ಮಾನ್ಸೂನ್ ಕೇರಳಕ್ಕೆ ಆಗಮನ; 2009ರ ನಂತರ ಅತಿ ಬೇಗನೆ ಮಳೆಗಾಲ ಶುರು
x

ಮಾನ್ಸೂನ್ ಕೇರಳಕ್ಕೆ ಆಗಮನ; 2009ರ ನಂತರ ಅತಿ ಬೇಗನೆ ಮಳೆಗಾಲ ಶುರು

ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 1ರ ಸುಮಾರಿಗೆ ಕೇರಳವನ್ನು ತಲುಪಿ, ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತಿತ್ತು.


ಮುಂಗಾರುಪೂರ್ವ ಮಳೆಯ ಗುಂಗಿನಲ್ಲಿದ್ದ ಕರ್ನಾಟಕದ ಜನರಿಗೆ ಮಳೆ ಮುಂದುವರಿಕೆಯ ಮತ್ತೊಂದು ಸೂಚನೆ ದೊರಕಿದೆ. ನೈಋತ್ಯ ಮಾನ್ಸೂನ್ ಮಾರುತ ಶನಿವಾರ ಕೇರಳವನ್ನು ಪ್ರವೇಶಿಸಿದ್ದು ಇನ್ನೆರಡು ದಿನಗಳಲ್ಲಿ ಕರ್ನಾಟಕದ ಕರಾವಳಿಗೆ ಅಪ್ಪಳಿಸಲಿದೆ. 2009ರಲ್ಲಿ ಮೇ23ರಂದು ಮಳೆಗಾಲ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾರತದ ಭೂಪ್ರದೇಶಗಳು ನಿಗದಿತ ದಿನಾಂಕಕ್ಕಿಂತ ಮೊದಲೇ ಮಳೆಯನ್ನು ಪಡೆಯುತ್ತಿದೆ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 1ರ ಸುಮಾರಿಗೆ ಕೇರಳವನ್ನು ತಲುಪಿ, ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತಿತ್ತು. ಸೆಪ್ಟೆಂಬರ್ 17ರಿಂದ ವಾಯವ್ಯ ಭಾರತದಿಂದ ಹಿಂದಕ್ಕೆ ಸರಿಯಲು ಆರಂಭಿಸಿ ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಮಳೆ ಕೊನೆಗೊಳ್ಳುತ್ತಿತ್ತು.

ಕಳೆದ ವರ್ಷಗಳ ಮಾನ್ಸೂನ್ ಆಗಮನದ ದಿನಾಂಕಗಳು

ಹವಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಮಾನ್ಸೂನ್ ಮೇ 30ರಂದು ಕೇರಳವನ್ನು ತಲುಪಿತ್ತು; 2023ರಲ್ಲಿ ಜೂನ್ 8, 2022ರಲ್ಲಿ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8 ಮತ್ತು 2018ರಲ್ಲಿ ಮೇ 29ರಂದು ಮುಂಗಾರು ಮಳೆ ಶುರುವಾಗಿತ್ತು

ಆಗಮನದ ದಿನಾಂಕ ಮತ್ತು ಮಳೆಯ ಪ್ರಮಾಣಕ್ಕೆ ಸಂಬಂಧವಿಲ್ಲ

ಹವಾಮಾನ ತಜ್ಞರ ಪ್ರಕಾರ, ಮಾನ್ಸೂನ್ ಮಾರುತದ ಬರುವ ದಿನಾಂಕ ಮತ್ತು ಆ ಋತುವಿನಲ್ಲಿ ದೇಶದಾದ್ಯಂತ ಬೀಳುವ ಮಳೆಯ ಪ್ರಮಾಣದ ನಡುವೆ ನೇರ ಸಂಬಂಧವಿಲ್ಲ. ಕೇರಳದಲ್ಲಿ ಮಾನ್ಸೂನ್ ಬೇಗನೆ ಆಗಮಿಸಿದರೂ ಅಥವಾ ತಡವಾಗಿ ಆಗಮಿಸಿದರೂ, ಅದು ದೇಶದ ಇತರ ಭಾಗಗಳನ್ನು ಒಂದೇ ರೀತಿಯಲ್ಲಿ ಆವರಿಸುತ್ತದೆ ಎಂದು ಅರ್ಥವಲ್ಲ. ಮಾನ್ಸೂನ್ ದೊಡ್ಡ ಪ್ರಮಾಣದ ವ್ಯತ್ಯಾಸಗಳಿಂದ ಕೂಡಿದ್ದು. ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ಹವಾಮಾನ ಲಕ್ಷಣಗಳನ್ನು ಒಳಗೊಂಡಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2025ರ ಮಾನ್ಸೂನ್ ಮುನ್ಸೂಚನೆ

ಹವಾಮಾನ ಇಲಾಖೆಯು 2025ರ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಸಂಚಿತ ಮಳೆಯಾಗುವ ಸಾಧ್ಯತೆಯನ್ನುಯನ್ನು ಕಳೆ ಏಪ್ರಿಲ್​ನಲ್ಲಿ ಹೇಳಿತ್ತು. ಭಾರತೀಯ ಉಪಖಂಡದಲ್ಲಿ ಕಡಿಮೆ ಮಳೆಗೆ ಕಾರಣವಾಗುವ ಎಲ್ ನಿನೋ (El Nino) ಪರಿಸ್ಥಿತಿಗಳ ಸಾಧ್ಯತೆಯನ್ನು ತಳ್ಳಿ ಹಾಕಿತ್ತು.

2025ರ ಮಾನ್ಸೂನ್ ಕೇರಳಕ್ಕೆ ಆರಂಭಿಕವಾಗಿ ಆಗಮಿಸಿದ್ದು, ದೇಶದಾದ್ಯಂತ ಮಳೆಯ ವಿತರಣೆಯ ಮೇಲೆ ಮುಂದಿನ ದಿನಗಳಲ್ಲಿ ಗಮನ ಕೇಂದ್ರೀಕರಿಸಲಾಗಿದೆ.

Read More
Next Story