ಎನ್‌ಡಿಎ ಸರ್ಕಾರ ಯಾವಾಗ ಬೇಕಾದರೂ ಪತನದ ಸಾಧ್ಯತೆ: ಮಲ್ಲಿಕಾರ್ಜುನ ಖರ್ಗೆ
x

ಎನ್‌ಡಿಎ ಸರ್ಕಾರ ಯಾವಾಗ ಬೇಕಾದರೂ ಪತನದ ಸಾಧ್ಯತೆ: ಮಲ್ಲಿಕಾರ್ಜುನ ಖರ್ಗೆ


ʻಎನ್‌ಡಿಎ ಸರ್ಕಾರ(NDA government) ತಪ್ಪಿನಿಂದ ರಚನೆಯಾಗಿದ್ದು,ಯಾವಾಗ ಬೇಕಾದರೂ ಬೀಳಬಹುದು. ಇದು ಅಲ್ಪಮತದ ಸರ್ಕಾರ. ಮೋದಿ ಅವರಿಗೆ ಜನಾದೇಶವಿಲ್ಲ,ʼ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನ ಗಳಿಸಿದೆ. ಮಿತ್ರಪಕ್ಷಗಳೊಂದಿಗೆ ಸರ್ಕಾರ ರಚಿಸಿದೆ.

ಶುಕ್ರವಾರ (ಜೂನ್ 14) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ʻದೇಶದ ಒಳಿತಿಗಾಗಿ ಸರ್ಕಾರ ಮುಂದುವರಿ ಯಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಇದರಿಂದ ದೇಶಕ್ಕೆ ಒಳ್ಳೆಯದಾಗಲಿ. ದೇಶವನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಆದರೆ, ಪ್ರಧಾನಿಯವರು ಯಾವುದನ್ನಾದರೂ ಚೆನ್ನಾಗಿ ಮುಂದುವರಿಸಲು ಬಿಡುವುದಿಲ್ಲ.ಆದರೆ, ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಸಹಕರಿಸುತ್ತೇವೆ,ʼ ಎಂದು ಹೇಳಿದರು.

ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಒಟ್ಟಿಗೆ ಇರಿಸಿಕೊಳ್ಳಲು ಹೆಣಗಾಡುತ್ತಿದೆ ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಖರ್ಗೆ ಅವರ ಈ ಹೇಳಿಕೆ ಬಂದಿದೆ.

2014 ಮತ್ತು 2019ಕ್ಕೆ ಹೋಲಿಸಿದರೆ, ಬಿಜೆಪಿ ಕೇವಲ 240 ಸ್ಥಾನ ಗಳಿಸಿದೆ. ಮೋದಿ ನೇತೃತ್ವದ ಬಿಜೆಪಿಯು ಮಿತ್ರಪಕ್ಷಗಳಾದ ಜೆಡಿಯು(12) ಮತ್ತು ತೆಲುಗುದೇಶಂ ಪಾರ್ಟಿ(16), ಏಕನಾಥ್ ಶಿಂಧೆ ಅವರ ಶಿವಸೇನೆ (7) ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ (5) ಮೇಲೆ ಅವಲಂಬಿತವಾಗಿದೆ.

ಜೆಡಿಯು ಪ್ರತಿದಾಳಿ: ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರದ ಜೆಡಿಯು ಎಂಎಲ್‌ಸಿ ನೀರಜ್ ಕುಮಾರ್, ಪಿ.ವಿ. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನುಉಲ್ಲೇಖಿಸಿದ್ದಾರೆ.

1991 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಪಿ.ವಿ. ನರಸಿಂಹ ರಾವ್ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆನಂತರ ರಾವ್‌ ಅವರು ಸಣ್ಣ ಪಕ್ಷಗಳನ್ನು ವಿಭಜಿಸಿ, ಎರಡು ವರ್ಷಗಳಲ್ಲಿ ಬಹುಮತದ ಸರ್ಕಾರವನ್ನಾಗಿಸಿದರು. ʻಖರ್ಗೆ ಅವರಿಗೆ ಕಾಂಗ್ರೆಸ್ ಪರಂಪರೆಯ ಪರಿಚಯವಿಲ್ಲವೇ? ಕಾಂಗ್ರೆಸ್ ಈಗ 99ರ ಚಕ್ರದಲ್ಲಿ ಸಿಲುಕಿಕೊಂಡಿದೆ,ʼ ಎಂದು ಟೀಕಿಸಿದರು.

ಕಾಂಗ್ರೆಸ್ ಮಿತ್ರ ಪಕ್ಷ ಆರ್‌ಜೆಡಿ, ಖರ್ಗೆ ಅವರನ್ನು ಬೆಂಬಲಿಸಿದೆ. ಆರ್‌ಜೆಡಿ ವಕ್ತಾರ ಎಜಾಜ್ ಅಹ್ಮದ್, ʻಜನಾದೇಶ ಮೋದಿ ಸರ್ಕಾರದ ವಿರುದ್ಧವಾಗಿದೆ. ಮತದಾರರು ಅವರನ್ನು ತಿರಸ್ಕರಿಸಿದರು. ಆದರೂ, ಅವರು ಅಧಿಕಾರಕ್ಕೆ ಏರಿದರು,ʼ ಎಂದು ಅಹ್ಮದ್ ಹೇಳಿದರು.

Read More
Next Story