ಕುಟುಂಬ ಸದಸ್ಯರು ರಾಜಕೀಯಕ್ಕೆ ಬರುವುದನ್ನುವಿರೋಧಿಸಿಲ್ಲ: ನರೇಂದ್ರ ಮೋದಿ
x

ಕುಟುಂಬ ಸದಸ್ಯರು ರಾಜಕೀಯಕ್ಕೆ ಬರುವುದನ್ನುವಿರೋಧಿಸಿಲ್ಲ: ನರೇಂದ್ರ ಮೋದಿ

ತಮಿಳು ಸುದ್ದಿವಾಹಿನಿ ತಂತಿ ಟಿವಿಗೆ ನೀಡಿದ ಸಂದರ್ಶನ


ಏಪ್ರಿಲ್‌ 1- ವಂಶ ರಾಜಕೀಯದ ಟೀಕಾಕಾರರೆಂದೇ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ, ಒಂದೇ ಕುಟುಂಬದವರು ರಾಜಕೀಯಕ್ಕೆ ಬರಬಾರದು ಎಂದು ತಾವು ಯಾವತ್ತೂ ಹೇಳಿಲ್ಲ ಎಂದು ಹೇಳಿದ್ದಾರೆ.

ತಮಿಳು ಸುದ್ದಿವಾಹಿನಿ ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ,ʻಒಂದೇ ಕುಟುಂಬದ ವ್ಯಕ್ತಿಗಳು ಅಧಿಕಾರದಲ್ಲಿ ಮುಂದುವರಿದು, ಪಕ್ಷದಲ್ಲಿ ಇತರ ಬುದ್ಧಿವಂತರಿಗೆ ಅವಕಾಶ ನಿರಾಕರಿಸಿದಾಗ, ಅದನ್ನು ಮೊಟಕುಗೊಳಿಸಲು ಕ್ರಮ ತೆಗೆದುಕೊಳ್ಳಬೇಕುʼ ಎಂದು ಹೇಳಿದರು. ಸ್ವಜನ ಪಕ್ಷಪಾತದಿಂದ ಹಿಡಿದು ಅಯೋಧ್ಯೆಯ ರಾಮಮಂದಿರ, ಇಡಿ ದಾಳಿ ಮತ್ತು ಇತ್ತೀಚೆಗೆ ತಮಿಳುನಾಡಿಗೆ ಪದೇಪದೇ ಭೇಟಿ ನೀಡುತ್ತಿರುವ ಕಾರಣ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಈ ಬಾರಿ ರಾಜ್ಯವು ಬಿಜೆಪಿಗೆ ಮತ ಹಾಕಲು ನಿರ್ಧರಿಸಿದೆ ಎಂದು ಹೇಳಿದರು.

ಸ್ವಜನಪಕ್ಷಪಾತ ಮತ್ತು ಪ್ರಜಾಪ್ರಭುತ್ವ: ವಂಶ ರಾಜಕಾರಣದ ಬಗ್ಗೆ ಮಾತನಾಡಿ, ಒಂದೇ ಕುಟುಂಬದವರು ರಾಜಕೀಯಕ್ಕೆ ಬರಬಾರದು ಎಂದು ನಾನು ಎಂದೂ ಹೇಳಿಲ್ಲ. ಪಕ್ಷದಲ್ಲಿರುವ ಬೇರೆಯವರಿಗೆ ಅವಕಾಶ ನೀಡದೇ ಇದ್ದಾಗ ಅದಕ್ಕೆ ಕಡಿವಾಣ ಹಾಕಬೇಕು. ತಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲದಿದ್ದರೆ, ದೇಶವನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಲು ಸಾಧ್ಯವಿಲ್ಲ,ʼ ಎಂದರು.

ಯಾವುದೂ ಪರಿಪೂರ್ಣವಲ್ಲ: ಚುನಾವಣೆ ಬಾಂಡ್‌ಗಳ ಬಗ್ಗೆ ಪ್ರತಿಕ್ರಿಯಿಸಿ , ʻಟೀಕೆ ಮತ್ತು ಅಪೂರ್ಣತೆಗಳ ಹೊರತಾಗಿಯೂ, ಬಾಂಡ್‌ಗಳು ಸ್ವಲ್ಪ ಪಾರದರ್ಶಕತೆಯನ್ನು ಒದಗಿಸಿವೆʼ ಎಂದು ಹೇಳಿದರು. ʻಚುನಾವಣೆ ಬಾಂಡ್‌ಗಳ ವಿರುದ್ಧ ಪ್ರತಿಭಟಿಸುತ್ತಿರುವವರು ಶೀಘ್ರದಲ್ಲೇ ಪಶ್ಚಾತ್ತಾಪ ಪಡುತ್ತಾರೆ. 2014 ಕ್ಕೆ ಮೊದಲು ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ನೀಡಿದ ಹಣದ ಮೂಲ ಗೊತ್ತಾಗುತ್ತಿರಲಿಲ್ಲ.ನಾವು ಈಗ ಹಣದ ಮೂಲವನ್ನು ಕಂಡುಹಿಡಿಯಬಹುದು. ಯಾವುದೂ ಪರಿಪೂರ್ಣವಲ್ಲ; ಅಪೂರ್ಣತೆಗಳನ್ನು ಸರಿಗೊಳಿಸಬಹುದು, ʼಎಂದು ಹೇಳಿದರು.

ನಾವು ಇಡಿ ಅಥವಾ ಪಿಎಂಎಲ್‌ಎ ಸ್ಥಾಪಿಸಿಲ್ಲ: ಪ್ರತಿಪಕ್ಷ ನಾಯಕರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪದೇಪದೇ ದಾಳಿ ನಡೆಸುತ್ತಿರುವ ಬಗ್ಗೆ ಕೇಳಿದಾಗ, ಕೆಲಕಾಲ ಮೌನ ವಹಿಸಿ, ಆಳವಾಗಿ ಉಸಿರು ತೆಗೆದುಕೊಂಡು, ʼಇಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಉಲ್ಲಂಘನೆಗಳ ವಿರುದ್ಧ ಏಜೆನ್ಸಿ ಕ್ರಮದಿಂದ 2,200 ಕೋಟಿ ರೂ. ವಸೂಲಿ ಮಾಡಲಾಗಿದೆ. ಇದನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗಿದೆʼ ಎಂದು ಹೇಳಿದರು.

ʻನಾವು ಇಡಿ ಸ್ಥಾಪಿಸಿಲ್ಲ ಅಥವಾ ಪಿಎಂಎಲ್‌ಎ (ಹಣ ಲಾಂಡರಿಂಗ್ ತಡೆ ಕಾಯ್ದೆ) ಕಾನೂನನ್ನು ಪರಿಚಯಿಸಿದ್ದು ನಮ್ಮ ಸರ್ಕಾರವಲ್ಲ. ಇಡಿ ಕೆಲಸದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. 10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಇಡಿ ವಶಪಡಿಸಿಕೊಂಡಿದ್ದು ಕೇವಲ 35 ಲಕ್ಷ ರೂ. ಈಗ 2,200 ಕೋಟಿ ರೂಪಾಯಿ ಮೌಲ್ಯದ ಕಪ್ಪು ಹಣವನ್ನು ವಶಪಡಿಸಿಕೊಂಡಿದೆ. ನಾವು ಅವರನ್ನು ತಡೆಯುವುದಿಲ್ಲ ಅಥವಾ ದಾಳಿಗೆ ಕಳುಹಿಸುವುದಿಲ್ಲ. ಇಡಿ 7,000 ಕ್ಕೂ ಹೆಚ್ಚು ಪ್ರಕರಣಗಳನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ಕೇವಲ ಶೇ. 3 ಪ್ರಕರಣಗಳು ಮಾತ್ರ ರಾಜಕಾರಣಿಗಳಿಗೆ ಸಂಬಂಧಿಸಿದೆʼ ಎಂದು ಹೇಳಿದರು.

ರಾಜ್ಯಗಳು ರಾಷ್ಟ್ರವನ್ನು ನಿರ್ಮಿಸಬೇಕು: ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡಿ, ʻದೇಶದ ಬೆಳವಣಿಗೆಗೆ ಕೊಡುಗೆ ನೀಡಲು ಎಲ್ಲ ರಾಜ್ಯಗಳು ಬೆಳೆಯಬೇಕುʼ ಎಂದು ಹೇಳಿದರು. ʻನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿ ಮೂಲಕ ದೇಶವನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ್ದೆ. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಎಲ್ಲ ರಾಜ್ಯಗಳೂ ಬೆಳೆಯಬೇಕು. ತಮಿಳುನಾಡಿನ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಅವರು ಇದಕ್ಕೆ ತಮ್ಮನ್ನು ಅರ್ಪಿಸಿಕೊಳ್ಳಬೇಕುʼ ಎಂದು ಹೇಳಿದರು.

ಇಡ್ಲಿ, ದೋಸೆ ವಿಚಾರದಲ್ಲಿ ರಾಜಕೀಯ ಬೇಡ: ತಮಿಳು ಭಾಷೆ, ಆಹಾರ, ಸಂಸ್ಕೃತಿಯ ಶ್ರೀಮಂತಿಕೆ ಬಗ್ಗೆ ಮಾತನಾಡಿ, ʻಹೃದಯಕ್ಕೆ ಪ್ರಿಯವಾದ ತಮಿಳು ಮಾತನಾಡಲು ಬರುವುದಿಲ್ಲʼ ಎಂದು ವಿಷಾದ ವ್ಯಕ್ತಪಡಿಸಿದರು.

ʻನಾನು ವಿಶ್ವಸಂಸ್ಥೆಯಲ್ಲಿ ತಮಿಳಿನಲ್ಲಿ ಮಾತನಾಡಲು ಬಯಸಿದ್ದೆ. ಅದು ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು. ತಮಿಳು ಒಂದೇ ಸ್ಥಳಕ್ಕೆ ಸೀಮಿತವಾಗಬಾರದು. ತಮಿಳಿನ ಮಹತ್ವ ಜಗತ್ತಿಗೆ ತಿಳಿಯಬೇಕು. ಭಾಷೆ ವಿಷಯದಲ್ಲಿ ರಾಜಕೀಯ ನಿಲ್ಲುತ್ತದೆ ಮತ್ತು ರಾಜಕೀಯ ಇಡ್ಲಿ ಮತ್ತು ದೋಸೆಯಂತಹ ಆಹಾರ ಪದಾರ್ಥಗಳನ್ನು ಸ್ಪರ್ಶಿಸಿಲ್ಲ ಎನ್ನುವುದು ಸಂತೋಷದ ವಿಷಯ,ʼ ಎಂದು ಹೇಳಿದರು. ವಿವಿಧ ದೇಶಗಳ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಇಡ್ಲಿ ಮತ್ತು ದೋಸೆ ಲಭ್ಯವಿರುವುದನ್ನು ಗಮನಿಸಿರುವ ಅವರು, ʻಇದೇ ರೀತಿ ತಮಿಳು ಭಾಷೆ ಪ್ರಪಂಚದೆಲ್ಲೆಡೆಗೆ ಹರಡಬೇಕುʼ ಎಂದು ಹೇಳಿದರು.

ತಮಿಳುನಾಡಿಗೆ ಆಗಾಗ ಭೇಟಿ: ಇತ್ತೀಚೆಗೆ ತಮಿಳುನಾಡಿಗೆ ಪದೇಪದೇ ಭೇಟಿ ನೀಡುತ್ತಿರುವುದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಮೋದಿ ಹೇಳಿದರು.

ʻಬಿಜೆಪಿ-ಎನ್‌ಡಿಎ ಸಮಾಜದ ವಿವಿಧ ವರ್ಗಗಳನ್ನು ಸಂಪರ್ಕಿಸುವ ದೃಢ ಮೈತ್ರಿ. ಇದು ಜನರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಬಿಜೆಪಿ-ಎನ್‌ಡಿಎ ಪಡೆಯುವ ಮತಗಳು 'ಡಿಎಂಕೆ ವಿರೋಧಿ' ಅಲ್ಲ: ಆದರೆ 'ಬಿಜೆಪಿ ಪರ'. 10 ವರ್ಷಗಳಿಂದ ನಾವು ಮಾಡಿರುವ ಕೆಲಸಗಳನ್ನು ಜನ ಕಣ್ಣಾರೆ ನೋಡಿದ್ದಾರೆ. ತಮಿಳುನಾಡು ಈ ಬಾರಿ ಬಿಜೆಪಿ-ಎನ್ ಡಿಎ ಎಂದು ನಿರ್ಧರಿಸಿದೆʼ ಎಂದರು.

ʻತಮಿಳುನಾಡಿಗೆ ಅಗಾಧ ಸಾಮರ್ಥ್ಯವಿದ್ದು, ಅದನ್ನು ವ್ಯರ್ಥ ಮಾಡಬಾರದು. ಚುನಾವಣೆಯಲ್ಲಿ ಗೆಲ್ಲುವುದು ಗುರಿಯಾಗಿದ್ದರೆ, ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರಲಿಲ್ಲ. ನಾನು ಎಲ್ಲ ಮಾಜಿ ಪ್ರಧಾನಿಗಳಿಗಿಂತ ಹೆಚ್ಚಾಗಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದೇನೆʼ ಎಂದರು.

ʻನಾನು ತಮಿಳುನಾಡಿಗೆ ಆಗಾಗ ಭೇಟಿ ನೀಡಿದ್ದೇನೆ. ಆದರೆ, ಆ ಭೇಟಿಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲʼ ಎಂದ ಅವರು, ಕನ್ಯಾ ಕುಮಾರಿಯಿಂದ ಕಾಶ್ಮೀರ ಏಕತಾ ಯಾತ್ರೆಗೆ ರೈತರೊಬ್ಬರು 11 ರೂ. ಕೊಡುಗೆ ನೀಡಿದ್ದನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಿರುಪುರ್ ಕುಮಾರನ್ ಅವರ ಸಂಬಂಧಿಕರಿಂದ ಆಶೀರ್ವಾದ ಪಡೆದಿದ್ದನ್ನು ಸ್ಮರಿಸಿಕೊಂಡರು.

ರಾಮಲಲ್ಲಾದ ತತ್ವ: ಅಯೋಧ್ಯೆಯಲ್ಲಿ ರಾಮ ಮಂದಿರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಧಾನಿ, ʻರಾಮಲಲ್ಲಾದ ತತ್ವವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲʼ ಎಂದು ಹೇಳಿದರು. ʻತಮಿಳುನಾಡು ಸೇರಿದಂತೆ ದೇಶಾದ್ಯಂತ ಅನೇಕ ನಗರಗಳು ಮತ್ತು ಹಳ್ಳಿಗಳು ತಮ್ಮ ಹೆಸರಿನಲ್ಲಿ 'ರಾಮ'ವನ್ನು ಹೊಂದಿವೆ. ತಮಿಳುನಾಡಿನ ರಾಮನಾಥಪುರ ಇದಕ್ಕೊಂದು ಉದಾಹರಣೆʼ ಎಂದು ಹೇಳಿದರು.

Read More
Next Story