
ಎರಡು ಪೀರಿಯಡ್ ಗಣಿತ ಪಾಠದಂತಿತ್ತು ಮೋದಿ ಭಾಷಣ: ಪ್ರಿಯಾಂಕಾ ವ್ಯಂಗ್ಯ
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ 11 ನಿರ್ಣಯಗಳು ಬರೀ ಟೊಳ್ಳು. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇದ್ದರೆ, ಅದಾನಿ ಗ್ರೂಪ್ ವಂಚನೆ ಪ್ರಕರಣದ ಚರ್ಚೆಗೆ ಬಿಜೆಪಿ ಏಕೆ ಒಪ್ಪುತ್ತಿಲ್ಲ ಎಂದು ಕಾಂಗ್ರೆಸ್ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 110 ನಿಮಿಷಗಳ ಭಾಷಣ ಶಾಲೆಯಲ್ಲಿ ʼಎರಡು ಪೀರಿಯಡ್‌ನ ಗಣಿತ ಪಾಠʼ ಕೇಳಿದಂತೆ ಬೇಸರ ತರಿಸುವಂತಿತ್ತು ಎಂದು ಕಾಂಗ್ರೆಸ್ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದ್ದಾರೆ.
ಶನಿವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ 11 ನಿರ್ಣಯಗಳು ಬರೀ ಟೊಳ್ಳು. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇದ್ದರೆ, ಅದಾನಿ ಗ್ರೂಪ್ ವಂಚನೆ ಪ್ರಕರಣದ ಚರ್ಚೆಗೆ ಬಿಜೆಪಿ ಏಕೆ ಒಪ್ಪುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಭಾಷಣದ ಕುರಿತು ಪ್ರತಿಕ್ರಿಯಿಸಿರುವ ಅವರು, ಪ್ರಧಾನಿಯವರು ಹೊಸ ವಿಷಯವೇನೂ ಮಾತನಾಡಿಲ್ಲ. ಅವರ ಭಾಷಣ ನನ್ನನ್ನು ದಶಕಗಳ ಹಿಂದಕ್ಕೆ ಕೊಂಡೊಯ್ದಿದೆ. ಗಣಿತದ ಆ ಡಬಲ್ ಪೀರಿಯಡ್‌ನಲ್ಲಿ ಕುಳಿತು ಪಾಠ ಕೇಳುತ್ತಿದ್ದೇನೆ ಅನಿಸಿತು. ಜೆಪಿ ನಡ್ಡಾ ಅವರು ಅಸಹಾಯಕರಾಗಿ ಕೈಗಳನ್ನು ಹೊಸಕಿಕೊಳ್ಳುತ್ತಿದ್ದರು. ಆದರೆ, ಮೋದಿ ಅವರ ದೃಷ್ಟಿ ಬೀಳುತ್ತಿದ್ದಂತೆ ಗಮನವಿಟ್ಟು ಕೇಳುತ್ತಿರುವಂತೆ ವರ್ತಿಸಿದರು. ಇತ್ತ ಅಮಿತ್ ಶಾ ಕೂಡ ತಲೆಯ ಮೇಲೆ ಕೈ ಇಟ್ಟುಕೊಂಡಿದ್ದರು. ಪಿಯೂಷ್ ಗೋಯಲ್ ನಿದ್ರೆಗೆ ಜಾರಿದ್ದರು. ಇದು ಸಂಸತ್ತಿನಲ್ಲಿ ನನಗಾದ ಹೊಸ ಅನುಭವ. ಪ್ರಧಾನಿಯವರು ಏನಾದರೂ ಹೊಸ ವಿಷಯ ಹೇಳುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಅವರು ಹೇಳಿದ್ದೆಲ್ಲವೂ ಬರೀ ಟೊಳ್ಳು ವಿಷಯಗಳು ಎಂದು ಟೀಕಿಸಿದ್ದಾರೆ.
ಸಂವಿಧಾನ ಅಂಗೀಕಾರವಾಗಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು, ʼರಕ್ತದ ರುಚಿʼ ಅನುಭವಿಸಿದ ಕಾಂಗ್ರೆಸ್ ಸಂವಿಧಾನವನ್ನು ಪದೇ ಪದೇ ಗಾಯಗೊಳಿಸುತ್ತಿದೆ. ಆದರೆ, ನಾವು 2014 ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯುಪಿಎ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳನ್ನು ಬದಲಿಸಿದೆವು. ಸಂವಿಧಾನದ ಆಶಯದಂತೆ ಭಾರತವನ್ನು ಮುನ್ನಡೆಸುತ್ತಿದ್ದೇವೆ ಎಂದು ಹೇಳಿದ್ದರು.
ಹಿಂದಿನ ಕಾಂಗ್ರೆಸ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಮೋದಿ, ದೇಶದ ವೈವಿಧ್ಯತೆಯಲ್ಲಿ ವಿಷ ಬೀಜಗಳನ್ನು ನೆಟ್ಟು, ಏಕತೆಯನ್ನು ಹಾಳು ಮಾಡಿತ್ತು ಎಂದು ಆರೋಪಿಸಿದ್ದರು.