ಮಧ್ಯಪ್ರದೇಶದಲ್ಲಿ ಲಾಕ್‌ಅಪ್‌ ಸಾವು; ಮೂವರು ಪೊಲೀಸರು ಅಮಾನತು
x

ಮಧ್ಯಪ್ರದೇಶದಲ್ಲಿ ಲಾಕ್‌ಅಪ್‌ ಸಾವು; ಮೂವರು ಪೊಲೀಸರು ಅಮಾನತು

ಮೃತ ವ್ಯಕ್ತಿ ದಲಿತ ಸಮುದಾಯದವರು. ಪೊಲೀಸರು ಪರಿಶಿಷ್ಟ ಜಾತಿ- ಸಮುದಾಯಗಳ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.


ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೊಲೀಸ್ ಲಾಕ್‌ಅಪ್‌ನಲ್ಲಿ ಕೊಲೆ ಪ್ರಕರಣವೊಂದರ ಆರೋಪಿ(31) ಭಾನುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಆದರೆ, ಮೃತ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದವರು. ಪೊಲೀಸರು ಪರಿಶಿಷ್ಟ ಜಾತಿ- ಸಮುದಾಯಗಳ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಬಾಲಕೃಷ್ಣ ಜಾತವ್ ಅಲಿಯಾಸ್ ಸನ್ನಿ ಅವರ ಶವ ಬೆಳಗ್ಗೆ 5.30ರ ಸುಮಾರಿಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಲಾಕ್‌ಅಪ್‌ನಲ್ಲಿ ಬಟ್ಟೆ ಯಿಂದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಭೂಪೇಂದ್ರ ಸಿಂಗ್ ಕುಶ್ವಾಹಾ ಹೇಳಿ ದ್ದಾರೆ. ಗ್ವಾಲಿಯರ್ ಮೂಲದ ಸನ್ನಿಯನ್ನು ಕಳೆದ ಡಿಸೆಂಬರ್‌ನಲ್ಲಿ ಸೋದರ ಮಾವನನ್ನು ಕೊಂದ ಆರೋಪದ ಮೇಲೆ ಶನಿವಾರ ಬಂಧಿಸಲಾಗಿತ್ತು.

ಆದರೆ, ನಾಲ್ಕು ದಿನಗಳ ಹಿಂದೆಯೇ ಸನ್ನಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಸನ್ನಿ ಕುಟುಂಬದ ಸದಸ್ಯರು ಹೇಳಿದ್ದಾರೆ.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್, ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ರಾಮಬಾಬು ಯಾದವ್, ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ ನ್ನು ಅಮಾನತುಗೊಳಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಅರವಿಂದ್ ಠಾಕೂರ್ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಮ್ಯಾಜಿಸ್ಟ್ರೇಟ್ ತನಿಖೆ ನಡೆಯಲಿದೆ ಎಂದು ಠಾಕೂರ್ ಹೇಳಿದರು.

ಮೃತರ ಶವಪರೀಕ್ಷೆ ಬಳಿಕ ಸಾಕ್ಷ್ಯಾಧಾರಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸನ್ನಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕೈದು ಪ್ರಕರಣಗಳು ದಾಖಲಾಗಿದ್ದು, ಕ್ರಿಮಿನಲ್ ದಾಖಲೆ ಹೊಂದಿದ್ದಾರೆ ಎಂದು ಠಾಕೂರ್ ಹೇಳಿದರು.

ವರಿಷ್ಠಾಧಿಕಾರಿ ವಜಾಕ್ಕೆ ಆಗ್ರಹ: ಘಟನೆಗೆ ಸಂಬಂಧಿಸಿದಂತೆ ಮೊರೆನಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಸಂಸದ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ, ʻದಲಿತನಾಗಿರುವುದು ಅಪರಾಧವೇ? ಕತ್ನಿ ಪ್ರಕರಣದ ಬಳಿಕ ಮತ್ತೊಬ್ಬ ದಲಿತ ಪೊಲೀಸರಿಗೆ ಬಲಿಯಾಗಿದ್ದಾನೆ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ಕತ್ನಿಯಲ್ಲಿ ದಲಿತ ಮಹಿಳೆ ಮತ್ತು ಆಕೆಯ ಮೊಮ್ಮಗನನ್ನು ಪೊಲೀಸರು ಥಳಿಸಿರುವ ವಿಡಿಯೋ ವೈರಲ್ ಆಗಿತ್ತು. ಆನಂತರ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಯಿತು.

ʻಮೊರೆನಾ ಎಸ್ಪಿಯನ್ನು ವಜಾ ಮತ್ತು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸದಿದ್ದರೆ, ಅನಿರ್ದಿಷ್ಟಾವಧಿ ನಿರಶನ ನಡೆಸಲಾಗುವುದು,ʼ ಎಂದು ಪಟ್ವಾರಿ ಹೇಳಿದ್ದಾರೆ.

ಸನ್ನಿ ಕುಟುಂಬ ಮತ್ತು ಪರಿಚಯಸ್ಥರು ಪ್ರತಿಭಟನೆ ನಡೆಸಿದ್ದರಿಂದ, ಪೊಲೀಸ್ ಠಾಣೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

Read More
Next Story