
ವೈಫಲ್ಯ ಮುಚ್ಚಿಹಾಕಲು ಮೋದಿಯಿಂದ ನೆಹರೂ ಟೀಕೆ: ಕಾಂಗ್ರೆಸ್ ಆರೋಪ
ಮಾಜಿ ಪ್ರಧಾನಿ ದಿ. ಜವಾಹರ್ ಲಾಲ್ ನೆಹರೂ ಅವರನ್ನು ಪದೇಪದೆ ಟೀಕಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕನಿಷ್ಠ ಮಟ್ಟಕ್ಕೆ ಕೊಂಡೊಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಹಾಗೂ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಧಾನಿ ಮೋದಿ ಪದೇಪದೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂಬುದಾಗಿ ಕಾಂಗ್ರೆಸ್ ಭಾನುವಾರ (ಡಿ.15ರಂದು) ಹೇಳಿದೆ. ಈ ಮೂಲಕ ಪ್ರಜಾಪ್ರಭುತ್ವ ಆಡಳಿತದ ಮಾದರಿಯನ್ನು ನಾಶ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಮೋದಿ ಅವರು ನೆಹರೂ ಅವರ ಬಗ್ಗೆ ಗೀಳು ಇಟ್ಟುಕೊಂಡಿದ್ದಾರೆ. ಏಕೆಂದರೆ ಅವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಹಾಗೂ ಪ್ರಸ್ತುತ ಸವಾಲುಗಳಿಂದ ರಾಷ್ಟ್ರದ ಗಮನವನ್ನು ಬೇರೆಡೆಗೆ ಸೆಳೆಯಲು ಆ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಲೋಕಸಭೆಯಲ್ಲಿ 'ಭಾರತದ ಸಂವಿಧಾನದ 75 ವರ್ಷಗಳ ಪ್ರಯಾಣ' ಕುರಿತ ಚರ್ಚೆಯ ಸಂದರ್ಭದಲ್ಲಿ ಮೋದಿ ನೆಹರೂ ಅವರನ್ನು ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಮೋದಿ ಪದೇಪದೆ ಜವಾಹರಲಾಲ್ ನೆಹರು ಅವರನ್ನು ದೂಷಿಸುತ್ತಿದ್ದಾರೆ. ಕನಿಷ್ಠ ಪ್ರಜಾಪ್ರಭುತ್ವ ಆಡಳಿತದ ಮಾದರಿಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಮೇ 2014 ಕ್ಕಿಂತ ಮೊದಲು ರಾಷ್ಟ್ರದ ಅನೇಕ ಸಾಧನೆಗಳನ್ನು ನಿರಾಕರಿಸಲು ನೆಹರೂ ಅಗತ್ಯವಾಗಿತ್ತು ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ಮೋದಿ ಜೂನ್ 18, 1951ರಿಂದ ಜಾರಿಗೆ ಬಂದ ಭಾರತದ ಸಂವಿಧಾನದ ತಿದ್ದುಪಡಿಯ ಬಗ್ಗೆ ಪ್ರಧಾನಿ ನೆಹರೂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ, ಈ ತಿದ್ದುಪಡಿಯನ್ನು ಏಕೆ ತರಲಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
"ಮೊದಲ ತಿದ್ದುಪಡಿ ಕೋಮು ಸಾಮರಸ್ಯಕ್ಕಾಗಿ. ಎರಡನೆಯದಾಗಿ, ನ್ಯಾಯಾಲಯಗಳು ರದ್ದುಪಡಿಸುತ್ತಿದ್ದ ಜಮೀನ್ದಾರಿ ನಿರ್ಮೂಲನೆ ಕಾನೂನುಗಳನ್ನು ರಕ್ಷಿಸುವುದು. ಮೂರನೆಯದು, ನ್ಯಾಯಾಲಯಗಳು ತಿರಸ್ಕರಿಸಿದ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ರಕ್ಷಿಸುವುದು" ಎಂದು ಅವರು ಹೇಳಿದ್ದಾರೆ.
ನೆಹರು ತಮ್ಮ ನಿಲುವು ಬದಲಾಯಿಸಿಕೊಂಡರು
ನೆಹರೂ, ರಾಜಗೋಪಾಲಾಚಾರಿ ಮತ್ತು ಅಂಬೇಡ್ಕರ್ ಸದಸ್ಯರಾಗಿದ್ದ ಆಯ್ಕೆ ಸಮಿತಿಯು ಈ ಮಸೂದೆಯನ್ನು ವಿವರವಾಗಿ ಪರಿಶೀಲಿಸಿದೆ ಎಂದು ಜೈರಾಮ್ ರಮೇಶ್ ಸಮರ್ಥಿಸಿಕೊಂಡಿದ್ದಾರೆ. ಸಮಿತಿಯು ತನ್ನ ವರದಿ ಮಂಡಿಸಿದ ನಂತರವೂ ನೆಹರು ತಮ್ಮ ಟೀಕಾಕಾರರ ಮಾತುಗಳನ್ನು ಆಲಿಸಿ ತಮ್ಮ ನಿಲುವನ್ನು ಬದಲಾಯಿಸಿದ್ದರು ಎಂದು ರಮೇಶ್ ಹೇಳಿದರು.