ಮೋದಿ 3.0 | ಶಿಂಧೆ, ಅಜಿತ್ ಪವಾರ್ ಬಣದ ನೀರಸ ಪ್ರದರ್ಶನದಿಂದ ಸಚಿವ ಸ್ಥಾನಗಳಿಗೆ ಕತ್ತರಿ
x

ಮೋದಿ 3.0 | ಶಿಂಧೆ, ಅಜಿತ್ ಪವಾರ್ ಬಣದ ನೀರಸ ಪ್ರದರ್ಶನದಿಂದ ಸಚಿವ ಸ್ಥಾನಗಳಿಗೆ ಕತ್ತರಿ

ಶಿಂಧೆ ಬಣ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಒಟ್ಟು ಏಳು ಸಂಸದರನ್ನು ಹೊಂದಿದೆ. ಒಂದುವೇಳೆ ಅವರು ಬೆಂಬಲ ವಾಪಸು ಪಡೆದರೂ, ಮೋದಿ 3.0 ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.


ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಉತ್ತಮ ಸಾಧನೆ ಮಾಡದೆ ಇರುವುದರಿಂದ, ಎನ್‌ಡಿಎ ಸರ್ಕಾರದಲ್ಲಿ ನಿರೀಕ್ಷಿಸಿದಷ್ಟು ಸಚಿವ ಸ್ಥಾನ ಸಿಕ್ಕಿಲ್ಲ. ಇದನ್ನು ಸರಿದೂಗಿಸುವರೇ ಎಂಬುದನ್ನು ನೋಡಲು ಸಂಪುಟದ ವಿಸ್ತರಣೆವರೆಗೆ ಕಾಯುವುದಾಗಿ ಈ ಪಕ್ಷಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ 72 ಸಂಸದರು ಸೇರ್ಪಡೆಯಾಗಿದ್ದು, ಬಹುಪಾಲು ಬಿಜೆಪಿ, ಎನ್. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯುಗೆ ಸೇರಿದವರು ಇದ್ದಾರೆ. ಇವರಲ್ಲಿ ಐದು ಮಂದಿ ಮಾತ್ರ ಮಹಾರಾಷ್ಟ್ರದವರು. ರಾಜ್ಯದ 48 ಲೋಕಸಭೆ ಸ್ಥಾನಗಳಲ್ಲಿ ಎನ್‌ಡಿಎ ಕೇವಲ 17 ಸ್ಥಾನ ಗಳಿಸಿದೆ. 2019 ರಲ್ಲಿ 41 ಸ್ಥಾನ ಗಳಿಸಿತ್ತು(ಬಿಜೆಪಿ 23 ಮತ್ತು ಅವಿಭಜಿತ ಶಿವಸೇನೆ 18).

ಬಿಜೆಪಿಯಿಂದ ನಾಲ್ವರು ಸಚಿವರು: ಮಹಾರಾಷ್ಟ್ರದ ಐವರು ಸಚಿವರ ಪೈಕಿ ನಾಲ್ವರು ಬಿಜೆಪಿಯವರು. ಐದನೆಯವರು ಶಿಂಧೆ ಬಣದ ಪ್ರತಾಪ್ರರಾವ್ ಜಾಧವ್. ಸ್ವತಂತ್ರ ಉಸ್ತುವಾರಿಯ ಕಿರಿಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಜಿತ್ ಪವಾರ್ ಬಣದ ಪ್ರಫುಲ್ ಪಟೇಲ್‌ಗೆ ಇದೇ ಪ್ರಸ್ತಾಪ ನೀಡಲಾಗಿತ್ತು. ಅವರು ಅದನ್ನು ʻಹಿನ್ನಡೆʼ ಎಂದು ನಿರಾಕರಿಸಿದರು.

ಸಂಪುಟ ಸಚಿವರಾಗಿದ್ದ ಪಟೇಲ್, ಕಿರಿಯ ಸಚಿವ ಸ್ಥಾನಕ್ಕೆ ಬಹಳ ಹಿರಿಯ ವ್ಯಕ್ತಿ. ಕ್ಯಾಬಿನೆಟ್ ಸ್ಥಾನಕ್ಕಾಗಿ ತಮ್ಮ ಪಕ್ಷ ʻಕಾಯಲು ಸಿದ್ಧವಿದೆʼ ಎಂದು ಅಜಿತ್ ಪವಾರ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ʻನಮ್ಮ ಬಣದಲ್ಲಿ ಒಬ್ಬರು ಲೋಕಸಭೆ ಮತ್ತು ಒಬ್ಬರು ರಾಜ್ಯಸಭೆ ಸದಸ್ಯ (ಸುನೀಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್) ಇದ್ದಾರೆ. ಬರುವ ತಿಂಗಳುಗಳಲ್ಲಿ ಇನ್ನೂ ಇಬ್ಬರು ರಾಜ್ಯಸಭೆ ಸದಸ್ಯರನ್ನು ಹೊಂದುತ್ತೇವೆ. ಆಗ ನಮಗೆ ಕ್ಯಾಬಿನೆಟ್‌ ಸ್ಥಾನ ಸಿಗಬೇಕು,ʼ ಎಂದು ಅವರು ಹೇಳಿದರು.

ಪಟೇಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ,ʻಈ ಹಿಂದೆ ಕ್ಯಾಬಿನೆಟ್ ಸಚಿವನಾಗಿದ್ದ ನನಗೆ ಎಂಒಎಸ್‌ ಹಿನ್ನಡೆ,ʼ ಎಂದು ಹೇಳಿದರು. ಅವರು 2011 ರಿಂದ 2014 ರವರೆಗೆ ಭಾರೀ ಕೈಗಾರಿಕೆಗಳ ಸಚಿವರಾಗಿದ್ದರು. ʻಬಿಜೆಪಿ ನಮಗೆ ಕೆಲವು ದಿನ ಕಾಯಲು ಹೇಳಿದೆ. ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ,ʼ ಎಂದು ಅವರು ಹೇಳಿದರು.

ಶಿಂಧೆ ಬಣದಿಂದ 3 ಸ್ಥಾನದ ಬೇಡಿಕೆ: ಶಿಂಧೆ ನೇತೃತ್ವದ ಶಿವಸೇನೆ ಬಣವು ಒಂದು ಕ್ಯಾಬಿನೆಟ್‌ ಮತ್ತು ಎರಡು ಕಿರಿಯ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಬಿಜೆಪಿ 14 ಮಿತ್ರಪಕ್ಷಗಳಿಗೆ ಅವಕಾಶ ಕಲ್ಪಿಸಬೇಕಿದ್ದರಿಂದ, ಒಂದು ಎಂಒಎಸ್‌ ಲಭ್ಯವಾಗಿದೆ. ಶಿಂಧೆ ಈಗ ಒಪ್ಪಿಕೊಂಡಿದ್ದರೂ, ಸಂಪುಟ ವಿಸ್ತರಣೆಯಲ್ಲಿ ತಮ್ಮ ʻಪಾಲುʼ ನಿರೀಕ್ಷಿಸುತ್ತಿದ್ದಾರೆ.

ಕೇಂದ್ರ ಸಚಿವ ಸಂಪುಟದ ಗರಿಷ್ಠ ಸಂಖ್ಯಾಬಲಕ್ಕೆ ಕೇವಲ ಒಂಬತ್ತು ಸ್ಥಾನ ಕಡಿಮೆಯಿದೆ. ಬಿಜೆಪಿ ತನ್ನ ಮಹಾರಾಷ್ಟ್ರ ಸಂಸದರಿಗೆ ಎರಡು ಕ್ಯಾಬಿನೆಟ್ ಮತ್ತು ಎರಡು ಎಂಒಎಸ್‌ ಸ್ಥಾನ ನೀಡಿದೆ. ಇದರಲ್ಲಿ ಒಂದು ಸ್ವತಂತ್ರ ಉಸ್ತುವಾರಿ. ಬಿಜೆಪಿ 9 ಸಂಸದರನ್ನು ಹೊಂದಿದ್ದು, ಶಿಂಧೆ ಬಣ 6 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದೆ.

ಬೆಂಬಲ ನಿರ್ಣಾಯಕವಲ್ಲ: ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯಿಂದ ಸ್ಪರ್ಧಿಸಿದ ನಾಲ್ವರಲ್ಲಿ ಒಬ್ಬರು ಗೆದ್ದಿದ್ದಾರೆ. ಸೋತ ಮೂರು ಕ್ಷೇತ್ರಗಳಲ್ಲಿ ಶರದ್ ಪವಾರ್ ಅವರ ಭದ್ರಕೋಟೆಯಾದ ಬಾರಾಮತಿಯೂ ಇದೆ.ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನ ಗಳಿಸಿದೆ. ಆದರೆ, 53 ಎನ್‌ಡಿಎ ಸಂಸದರಲ್ಲಿ 28 ಮಂದಿ ಟಿಡಿಪಿ ಮತ್ತು ಜೆಡಿಯುಗೆ ಸೇರಿದವರು. ಶಿಂಧೆ ಬಣ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಏಳು ಸಂಸದರನ್ನು ಹೊಂದಿದೆ. ಅಂದರೆ, ಒಂದುವೇಳೆ ಅವರು ಬೆಂಬಲ ವಾಪಸು ಪಡೆದರೆ, ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.

ಆಶ್ಚರ್ಯವೇನಿಲ್ಲ: ಮೋದಿ 3.0ಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸ್ಥಾನ ಪಡೆಯದೆ ಇರುವುದರಿಂದ ಆಶ್ಚರ್ಯವುಂಟಾಗಿಲ್ಲ ಎಂದು ಎನ್‌ಸಿಪಿ (ಶರದ್ಚಂದ್ರ ಪವಾರ್) ಸಂಸದೆ ಸುಪ್ರಿಯಾ ಸುಳೆ ಸೋಮವಾರ ಹೇಳಿದ್ದಾರೆ. ಎನ್‌ಸಿಪಿಗೆ ಕ್ಯಾಬಿನೆಟ್ ಸ್ಥಾನ ಸಿಗದಿದ್ದಕ್ಕೆ ಆಶ್ಚರ್ಯವಿಲ್ಲ ಎಂದು ಸಂಸದೆ ಹೇಳಿದ್ದಾರೆ. ʻಕಳೆದ 10 ವರ್ಷದಲ್ಲಿ ಬಿಜೆಪಿ ಮಿತ್ರರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ,ʼ ಎಂದು ಅವರು ಹೇಳಿದರು.

ಎನ್‌ಸಿಪಿಯ 25 ನೇ ಸಂಸ್ಥಾಪನಾ ದಿನದಂದು ಪುಣೆಯಲ್ಲಿ ಮಾತನಾಡಿ, ʻಮನಮೋಹನ್ ಸಿಂಗ್ ಸರ್ಕಾರದಲ್ಲಿ ಎನ್‌ಸಿಪಿಯ ಎಂಟು- ಒಂಬತ್ತು ಸಂಸದರಿದ್ದರೂ, ಎರಡು ಕ್ಯಾಬಿನೆಟ್ ಸ್ಥಾನ ನೀಡಿದ್ದರು. ಕಾಂಗ್ರೆಸ್ ಸಂಖ್ಯೆಗಳ ಬಗ್ಗೆ ಯೋಚಿಸುವುದಿಲ್ಲ; ಪಕ್ಷವನ್ನುತನ್ನ ಮಿತ್ರ ಎಂದು ಗೌರವಿಸುತ್ತದೆ,ʼ ಎಂದು ಅವರು ಹೇಳಿದರು.

ʻಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಕೂಡ ಎಲ್ಲರನ್ನೂ ಗೌರವದಿಂದ ನಡೆಸಿಕೊಂಡರು. ಯಾವುದೇ ಸೂತ್ರಕ್ಕೆ ಅಂಟಿಕೊಳ್ಳಲಿಲ್ಲ.ನಮ್ಮ ಸಂಬಂಧ ಪರಸ್ಪರ ಗೌರವ ಮತ್ತು ಅರ್ಹತೆಯನ್ನು ಆಧರಿಸಿದೆ,ʼ ಎಂದು ಸುಳೆ ಹೇಳಿದರು.

Read More
Next Story