ಮೋದಿ-ಪುಟಿನ್ ಶೃಂಗಸಭೆ: ಆರ್ಥಿಕ ಕಾರ್ಯಸೂಚಿ, ಉಕ್ರೇನ್ ಸಂಘರ್ಷ ಮಾತುಕತೆಯ ಕೇಂದ್ರಬಿಂದು
x

ಮೋದಿ-ಪುಟಿನ್ ಶೃಂಗಸಭೆ: ಆರ್ಥಿಕ ಕಾರ್ಯಸೂಚಿ, ಉಕ್ರೇನ್ ಸಂಘರ್ಷ ಮಾತುಕತೆಯ ಕೇಂದ್ರಬಿಂದು

22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು 2 ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಇಂಧನ, ವ್ಯಾಪಾರ, ಉತ್ಪಾದನೆ ಮತ್ತು ರಸಗೊಬ್ಬರ ಕ್ಷೇತ್ರಗಳಲ್ಲಿ ಎರಡು ದೇಶಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವುದು ಮಾತುಕತೆಗಳ ಕೇಂದ್ರಬಿಂದು ಆಗಿರುವ ನಿರೀಕ್ಷೆ ಇದೆ.


ಇಂಧನ, ವ್ಯಾಪಾರ, ಉತ್ಪಾದನೆ ಮತ್ತು ರಸಗೊಬ್ಬರ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವುದು ಮಾಸ್ಕೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಶೃಂಗಸಭೆಯ ಮಾತುಕತೆಗಳ ಕೇಂದ್ರಬಿಂದು ಆಗಿರುವ ನಿರೀಕ್ಷೆ ಇದೆ.

ಉಕ್ರೇನ್‌ ಯುದ್ಧಕ್ಕೆ ಯಾವುದೇ ಪರಿಹಾರ ಸಿಗದ ಕಾರಣ ಸಂಘರ್ಷವನ್ನು ಬಗೆಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಮಾರ್ಗ ಎಂದು ಭಾರತ ತನ್ನ ನಿಲುವನ್ನು ಪುನರುಚ್ಚರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

2 ದಿನಗಳ ವಾರ್ಷಿಕ ಶೃಂಗಸಭೆ: ಉಕ್ರೇನ್‌ ಮೇಲೆ ಮಾಸ್ಕೋ ಆಕ್ರಮಣ ನಡೆಸಿದ ನಂತರದ ಮೊದಲ ಪ್ರವಾಸ ಇದಾಗಿದೆ. 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ಪ್ರಧಾನಿ ಮೋದಿ ಸೋಮವಾರ ಆಗಮಿಸಿದರು. ಸೋಮವಾರ ರಾತ್ರಿ ರಷ್ಯಾದ ಅಧ್ಯಕ್ಷರು ಮಾಸ್ಕೋದ ಹೊರ ವಲಯದಲ್ಲಿರುವ ನೊವೊ-ಒಗರೆವೊದಲ್ಲಿನ ನಿವಾಸದಲ್ಲಿ ಭಾರತೀಯ ಪ್ರಧಾನಿಗೆ ಖಾಸಗಿ ಔತಣಕೂಟ ಏರ್ಪಡಿಸಿದ್ದರು.

ಪ್ರಧಾನ ಮಂತ್ರಿಯವರ ಭೇಟಿಯು ಆರ್ಥಿಕ ಕಾರ್ಯಸೂಚಿಯನ್ನು, ವಿಶೇಷವಾಗಿ, ಇಂಧನ, ವ್ಯಾಪಾರ, ಉತ್ಪಾದನೆ ಮತ್ತು ರಸಗೊಬ್ಬರಗಳ ಕ್ಷೇತ್ರಗಳಲ್ಲಿ ಮುನ್ನಡೆಸುವ ಉದ್ಧೇಶ ಹೊಂದಿದೆ.

ಮಾಸ್ಕೋಗೆ ಬಂದಿಳಿದ ಸ್ವಲ್ಪ ಸಮಯದ ನಂತರ ಮೋದಿ ಅವರು, ಭವಿಷ್ಯದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ದೃಢಗೊಳಿಸುವಿಕೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಭಾರತ ಮತ್ತು ರಷ್ಯಾ ನಡುವಿನ ದೃಢ ಬಾಂಧವ್ಯ ʻನಮ್ಮ ಜನರಿಗೆ ಹೆಚ್ಚು ಪ್ರಯೋಜನ ನೀಡುತ್ತದೆʼ ಎಂದರು.

ಭಾರತದ ಸಹಾಯ: ಶಾಂತಿಯುತ ಮತ್ತು ಸ್ಥಿರವಾದ ಪ್ರದೇಶಕ್ಕಾಗಿ ಭಾರತ ʻಸಹಾಯಕ ಪಾತ್ರʼವನ್ನು ವಹಿಸಲು ಬಯಸುತ್ತದೆ ಎಂದು ಪ್ರಧಾನಿ ಉಕ್ರೇನ್ ಘರ್ಷಣೆಯನ್ನು ಉಲ್ಲೇಖಿಸದೆ ಹೇಳಿದ್ದಾರೆ.

ರಷ್ಯಾದ ಸೇನೆಗೆ ಭಾರತೀಯರನ್ನು ಸಹಾಯಕ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳುವುದನ್ನು ಕೊನೆಗೊಳಿಸುವುದು ಮತ್ತು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಭಾರತಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಇದು 2019 ರ ನಂತರ ಮೋದಿಯವರ ಮೊದಲ ರಷ್ಯಾ ಪ್ರವಾಸ. ಫೆಬ್ರವರಿ 2022 ರಲ್ಲಿ ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರ ಮತ್ತು ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದ ನಂತರ ಮೊದಲನೆಯದು.

ಕಾರ್ಯತಂತ್ರ ಪಾಲುದಾರಿಕೆ: ಇಂಧನ, ರಕ್ಷಣೆ, ವ್ಯಾಪಾರ, ಹೂಡಿಕೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜನರಿಂದ ಜನರ ವಿನಿಮಯ ಕ್ಷೇತ್ರಗಳನ್ನು ಒಳಗೊಂಡಂತೆ ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆಯು ಕಳೆದ 10 ವರ್ಷಗಳಲ್ಲಿ ಮುಂದುವರಿದಿದೆ ಎಂದು ಮೋದಿ ಹೇಳಿದರು.

ʻಸ್ನೇಹಿತ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಲು ನಾನು ಎದುರು ನೋಡುತ್ತಿದ್ದೇನೆ ಮತ್ತು ವಿವಿಧ ಪ್ರಾದೇಶಿಕ-ಜಾಗತಿಕ ವಿಷಯಗಳ ಬಗ್ಗೆ ದೃಷ್ಟಿಕೋನಗಳನ್ನು ಹಂಚಿಕೊಳ್ಳುತ್ತೇನೆʼ ಎಂದು ಹೇಳಿದರು.

ನವ ದೆಹಲಿಯು ರಷ್ಯಾದೊಂದಿಗೆ ಪಾಲುದಾರಿಕೆಯನ್ನು ಮತ್ತು ಉಕ್ರೇನ್ ಸಂಘರ್ಷದ ಹೊರತಾಗಿಯೂ ಸೌಹಾರ್ದ ಸಂಬಂಧ ಉಳಿಸಿಕೊಂಡಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಭಾರತವು ಇನ್ನೂ ಖಂಡಿಸಿಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಸಂಘರ್ಷವನ್ನು ಪರಿಹರಿಸಬೇಕೆ ಎಂದು ನಿಲುವು ತಳೆದಿದೆ.

ಅತ್ಯುನ್ನತ ಸಾಂಸ್ಥಿಕ ಸಂವಾದ: ಭಾರತದ ಪ್ರಧಾನಿ ಮತ್ತು ರಷ್ಯಾ ಅಧ್ಯಕ್ಷರ ನಡುವಿನ ವಾರ್ಷಿಕ ಶೃಂಗಸಭೆಯು ಉಭಯ ದೇಶಗಳ ನಡುವಿನ ಪಾಲುದಾರಿಕೆಯಲ್ಲಿ ಅತ್ಯುನ್ನತ ಸ್ಥಾನ ಹೊಂದಿದೆ. ವಾರ್ಷಿಕ ಶೃಂಗಸಭೆಗಳು ಭಾರತ ಮತ್ತು ರಷ್ಯಾದಲ್ಲಿ ನಡೆಯುತ್ತವೆ. ಕೊನೆಯ ಶೃಂಗಸಭೆ ಡಿಸೆಂಬರ್ 6, 2021 ರಂದು ನವದೆಹಲಿಯಲ್ಲಿ ನಡೆಯಿತು.ಆಗ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಶೃಂಗ ಸಭೆಯಲ್ಲಿ 28 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಸೆಪ್ಟೆಂಬರ್ 16, 2022 ರಂದು ಉಜ್ಬೆಕಿಸ್ತಾನದ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಕ್ರೇನ್‌ನಲ್ಲಿ ಸಂಘರ್ಷವನ್ನು ಕೊನೆಗೊಳಿಸುವಂತೆ ಪುಟಿನ್ ಅವರನ್ನು ಒತ್ತಾಯಿಸಿದರು. ʻಇದು ಯುದ್ಧದ ಯುಗವಲ್ಲʼ ಎಂದು ಹೇಳಿದರು.

Read More
Next Story