
ಉಕ್ರೇನ್‌ಗೆ ಪ್ರಧಾನಿ ಭೇಟಿ ಆಗಸ್ಟ್‌ನಲ್ಲಿ
ಪ್ರಧಾನಿ ಮೋದಿ ಅವರು ಕಳೆದ ತಿಂಗಳು ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದರು
ರಷ್ಯಾ 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ನಲ್ಲಿ ಉಕ್ರೇನಿಗೆ ಭೇಟಿ ನೀಡಲಿದ್ದಾರೆ.
ಕಳೆದ ತಿಂಗಳು ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿಯಾಗಿದ್ದರು; ಪರಸ್ಪರ ಆಲಿಂಗಿಸಿಕೊಂಡಿದ್ದರು. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ ಅಭಿನಂದಿಸಿದ್ದ ಝೆಲೆನ್ಸ್ಕಿ, ಉಕ್ರೇನಿಗೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಭಾರತ-ಉಕ್ರೇನ್ ಸಂಬಂಧ: ಈ ಮಾರ್ಚ್‌ನಲ್ಲಿ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಮೋದಿ ಅವರು ಭಾರತ-ಉಕ್ರೇನ್ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದರು. ಸಂಘರ್ಷದ ಪರಿಹಾರಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕ ತೆಯ ಅಗತ್ಯವನ್ನು ಪುನರುಚ್ಚರಿಸಿದರು. ಶಾಂತಿಯುತ ಪರಿಹಾರವನ್ನು ಭಾರತ ಬೆಂಬಲಿಸಲಿದ್ದು, ಅಗತ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ಹೇಳಿದ್ದರು.
ಮೋದಿ ಅವರು ತಿಂಗಳ ಆರಂಭದಲ್ಲಿ ಮಾಸ್ಕೋಗೆ ಎರಡು ದಿನಗಳ ಭೇಟಿ ನೀಡಿದ್ದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಮಾತುಕತೆ ವೇಳೆ, ಹಿಂಸೆಗೆ ಪರಿಹಾರ ಯುದ್ಧಭೂಮಿಯಲ್ಲಿ ಸಿಗುವುದಿಲ್ಲ ಎಂದು ಹೇಳಿದ್ದರು. ʻಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಸೇರಿದಂತೆ ವಿಶ್ವಸಂಸ್ಥೆಯ ಒಪ್ಪಂದವನ್ನು ಗೌರವಿಸಬೇಕು. ಯುದ್ಧಭೂಮಿ ಯಾವುದೇ ಪರಿಹಾರ ನೀಡುವುದಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆಯೊಂದೇ ಉಳಿದ ದಾರಿ,ʼ ಎಂದು ಹೇಳಿದ್ದರು.