Modi 3.0 Budget | ಕಾಂಗ್ರೆಸ್‌ ಪ್ರಣಾಳಿಕೆಯ ಯಥಾ ನಕಲು: ಕೇಂದ್ರ ಬಜೆಟ್‌ ವಿರುದ್ಧ ವಿಪಕ್ಷ ನಾಯಕರ ಕಟು ಟೀಕೆ
x

Modi 3.0 Budget | ಕಾಂಗ್ರೆಸ್‌ ಪ್ರಣಾಳಿಕೆಯ ಯಥಾ ನಕಲು: ಕೇಂದ್ರ ಬಜೆಟ್‌ ವಿರುದ್ಧ ವಿಪಕ್ಷ ನಾಯಕರ ಕಟು ಟೀಕೆ


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್‌ನಲ್ಲಿ ಮಂಡಿಸಿದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಕುರಿತು ಪ್ರತಿಪಕ್ಷ ನಾಯಕರು ಕಟುವಾಗಿ ಟೀಕಿಸಿದ್ದಾರೆ.

ಇದೊಂದು ‘ಕುರ್ಚಿ ಉಳಿಸಿಕೊಳ್ಳುವ’ ಹಾಗೂ ಬಿಜೆಪಿ ಮೈತ್ರಿಕೂಟದ ‘ಮಿತ್ರರನ್ನು ಸಮಾಧಾನಪಡಿಸುವ ಬಜೆಟ್ʼ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್ ಗಾಂಧಿ, ‘ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಆಗಿದೆ. ಮೈತ್ರಿ ಪಕ್ಷದವರನ್ನು ಸಮಾಧಾನಪಡಿಸಿ ಇತರ ರಾಜ್ಯದವರಿಗೆ ಪೊಳ್ಳು ಭರವಸೆಗಳನ್ನು ನೀಡುವುದಾಗಿದೆ. ತಮ್ಮ ಶ್ರೀಮಂತ ಉದ್ಯಮಿಗಳನ್ನು ಸಮಾಧಾನಪಡಿಸಿ ಭಾರತದ ಸಾಮಾನ್ಯ ಜನರಿಗೆ ಯಾವುದೇ ಉಪಯೋಗವಾಗದ ಬಜೆಟ್. ಕಾಂಗ್ರೆಸ್‌ನ ಪ್ರಣಾಳಿಕೆ ಹಾಗೂ ಹಿಂದಿನ ಆಯವ್ಯಯಗಳ ಕಾಪಿ ಪೇಸ್ಟ್ ಬಜೆಟ್‌ʼʼ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ನ 2024ರ ಚುನಾವಣೆಯ ಪ್ರಣಾಳಿಕೆ ಹಾಗೂ ಹಿಂದಿನ ಬಜೆಟ್‌ಗಳ ಕಾಪಿ ಪೇಸ್ಟ್‌ ಬಜೆಟ್‌ ಆಗಿದೆ ಎಂದು ರಾಹುಲ್‌ ಹಾಂಧಿ ಹೇಳಿದ್ದಾರೆ.

ಕಾಪಿಕ್ಯಾಟ್ ಬಜೆಟ್ ಎಂದ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಎನ್‌ಡಿಎ ಸರ್ಕಾರದ ಬಜೆಟ್‌ ವಿರೋಧಿಸಿದ್ದಾರೆ.

ʼಎಕ್ಸ್‌ʼನಲ್ಲಿ ಬಜೆಟ್‌ ಕುರಿತು ಪೋಸ್ಟ್ ಮಾಡಿರುವ ಅವರು, ʻʻಮೋದಿ ಸರ್ಕಾರಕ್ಕೆ ‘ಕಾಪಿಕ್ಯಾಟ್ ಬಜೆಟ್’ ಮೂಲಕ ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಸರಿಯಾಗಿ ನಕಲು ಮಾಡಲೂ ಸಾಧ್ಯವಾಗಲಿಲ್ಲ. ಎನ್‌ಡಿಎ ಸರ್ಕಾರ ಉಳಿಸಿಕೊಳ್ಳಲು ಮೋದಿ ಸರ್ಕಾರವು ಬಜೆಟ್ ಮೂಲಕ ತನ್ನ ಮಿತ್ರ ಪಕ್ಷಗಳನ್ನು ವಂಚಿಸುತ್ತಿದೆ. ಇದು ದೇಶದ ಪ್ರಗತಿಗಾಗಿ ಅಲ್ಲ, ಮೋದಿ ಸರ್ಕಾರದ ಉಳಿವಿಗಾಗಿನ ಬಜೆಟ್ʼʼ ಎಂದು ಟೀಕಿಸಿದ್ದಾರೆ.

ʻʻವಾರ್ಷಿಕವಾಗಿ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸವಾಲನ್ನು ಎದುರಿಸುವ ಬದಲು, ತಮ್ಮ ಅಧಿಕಾರದ ಹತ್ತು ವರ್ಷಗಳ ನಂತರ ಯುವಜನರಿಗೆ ಸೀಮಿತ ಘೋಷಣೆಗಳನ್ನು ಮಾಡಲಾಗಿದೆ. ರೈತರ ಬಗ್ಗೆ ಕೇವಲ ಮೇಲ್ನೋಟದ ಮಾತುಗಳಿದೆ. ಒಂದೂವರೆ ಪಟ್ಟು ಎಂಎಸ್‌ಪಿ, ಆದಾಯವನ್ನು ದ್ವಿಗುಣಗೊಳಿಸುವುದು ಮೊದಲಾದವುಗಳು ಅಂತಹ ಕಣ್ಣೊರೆಸುವ ಘೋಷಣೆಗಳು. ಎಲ್ಲವೂ ಚುನಾವಣಾ ವಂಚನೆಯಾಗಿದೆ. ಈ ಸರ್ಕಾರಕ್ಕೆ ಗ್ರಾಮೀಣ ಜನರ ಆದಾಯ ಹೆಚ್ಚಿಸುವ ಯಾವುದೇ ಇರಾದೆ ಇಲ್ಲʼʼ ಎಂದು ಖರ್ಗೆ ಬಜೆಟ್‌ ಖಂಡಿಸಿದ್ಧಾರೆ.

ʻʻದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಧ್ಯಮ ವರ್ಗ ಮತ್ತು ಗ್ರಾಮೀಣ ಬಡವರಿಗೆ ಕಾಂಗ್ರೆಸ್-ಯುಪಿಎ ಜಾರಿಗೆ ತಂದಂತಹ ಕ್ರಾಂತಿಕಾರಿ ಯೋಜನೆಗಳಾವೂ ಈ ಬಜೆಟ್‌ನಲ್ಲಿ ಇಲ್ಲ. ಬದಲಾಗಿ ‘ಬಡವರು’ ಎಂಬ ಪದವನ್ನು ಈ ಸರ್ಕಾರ ತನ್ನನ್ನು ತಾನು ಬ್ರಾಂಡ್ ಮಾಡಿಕೊಳ್ಳುವ ಸಾಧನವಾಗಿ ಮಾರ್ಪಡಿಸಿಕೊಂಡಿದೆʼʼ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆಯ ಯಥಾ ಕಾಪಿ: ಪಿ ಚಿದಂಬರಂ

ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವುದು ಕೇಂದ್ರ ಬಜೆಟ್‌ ಅಲ್ಲ; ಬದಲಾಗಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿದ್ದ ಚುನಾವಣಾ ಪ್ರಣಾಳಿಕೆ ಇದು ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಲೇವಡಿ ಮಾಡಿದ್ದಾರೆ.

"ಚುನಾವಣಾ ಫಲಿತಾಂಶದ ಬಳಿಕ ಗೌರವಾನ್ವಿತ ಹಣಕಾಸು ಸಚಿವರು ಲೋಕಸಭೆ ಚುನಾವಣೆ 2024ರ ಕಾಂಗ್ರೆಸ್ ಪ್ರಣಾಳಿಕೆಯನ್ನು ಲೋಕಸಭೆಯಲ್ಲಿ ಮಂಗಳವಾರ ಓದಿರುವುದನ್ನು ತಿಳಿದು ಸಂತೋಷವಾಯಿತು" ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.

"ಕಾಂಗ್ರೆಸ್ ಪ್ರಣಾಳಿಕೆಯ 30ನೇ ಪುಟದಲ್ಲಿ ಪ್ರಸ್ತಾಪಿಸಲಾಗಿರುವ ಉದ್ಯೋಗ ಸಂಬಂಧಿ ಭತ್ಯೆಯನ್ನು (ಇಎಲ್‌ಐ) ನಿರ್ಮಲಾ ಅವರು ವಸ್ತುಶಃ ಅಳವಡಿಸಿಕೊಂಡಿಸಿರುವುದು ನನಗೆ ಖುಷಿ ನೀಡಿದೆ" ಎಂದು ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಟೀಕಿಸಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯ 11ನೇ ಪುಟದಲ್ಲಿ ಹೇಳಿದ್ದ ಪ್ರತಿ ಯುವಕರಿಗೆ ಅಪ್ರೆಂಟೈಸ್‌ಗೆ ಭತ್ಯೆ ನೀಡುವುದನ್ನು ಒಳಗೊಂಡಂತೆ ಅಪ್ರೆಂಟೈಸ್ ಯೋಜನೆಯನ್ನು ಅವರು ಪರಿಚಯಿಸಿರುವುದು ನನಗೆ ಹರ್ಷ ತಂದಿದೆ. ಕಾಂಗ್ರೆಸ್ ಪ್ರಣಾಳಿಕೆಯ ಇನ್ನೂ ಕೆಲವು ಯೋಜನೆಗಳನ್ನು ಕೂಡ ಹಣಕಾಸು ಸಚಿವರು ನಕಲು ಮಾಡಬೇಕಿತ್ತು ಎಂದು ನಾನು ಬಯಸುತ್ತೇನೆ ಎಂದಿರುವ ಅವರು, ಕೈತಪ್ಪಿದ ಕೆಲವು ಅವಕಾಶಗಳ ಪಟ್ಟಿಯನ್ನು ನೀಡುವುದಾಗಿ ಹೇಳಿದ್ದಾರೆ.

ಹಾಗೆಯೇ, ಕಾಂಗ್ರೆಸ್ ಪ್ರಣಾಳಿಕೆಯ 31ನೇ ಪುಟದಲ್ಲಿ ಪ್ರಸ್ತಾಪಿಸಲಾಗಿದ್ದ ಮತ್ತು ಅನೇಕ ವರ್ಷಗಳಿಂದ ಕಾಂಗ್ರೆಸ್ ಬೇಡಿಕೆಯಾಗಿದ್ದ ʼಏಂಜಲ್ ಟ್ಯಾಕ್ಸ್ʼ ರದ್ದತಿಯನ್ನು ಹಣಕಾಸು ಸಚಿವರು ಈಡೇರಿಸಿರುವುದು ಸಂತಸ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.

ʼನ್ಯಾಯಪತ್ರʼದ ನಕಲು ಎಂದ ಜೈರಾಮ್ ರಮೇಶ್

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಅಂಶಗಳು ಎಂದು ಪ್ರತಿಪಾದಿಸಿದ್ದಾರೆ.

"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನ್ಯಾಯ ಪತ್ರ 2024ರಲ್ಲಿನ ಅಂಶಗಳನ್ನು ಹಣಕಾಸು ಸಚಿವರು ತೆಗೆದುಕೊಂಡಿದ್ದಾರೆ. ಅವರು ಘೋಷಿಸಿರುವ ಇಂಟರ್ನ್‌ಶಿಪ್ ಯೋಜನೆಯು ಕಾಂಗ್ರೆಸ್ ಪ್ರಸ್ತಾಪಿಸಿದ್ದ 'ಪೆಹ್ಲಿ ನೌಕ್ರಿ ಪಕ್ಕಿ' ಎಂಬ ಹೆಸರಿನ ಅಪ್ರೆಂಟೈಸ್‌ಶಿಪ್ ಕಾರ್ಯಕ್ರಮ ಆಧರಿಸಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ" ಎಂದಿದ್ದಾರೆ.

"ಇದು ಬಹಳ ತಡವಾಗಿದೆ ಮತ್ತು ಬಹಳ ಅಲ್ಪದ್ದಾಗಿದೆ. ಬಜೆಟ್ ಭಾಷಣವು ಕ್ರಿಯೆಗಿಂತಲೂ ತಪ್ಪುದಾರಿಗೆ ಎಳೆಯುವುದರತ್ತ ಹೆಚ್ಚು ಗಮನ ಹರಿಸಿದೆ" ಎಂದು ಜೈರಾಮ್‌ ರಮೇಶ್ ಟೀಕಿಸಿದ್ದಾರೆ.

Read More
Next Story