Modi governments decision to conduct caste census in 2025: Political victory for Rahul Gandhi?
x

2025ರ ಜನಗಣತಿಯಲ್ಲಿ ಜಾತಿ ಗಣತಿಗೆ ಮೋದಿ ಸರ್ಕಾರದ ನಿರ್ಧಾರ: ರಾಹುಲ್ ಗಾಂಧಿಗೆ ರಾಜಕೀಯ ವಿಜಯ?

ಬಿಜೆಪಿ ಜಾತಿ ಗಣತಿಯ ಬದ್ಧವೈರಿಯಂತೆ ವರ್ತಿಸುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಜಾತಿ ಗಣತಿಯನ್ನು ಆಪ್ತ ಮಿತ್ರನಂತೆ ಮಾಡಿಕೊಂಡಿದ್ದರು. ಜಾತಿಗಣತಿ ಮಾಡಿ ಎಂದು ಸತತವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.


ಕೇಂದ್ರದ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು 2025ರ ರಾಷ್ಟ್ರೀಯ ಜನಗಣತಿಯ ಜೊತೆಯಲ್ಲಿಯೇ ಜಾತಿ ಆಧಾರಿತ ಗಣತಿ ನಡೆಸಲು ನಿರ್ಧರಿಸಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜಾತಿ ಗಣತಿಯನ್ನು ನಖಶಿಖಾಂತ ವಿರೋಧಿಸುತ್ತಲೇ ಬಂದಿದ್ದ ಬಿಜೆಪಿ ಹೇಗೆ ಇಂಥದ್ದೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾಯಿತು ಎಂಬ ಕಡೆಗೆ ಚರ್ಚೆಗಳು ಸಾಗುತ್ತಿವೆ. ಆದರೆ, ಈ ಚರ್ಚೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಹೆಚ್ಚು ಮುನ್ನೆಲೆಗೆ ಬಂದಿರುವುದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ರಾಹುಲ್​ ಗಾಂಧಿ!

ಬಿಜೆಪಿ ಜಾತಿ ಗಣತಿಯ ಬದ್ಧವೈರಿಯಂತೆ ವರ್ತಿಸುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಜಾತಿ ಗಣತಿಯನ್ನು ಆಪ್ತ ಮಿತ್ರನಂತೆ ಮಾಡಿಕೊಂಡಿದ್ದರು. ಜಾತಿಗಣತಿ ಮಾಡಿ ಎಂದು ಸತತವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಹೀಗಾಗಿ ಪಿಎಂ ನರೇಂದರ ಮೋದಿ ಜಾತಿ ಗಣತಿಯನ್ನು ಒಪ್ಪಿಕೊಂಡರೂ, ಇದು ರಾಹುಲ್ ಗಾಂಧಿಗೆ ರಾಜಕೀಯ ಜಯವೆಂದು ಹೇಳಲಾಗುತ್ತಿದೆ! ಈ ಕುರಿತು ಸೋಶಿಯಲ್ ಮೀಡಿಯಾ ಪೋಸ್ಟ್​​ಗಳು ಸತತವಾಗಿ ಹರಿದಾಡುತ್ತಿವೆ. ಸರ್ಕಾರವೇ ಇಲ್ಲದೆ ಜಾತಿ ಗಣತಿ ಮಾಡಿದರು ಎಂದು ಹೇಳಲಾಗುತ್ತಿದೆ.

ರಾಹುಲ್ ಗಾಂಧಿಯ ಸತತ ಒತ್ತಾಯ

ರಾಹುಲ್ ಗಾಂಧಿ ಜಾತಿ ಗಣತಿಯನ್ನು ರಾಷ್ಟ್ರೀಯ ಜನಗಣತಿಯ ಭಾಗವಾಗಿ ಸೇರಿಸಬೇಕೆಂದು ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದರು. ಇದು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಲು ಮತ್ತು ಒಬಿಸಿ (OBC), ಪರಿಶಿಷ್ಟ ಜಾತಿಗಳು (SC) ಹಾಗೂ ಪರಿಶಿಷ್ಟ ಪಂಗಡಗಳ (ST) ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸಲು ಅಗತ್ಯವೆಂದು ಅವರು ನಿರಂತರ ವಾದಿಸಿದ್ದರು.

ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಾದ ಕರ್ನಾಟಕ, ತೆಲಂಗಾಣ ಮತ್ತು ಇತರೆಡೆ ಜಾತಿ ಗಣತಿಯನ್ನು ನಡೆಸಲು ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ಇತ್ತೀಚೆಗೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಎಐಸಿಸಿ ಸಭೆಯ ಭಾಷಣದಲ್ಲಿ ಸ್ಪಷ್ಟ ಸೂಚನೆ ನೀಡಿದ್ದರು. ಸಭೆ ಮುಗಿದ ಬಳಿಕ ಕರ್ನಾಟಕದಲ್ಲಿ ನಡೆದ ಜಾತಿ ಗಣತಿಯ ವರದಿಯನ್ನು ಕ್ಯಾಬಿನೆಟ್​ನಲ್ಲಿ ಸ್ವೀಕರಿಸಲಾಗಿತ್ತು. ಅದು ವಿವಾದ ಸೃಷ್ಟಿ ಮಾಡಿದ್ದ ಹೊರತಾಗಿಯೂ ರಾಜ್ಯದಲ್ಲಿ ಒಬಿಸಿ ಸಮುದಾಯದ ಜನಸಂಖ್ಯೆಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಅಧಿವೇಶನದಲ್ಲಿ ಲೇವಡಿಗೆ ಒಳಗಾಗಿದ್ದ ರಾಹುಲ್​

ಕಳೆದ ಸಂಸತ್‌ನ ಅಧಿವೇಶನದಲ್ಲಿ ರಾಹುಲ್ ಗಾಂಧಿ ಜಾತಿ ಗಣತಿ ನಡೆಸುವಂತೆ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದ್ದರು. ಆದರೆ ಆ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ಸಂಸದರು ರಾಹುಲ್‌ ಗಾಂಧಿಯನ್ನು ಅಪಹಾಸ್ಯ ಮಾಡಿದ್ದರು. ರಾಹುಲ್ ಗಾಂಧಿ ಆ ವೇಳೆ ನಿರ್ಮಲಾ ಸೀತಾರಾಮನ್ ಅವರಿಗೆ ತಿರುಗೇಟು ನೀಡಿ, 'ಇದು ನಗುವ ವಿಷಯವಲ್ಲ' ಎಂದು ಹೇಳಿದ್ದರು. ಆ ವೇಳೆಯೂ ಉಳಿದ ಸದಸ್ಯರು ನಗೆ ಮುಂದುವರಿಸಿದ್ದರು.

ಜಾತಿಗಣತಿ ದುರುಪಯೋಗಕ್ಕೆ ಒಳಗಾಗಬಹುದು ಮತ್ತು ಸಾಮಾಜಿಕ ವಿಭಜನೆಗೆ ಕಾರಣವಾಗಬಹುದು ಎಂದು ಬಿಜೆಪಿ ವಾದಿಸಿತ್ತು. ಈಗ ಕೇಂದ್ರ ಸರ್ಕಾರವೇ ಜಾತಿ ಗಣತಿಯನ್ನು ಜನಗಣತಿಯ ಭಾಗವಾಗಿ ಸೇರಿಸಲು ಮುಂದಾಗಿರುವುದು ರಾಹುಲ್ ಗಾಂಧಿಯ ಒತ್ತಾಯದ ಯಶಸ್ಸಿನ ಸೂಚಕವೆಂದು ವಿರೋಧ ಪಕ್ಷಗಳು ಹೇಳಿಕೊಂಡಿವೆ.

ಬಿಜೆಪಿಯ ಮೇಲೆ ಒತ್ತಡ

ಜಾತಿ ಗಣತಿಯಿಂದ ಜಾತಿ ವಾದ ಹೆಚ್ಚಾಗಬಹುದು ಎಂಬುದು ಬಿಜೆಪಿಯ ಒತ್ತಾಯವಾಗಿತ್ತು. ಆ ನಡುವೆಯೂ ಕೆಲವು ನಾಯಕರು ಗಣತಿಯ ಪರವಾಗಿದ್ದರು ಎಂದು ಹೇಳಲಾಗಿತ್ತು. ಯಾಕೆಂದರೆ ಜಾತಿ ಗಣತಿ ವಿಚಾರ ರಾಜಕೀಯವಾಗಿ ವಿರೋಧಿಗಳಿಗೆ ಒಬಿಸಿ ಓಟುಗಳನ್ನು ಗಳಿಸಲು ಅವಕಾಶ ನೀಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಕೇಂದ್ರ ಸರ್ಕಾರದ ಈ ತಿರುವು ರಾಜಕೀಯ ಒತ್ತಡಗಳಿಗೆ ಮಣಿಯುವ ಕ್ರಮವೇ ಎಂಬ ಚರ್ಚೆ ಆರಂಭವಾಗಿದೆ. ಒಬಿಸಿ ಸಮುದಾಯವನ್ನು ಪ್ರತಿನಿಧಿಸುವ ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿ, ಜಾತಿ ಗಣತಿಗೆ ಬೆಂಬಲ ನೀಡಿರುವುದು ಕೂಡ ಕೇಂದ್ರದ ನಿರ್ಧಾರದ ಮೇಲೆ ಪರಿಣಾಮ ಬೀರಿರಬಹುದು ಎಂದು ಹೇಳಲಾಗುತ್ತಿದೆ.

ತಮ್ಮ ಗೆಲುವು ಎನ್ನುತ್ತಿರುವ ಪ್ರತಿಪಕ್ಷಗಳು

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತಮ್ಮ ರಾಜಕೀಯ ಗೆಲುವೆಂದು ಭಾವಿಸಿಕೊಂಡಿವೆ. ರಾಹುಲ್ ಗಾಂಧಿಯ ನೇತೃತ್ವದಲ್ಲಿ ಈ ಎಲ್ಲ ಪಕ್ಷಗಳು ಗಣತಿಯನ್ನು ಸಾಮಾಜಿಕ ನ್ಯಾಯದ ಒಂದು ಪ್ರಮುಖ ಅಂಶ ಎಂದು ಪ್ರಚಾರ ಮಾಡಿತ್ತು. ಈ ವಿಚಾರದಲ್ಲಿ ಒಬಿಸಿ ಮತ್ತು ದಲಿತ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದವು. ಈ ನಿಟ್ಟಿನಲ್ಲಿಯೂ ಜಾತಿ ಗಣತಿಯನ್ನು ಒಪ್ಪಿಕೊಂಡಿರುವುದು ರಾಹುಲ್ ಗಾಂಧಿಯ ರಾಜಕೀಯ ಒತ್ತಡದ ಫಲವೆಂದು ಕಾಂಗ್ರೆಸ್‌ನ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.

ಆದರೆ, ಬಿಜೆಪಿಯ ಕೆಲವು ಮುಖಂಡರು ಇದರ ಕ್ರೆಡಿಟ್​ ರಾಹುಲ್​ಗೆ ಸಲ್ಲುವುದಿಲ್ಲ ಎಂದು ಹೇಳಿದ್ದಾರಲ್ಲದೆ, ರಾಜಕೀಯ ಕಾರಣಕ್ಕಾಗಿ ತೆಗೆದುಕೊಂಡ ಕ್ರಮವೆಂದು ಒಪ್ಪಿಕೊಂಡಿಲ್ಲ. ಇದು ಸಮಾಜ ಕಲ್ಯಾಣ ಯೋಜನೆಗಳಿಗೆ ಡೇಟಾ ಸಂಗ್ರಹಿಸುವ ಉದ್ದೇಶ ಹೊಂದಿದ್ದು, ಬಿಜೆಪಿಯು ಅದರ ಪರವಾಗಿದೆ ಎಂದು ಹೇಳಿದೆ.

ಸವಾಲುಗಳೇನು?

ಜಾತಿ ಗಣತಿಯನ್ನು ಜನಗಣತಿಯಲ್ಲಿ ಸೇರಿಸುವುದು ಬಿಜೆಪಿಗೆ ಸವಾಲಾಗಬಹುದೇ ಎಂಬ ಪ್ರಶ್ನೆಯೂ ಎದುರಾಗಿದೆ. ಯಾಕೆಂದರೆ, ಕರ್ನಾಟಕದ ಜಾತಿ ಗಣತಿಯ ವಿವಾದವು ಈ ಪ್ರಕ್ರಿಯೆಯ ಸಂಕೀರ್ಣತೆಯನ್ನು ಪ್ರಸ್ತುತಪಡಿಸಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ತಮ್ಮ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಆರೋಪಿಸಿದ್ದವು. ರಾಷ್ಟ್ರೀಯ ಜಾತಿ ಗಣತಿಯಲ್ಲೂ ಇಂತಹ ಆಕ್ಷೇಪಗಳು ಉದ್ಭವಿಸಬಹುದೆಂಬ ಆತಂಕ ಇದ್ದೇ ಇದೆ. ಜಾತಿಗಳ ವರ್ಗೀಕರಣ, ದತ್ತಾಂಶದ ವಿಶ್ವಾಸಾರ್ಹತೆ, ಮತ್ತು ಸಾಮಾಜಿಕ ಒಡಕುಗಳನ್ನು ತಡೆಗಟ್ಟುವುದು ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ.

Read More
Next Story