್ಸಾರಿ ಶಸ್ತ್ರಸಜ್ಜಿತ ವಾಹನದ ಮೇಲೆ ಕುಳಿತು ಗಲಭೆಕೋರರನ್ನು ಪ್ರಚೋದಿಸಲು ತಿರುಗಾಡುತ್ತಿದ್ದಾರೆ ಎಂಬ ವಿಡಿಯೋ ಪ್ರಸಾರ ಮಾಡಿದವು. ಆಡಿಯೋ ಇಲ್ಲದ ಈ ವಿಡಿಯೋಗೆ ಪ್ರತಿಯಾಗಿ ಅನ್ಸಾರಿ ತಂಡ ಧ್ವನಿಸಹಿತ ಎಡಿಟ್ ಮಾಡದ ವಿಡಿಯೋ ಬಿಡುಗಡೆ ಮಾಡಿತು. ಅದರಲ್ಲಿ ಅನ್ಸಾರಿ, ಆಕ್ರೋಶಗೊಂಡ ಜನರಿಗೆ ಮನೆಗೆ ತೆರಳಬೇಕೆಂದು ಮನವಿ ಮಾಡುತ್ತಿರುವುದು ಕಂಡುಬಂತು. ಮುಜುಗರಕ್ಕೊಳಗಾದ ಸ್ಥಳೀಯ ಆಡಳಿತ, ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಅನ್ಸಾರಿಯವರ ಸಹಾಯ ವನ್ನು ಕೋರಲಾಗಿದೆ ಎಂದು ಆನಂತರ ಒಪ್ಪಿಕೊಂಡಿತು. ಆದರೆ, ಗಲಭೆಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ, ಅನ್ಸಾರಿ ಅವರಿಗೆ ಸಹಾಯ ಮಾಡಲಿಲ್ಲ.

ಗಲಭೆ ನಂತರ ಮೌಗೆ ಭೇಟಿ ನೀಡಿದ ವಿವಿಧ ಸತ್ಯಶೋಧನಾ ತಂಡಗಳು ಅನ್ಸಾರಿ ಪಾತ್ರದ ಬಗ್ಗೆ ಬೇರೆಯದೇ ವಿವರಣೆ ನೀಡುತ್ತವೆ.

Read More
Next Story