
ಕರ್ನಲ್ ಸೋಫಿಯಾ ಖುರೇಷಿ
Operation Sindoor | ಕರ್ನಲ್ ಸೋಫಿಯಾ ಖುರೇಷಿ ʼಉಗ್ರರ ಸಹೋದರಿʼ ಹೇಳಿಕೆ; ಕ್ಷಮೆಯಾಚಿಸಿದ ಬಿಜೆಪಿ ನಾಯಕ
ಕರ್ನಲ್ ಸೋಫಿಯಾ ಖುರೇಷಿ ಉಗ್ರರ ಸಹೋದರಿ ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ವಿಜಯ್ ಶಾ ಅವರು, ನಾನು 10 ಬಾರಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ʼಆಪರೇಷನ್ ಸಿಂದೂರ್ʼ ಕಾರ್ಯಾಚರಣೆ ರೂವಾರಿ ಕರ್ನಲ್ ಸೋಫಿಯಾ ಖುರೇಶಿ ಅವರನ್ನು ʼಉಗ್ರರ ಸಹೋದರಿʼ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡುವಂತೆ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.
ಮೇ 12ರಂದು ಇಂದೋರ್ ಸಮೀಪದ ರಾಮಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್ ಶಾ, 'ಆಪರೇಷನ್ ಸಿಂದೂರ್' ಕಾರ್ಯಾಚರಣೆ ಕುರಿತು ವಿವರಿಸುವಾಗ ಕರ್ನಲ್ ಸೋಫಿಯಾ ಖುರೇಶಿ ಅವರನ್ನು "ಉಗ್ರರ ಸಹೋದರಿ" ಎಂದು ಕರೆದಿದ್ದರು.
"ಪಹಲ್ಗಾಮ್ ದಾಳಿಯಲ್ಲಿ ನಮ್ಮ ಸಹೋದರಿಯರ ಸಿಂಧೂರವನ್ನು ಒರಸಿ ಹಾಕಿದ ಉಗ್ರರ ವಿರುದ್ಧ ಪ್ರತೀಕಾರವಾಗಿ, ಪ್ರಧಾನಿ ಮೋದಿ ಅವರು ಅವರ ಉಗ್ರರ ಸಹೋದರಿಯನ್ನು (ಸೋಫಿಯಾ ಖುರೇಶಿ) ಸೇನೆಯ ವಿಮಾನದಲ್ಲಿ ಕಳುಹಿಸಿ, ಉಗ್ರರ ಮನೆಯಲ್ಲಿ ದಾಳಿ ಮಾಡಿಸಿದರು" ಎಂದು ಶಾ ಹೇಳಿದ್ದರು. ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.
ಸಚಿವ ಕ್ಷಮೆಯಾಚನೆ
ತಮ್ಮ ಹೇಳಿಕೆ ಟೀಕೆಗೆ ಒಳಗಾಗುತ್ತಿದ್ದಂತೆ ವಿಜಯ್ ಶಾ ಕ್ಷಮೆ ಯಾಚಿಸಿದ್ದಾರೆ. "ನಾನು ದೇವನಲ್ಲ, ಮಾನವ. ಪಹಲ್ಗಾಮ್ ದಾಳಿಯ ಬಗ್ಗೆ ಮನಸ್ಸು ಕ್ಷುಬ್ಧವಾಗಿತ್ತು. ನನ್ನ ಕುಟುಂಬದಲ್ಲಿ ಅನೇಕರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಲವರು ಹುತಾತ್ಮರಾಗಿದ್ದಾರೆ. ಕರ್ನಲ್ ಸೋಫಿಯಾ ಖುರೇಶಿ ಅವರು ಜಾತಿ ಮತ್ತು ಧರ್ಮವನ್ನು ಮೀರಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ನನ್ನ ಸಹೋದರಿಗಿಂತ ಹೆಚ್ಚಿನ ಗೌರವವಿದೆ. ನನ್ನ ಮಾತುಗಳಿಂದ ಸಮಾಜ ಅಥವಾ ಧರ್ಮಕ್ಕೆ ನೋವಾಗಿದ್ದರೆ ನಾನು ಹತ್ತು ಬಾರಿ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.
ಮಹಿಳೆಯರ ಘನತೆಯ ಮೇಲಿನ ದಾಳಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಾ ಅವರ ಹೇಳಿಕೆಯನ್ನು "ಅವಮಾನಕರ, ನಾಚಿಕೆಗೇಡಿನ ಮತ್ತು ಕೀಳು" ಎಂದು ಖಂಡಿಸಿದ್ದಾರೆ. "ಪಹಲ್ಗಾಮ್ ಉಗ್ರರು ದೇಶವನ್ನು ವಿಭಜಿಸಲು ಬಯಸಿದ್ದರು. ಆದರೆ 'ಆಪರೇಷನ್ ಸಿಂದೂರ್' ಸಮಯದಲ್ಲಿ ಇಡೀ ದೇಶ ಒಗ್ಗಟ್ಟಾಗಿ ಉಗ್ರರಿಗೆ ತಕ್ಕ ಪ್ರತೀಕಾರ ಕೊಟ್ಟಿತ್ತು. ಆದರೆ ಬಿಜೆಪಿ ಸರ್ಕಾರದ ಸಚಿವರೊಬ್ಬರು ನಮ್ಮ ಧೀರ ಮಗಳು ಕರ್ನಲ್ ಸೋಫಿಯಾ ಖುರೇಶಿ ಬಗ್ಗೆ ಇಂತಹ ಕೀಳು ಹೇಳಿಕೆ ನೀಡಿದ್ದಾರೆ" ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಶಾ ಅವರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ಬಿಜೆಪಿ ಈ "ಕೀಳು ಚಿಂತನೆ"ಯನ್ನು ಸಮರ್ಥಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. "ಮೊದಲು ಪಹಲ್ಗಾಮ್‌ನಲ್ಲಿ ಹುತಾತ್ಮರಾದ ನೌಕಾಪಡೆ ಅಧಿಕಾರಿಯ ಪತ್ನಿಯನ್ನು ಟೀಕಿಸಲಾಯಿತು. ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ ಮಗಳಿಗೆ ಕಿರುಕುಳ ನೀಡಲಾಯಿತು. ಈಗ ಬಿಜೆಪಿ ಸಚಿವರು ನಮ್ಮ ಧೀರ ಮಹಿಳೆ ಸೋಫಿಯಾ ಖುರೇಶಿ ಬಗ್ಗೆ ಅಸಭ್ಯ ಹೇಳಿಕೆ ನೀಡುತ್ತಿದ್ದಾರೆ. ಇದು ಮಹಿಳೆಯರ ಘನತೆಯ ಮೇಲಿನ ದಾಳಿಯಾಗಿದೆ" ಎಂದು ಪಟ್ವಾರಿ ಕಿಡಿಕಾರಿದ್ದಾರೆ.
ಪಕ್ಷದಿಂದ ಎಚ್ಚರಿಕೆ
ವಿವಾದದ ಬಳಿಕ, ಬಿಜೆಪಿಯ ಮಧ್ಯಪ್ರದೇಶ ಪ್ರಧಾನ ಕಾರ್ಯದರ್ಶಿ ಹಿತಾನಂದ ಶರ್ಮಾ ಅವರು ವಿಜಯ್ ಶಾ ಅವರನ್ನು ಭೋಪಾಲ್‌ನ ರಾಜ್ಯ ಕೇಂದ್ರ ಕಚೇರಿಗೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ದತ್ ಶರ್ಮಾ ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಶಾ ಅವರ ಬಂಗಲೆಯ ನಾಮಫಲಕಕ್ಕೆ ಮಸಿ ಬಳಿದು, ರಾಜೀನಾಮೆಗೆ ಒತ್ತಾಯಿಸಿದ್ದಾರೆ.