'ಮೋದಿ ಭ್ರಷ್ಟಾಚಾರ ವಿಶ್ವವಿದ್ಯಾನಿಲಯದ ಕುಲಪತಿ': ಸ್ಟಾಲಿನ್
ರಾಷ್ಟ್ರದಾದ್ಯಂತ ʻವೇಂಡ ಮೋದಿʼ ಸಂದೇಶ ಕಳುಹಿಸಲು ಜನರಿಗೆ ಕರೆ
ಏಪ್ರಿಲ್ 11- ‘ಭ್ರಷ್ಟಾಚಾರ ವಿಶ್ವವಿದ್ಯಾಲಯದ ಕುಲಪತಿ’ಯಾಗಲು ಮೋದಿಯೇ ಸೂಕ್ತ ವ್ಯಕ್ತಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ರಾಜ್ಯದಲ್ಲಿ ವಂಶಾಡಳಿತ ರಾಜಕೀಯ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಧಾನಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್, ʻಭ್ರಷ್ಟಾಚಾರಕ್ಕೊಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರೆ, ಅದರ ಕುಲಪತಿಯಾಗಲು ಮೋದಿಯೇ ಸೂಕ್ತ ವ್ಯಕ್ತಿʼ ಎಂದು ಹೇಳಿದರು. ʻಏಕೆ ಎಂದು ಯಾರಾದರೂ ಕೇಳಬಹುದು. ಚುನಾವಣಾ ಬಾಂಡ್‌ಗಳಿಂದ ಹಿಡಿದು ಪಿಎಂ ಕೇರ್ಸ್ ಫಂಡ್ ಮತ್ತು ಕಳಂಕಿತ ನಾಯಕರನ್ನು ಕೇಸರೀಕರಣಗೊಳಿಸುವ ಬಿಜೆಪಿ 'ವಾಷಿಂಗ್ ಮಷಿನ್'ವರೆಗೆ ಬಿಜೆಪಿ ಭ್ರಷ್ಟವಾಗಿದೆ,ʼ ಎಂದು ಥೇನಿಯಲ್ಲಿ ಚುನಾವಣೆ ಸಭೆಯಲ್ಲಿ ಹೇಳಿದರು.
‘ವೇಂಡ ಮೋದಿ’ ಸಂದೇಶ: ಡಿಎಂಕೆ ತಮಿಳು ಸಂಸ್ಕೃತಿಗೆ ವಿರುದ್ಧವಾಗಿದೆ ಎಂಬ ಪ್ರಧಾನಿಯವರ ಆರೋಪಕ್ಕೆ ತಿರುಗೇಟು ನೀಡಿದ ಸ್ಟಾಲಿನ್, ʻಪ್ರಧಾನಿ ನರೇಂದ್ರ ಮೋದಿ ಅವರೇ , ದಯವಿಟ್ಟು ವಾಟ್ಸಾಪ್ ವಿಶ್ವವಿದ್ಯಾನಿಲಯದಲ್ಲಿ ಓದಬೇಡಿ. ತಮಿಳು ಸಂಸ್ಕೃತಿಯಲ್ಲಿ ಎಲ್ಲ ಊರುಗಳು ಒಂದೇ , ಎಲ್ಲರೂ ನಮ್ಮವರೇ(ಯಾಧುಂ ಊರೇ, ಯಾರುಂ ಕೇಳಿರ್ (ಎಲ್ಲ ಊರುಗಳು ಒಂದೇ. , ಎಲ್ಲರೂ ನಮ್ಮವರೇ)ʼ ಎಂದರು.
ಮೋದಿ ಮೂರನೇ ಅವಧಿಗೆ ಪ್ರಧಾನಿಯಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ ಎಂದಿರುವ ಸ್ಟಾಲಿನ್, ಪ್ರಧಾನಿ ಒಡೆದು ಆಳುವ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ʻರಾಷ್ಟ್ರದಾದ್ಯಂತ ವೇಂಡ ಮೋದಿʼ ಸಂದೇಶವನ್ನು ಕಳುಹಿಸಲು ಜನರಿಗೆ ಕರೆ ನೀಡಿದರು.
ʻಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಸರ್ವಾಧಿಕಾರ ಸರ್ಕಾರ ಸ್ಥಾಪನೆಯಾಗುತ್ತದೆ. ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಯುವುದಿಲ್ಲ, ಚುನಾವಣೆ ಇರುವುದಿಲ್ಲ ಮತ್ತು ರಾಜ್ಯಗಳಲ್ಲಿ ವಿಧಾನಸಭೆಗಳು ಇರುವುದಿಲ್ಲ. ಒಂದೇ ಭಾಷೆ, ಒಂದು ನಂಬಿಕೆ ಮತ್ತು ಒಂದೇ ಸಂಸ್ಕೃತಿ ಇರುತ್ತದೆ. ಅವರು ಸಾಮಾಜಿಕ ನ್ಯಾಯವನ್ನು ಸಮಾಧಿ ಮಾಡುತ್ತಾರೆʼ ಎಂದು ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡು ಪ್ರಗತಿ ತಡೆಯಲು ಸಾಧ್ಯವಿಲ್ಲ: ʻಮಂಗಳವಾರ ಮೋದಿಯವರ ಚೆನ್ನೈ ರೋಡ್‌ಶೋ ಫ್ಲಾಪ್ ಶೋ ಆಗಿದ್ದು, ರೋಡ್‌ಶೋ ನಡೆದ ಪ್ರದೇಶಗಳು ಡಿಎಂಕೆ ಕೋಟೆಯಾಗಿವೆʼ ಎಂದು ಹೇಳಿದರು.ʻವೆಲ್ಲೂರು ಸಭೆಯಲ್ಲಿ ಮೋದಿ ಹಿಂದಿಯಲ್ಲಿ ಮಾತನಾಡಿದರು ಮತ್ತು ಸಭಿಕರು ಚಪ್ಪಾಳೆ ತಟ್ಟಿದರು. ಉತ್ತರ ಭಾರತದ ಜನರನ್ನು ಸಭೆಗೆ ಕರೆತರಲಾಗಿದೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ತಮಿಳುನಾಡು ಅಭಿವೃದ್ಧಿ ಮಾಡುವುದಾಗಿ ಹಿಂದಿ ಯಲ್ಲಿ ಭರವಸೆ ನೀಡಿದ್ದಾರೆ. ಪ್ರಧಾನಿಯವರೇ, ತಮಿಳುನಾಡು ಅಭಿವೃದ್ಧಿ ಹೊಂದುತ್ತಿದೆ ಮತ್ತು ದ್ರಾವಿಡ ಮಾದರಿ ಆಡಳಿತದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ. ಎಷ್ಟೇ ಮೋದಿಗಳು ಬಂದರೂ, ರಾಜ್ಯದ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲʼ ಎಂದು ಹೇಳಿದರು.
ʻಪ್ರಧಾನಿ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ ಕುರಿತ ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಪ್ರಣಾಳಿಕೆ ಎಂದು ಪ್ರಧಾನಿ ಟೀಕಿಸಿರುವುದು ಎಂದು ಬಿಜೆಪಿ ನಾಯಕರ ಒಡೆದಾಳುವ ಮತ್ತು ಕೋಮುವಾದಿ ರಾಜಕಾರಣವನ್ನು ತೋರಿಸುತ್ತದೆʼ ಎಂದು ಹೇಳಿದರು. ಕೇಂದ್ರ ದಲ್ಲಿ 10 ವರ್ಷ ಆಡಳಿತ ನಡೆಸಿರುವ ಅವರು ತಮ್ಮ ಸಾಧನೆಗಳ ಆಧಾರದ ಮೇಲೆ ಮತ ಕೇಳಲಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.
ಥೇನಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ತಂಗ ತಮಿಳ್ಸೆಲ್ವನ್ ಮತ್ತು ದಿಂಡಿಗಲ್ ಕ್ಷೇತ್ರದ ಸಿಪಿಐ (ಎಂ) ಅಭ್ಯರ್ಥಿ ಆರ್ ಸಚ್ಚಿದಾನಂದಂ ಪರ ಮತಯಾಚನೆ ಮಾಡಿದರು.