ಜನ  ಬದಲಾವಣೆ ಬಯಸಿದ್ದಾರೆ: ಶರದ್ ಪವಾರ್
x

ಜನ ಬದಲಾವಣೆ ಬಯಸಿದ್ದಾರೆ: ಶರದ್ ಪವಾರ್

ಚುನಾವಣೆ ಪ್ರಚಾರಕ್ಕೆ ನಾನು ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಜನರ ಮನಸ್ಥಿತಿ ಬದಲಾಗಿದೆ ಮತ್ತು ಮೋದಿ ಅವರು ತಮ್ಮ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಪವಾರ್ ಹೇಳಿದರು.


ನಾಸಿಕ್, ಮೇ 16: ಜನ ಈ ಬಾರಿ ಬದಲಾವಣೆ ಬಯಸಿದ್ದು,ಪ್ರಧಾನಿ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ʻಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ನಾಯಕ ಪ್ರಫುಲ್ ಪಟೇಲ್ ಅವರು ಪ್ರಧಾನಿ ತಲೆ ಮೇಲೆ ಛತ್ರಪತಿ ಶಿವಾಜಿ ಮಹಾರಾಜರು ಧರಿಸುತ್ತಿದ್ದ ಶಿರಸ್ತ್ರಾಣವನ್ನು ಇರಿಸಿದ್ದಾರೆ. ಇದು ಮಾಜಿ ಕೇಂದ್ರ ಸಚಿವರ ಗುಲಾಮಿ ವರ್ತನೆ (ಲಾಚಾರಿ)ಯನ್ನು ತೋರಿಸುತ್ತದೆ,ʼ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಸಂವಾದ ನಡೆಸಿ,ʻಚುನಾವಣೆ ಪ್ರಚಾರಕ್ಕೆ ಹಲವು ಕಡೆ ಭೇಟಿ ನೀಡಿದ್ದೇನೆ. ಜನರ ಮನಸ್ಸು ಈಗ ಬದಲಾವಣೆಯತ್ತ ಮುಖ ಮಾಡಿದ್ದು, ಅದರಿಂದಾಗಿ ಮೋದಿ ವಿಶ್ವಾಸ ಕಳೆದುಕೊಂಡಿದ್ದಾರೆ. ಮಹಾ ವಿಕಾಸ್ ಅಘಾಡಿ(ಎಂವಿಎ)ಗೆ ಅನುಕೂಲಕರ ಸ್ಥಿತಿ ಇದೆʼ ಎಂದರು.

ಬುಧವಾರ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಪ್ರಧಾನಿ ರೋಡ್ ಶೋ ನಡೆಸಿರುವುದಕ್ಕೆ ಅವರನ್ನುಟೀಕಿಸಿದರು. ರೋಡ್‌ಶೋಗೆ ಮುನ್ನ ಭದ್ರತಾ ಕಾರಣಗಳಿಗಾಗಿ ಜಾಗೃತಿನಗ‌ರ್‌ ಮತ್ತು ಘಾಟ್‌ಕೋಪರ್ ನಿಲ್ದಾಣಗಳ ನಡುವೆ ಮುಂಬೈ ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಪೊಲೀಸರು ಕೆಲವು ಅಕ್ಕಪಕ್ಕದ ರಸ್ತೆಗಳನ್ನು ಮುಚ್ಚಿದರು ಹಾಗೂ ಸಂಚಾರ ಮಾರ್ಗವನ್ನು ಬದಲಿಸಿದ್ದರು.ʻಪ್ರಧಾನಿ ಗುಜರಾತಿ ಪ್ರಾಬಲ್ಯವಿರುವ ಪ್ರದೇಶದಲ್ಲಿ ರೋಡ್‌ಶೋ ನಡೆಸಿದರು. ರಾಷ್ಟ್ರವನ್ನು ಮುನ್ನಡೆಸುತ್ತಿರುವಾಗ, ಜಾತಿ ಮತ್ತು ಧರ್ಮದ ಬಗ್ಗೆ ಯೋಚಿಸುವುದು ಸೂಕ್ತವಲ್ಲ. ಮುಂಬೈಯಂತಹ ನಗರದಲ್ಲಿ ರೋಡ್‌ಶೋ ನಡೆಸುವುದು ಸರಿಯಲ್ಲ. ಇದರಿಂದ ಜನರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಅನನುಕೂಲತೆ ಅನುಭವಿಸುತ್ತಾರೆ,ʼ ಎಂದು ಹೇಳಿದರು.

ಶಿವಾಜಿ ಮಹಾರಾಜರ ಶಿರಸ್ತ್ರಾಣದ ಬಗ್ಗೆ ಮಾತನಾಡಿ, ʻ ಆ ಶಿರಸ್ತ್ರಾಣ ಮತ್ತು ಮಹಾರಾಷ್ಟ್ರಕ್ಕೆ ಒಂದು ಇತಿಹಾಸವಿದೆ. ಗುಲಾಮಿ ವರ್ತನೆಗೆ ಒಂದು ಮಿತಿ ಇರಬೇಕು. ಪಟೇಲ್‌ ಭವಿಷ್ಯದಲ್ಲಿ ಎಚ್ಚರವಹಿಸುತ್ತೇನೆ ಎಂದು ಹೇಳಿರುವುದು ಒಳ್ಳೆಯದು,ʼ ಎಂದು ಪವಾರ್ ಹೇಳಿದರು. ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಪ್ರಫುಲ್ ಪಟೇಲ್ ಅವರು ಪ್ರಧಾನಿ ಮೋದಿ ಅವರಿಗೆ ಶಿವಾಜಿ ಮಹಾರಾಜರ ಶಿರಸ್ತ್ರಾಣ ತೊಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ಶಿವಸೇನೆ (ಯುಬಿಟಿ)ಯನ್ನು ನಕಲಿ ಶಿವಸೇನೆ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯಿಸಿ, ʻನಕಲಿ ಶಿವಸೇನೆ ಎಂದರೇನು? ನಿಜವಾದ ಶಿವ ಸೈನಿಕರು ಉದ್ಧವ್ ಠಾಕ್ರೆ ಜೊತೆಗಿದ್ದಾರೆʼ ಎಂದು ಹೇಳಿದರು. ಮುಂಬೈನಲ್ಲಿ ಪ್ರಧಾನಿ ರೋಡ್‌ಶೋ ಸೇರಿದಂತೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಚುನಾವಣೆ ಕಾರ್ಯಕ್ರಮಗಳಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗೈರುಹಾಜರಿ ಬಗ್ಗೆ ಕೇಳಿದಾಗ, ʻಅಜಿತ್ ಪವಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆʼ ಎಂದು ಹೇಳಿದರು.

Read More
Next Story