
Delimitation Row | ಕ್ಷೇತ್ರ ಪುನರ್‌ವಿಂಗಡಣೆ ಅನ್ಯಾಯದ ವಿರುದ್ಧ ದಕ್ಷಿಣದ ರಾಜ್ಯಗಳು ಒಂದಾಗಬೇಕು: ಸ್ಟಾಲಿನ್
ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕಾಗಿ ರಾಜ್ಯಗಳಿಗೆ ಶಿಕ್ಷೆ ವಿಧಿಸುವುದು ಅನ್ಯಾಯ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಸಭೆಯಲ್ಲಿದ್ದ ಎಲ್ಲ ನಾಯಕರೂ ವಾದಿಸಿದರು.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯ ವಿರುದ್ಧ ಸಿಡಿದೆದ್ದಿರುವ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅವರು ಪ್ರಸ್ತಾವಿತ ನೀತಿ ವಿರುದ್ಧದ ಹೋರಾಟಕ್ಕೆ ದಕ್ಷಿಣ ಭಾರತದ ರಾಜ್ಯಗಳು ಸೇರಿಕೊಂಡು ಸಂಯುಕ್ತ ರಂಗ ರಚಿಸಲು ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ನೀತಿಯನ್ನು "ಅನ್ಯಾಯ" ಎಂದು ಕರೆದಿರುವ ಅವರು, ಈ ಸಮಸ್ಯೆಯ ಪರಿಹಾರಕ್ಕಾಗಿ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರಚಿಸುವುದಾಗಿಯೂ ಹೇಳಿದ್ದಾರೆ.
ಚೆನ್ನೈನ ನಾಮಕ್ಕಲ್ ಕವಿಂಗರ್ ಹಾಲ್‌ನಲ್ಲಿ ಸಿಎಂ ಸ್ಟಾಲಿನ್ ಕರೆದಿದ್ದ ಸರ್ವಪಕ್ಷ ಸಭೆಯ ನಂತರ ಈ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದಾರೆ. ಜನಗಣತಿಯ ಆಧಾರವೊಂದನ್ನೇ ಇಟ್ಟುಕೊಂಡು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ತಮಿಳುನಾಡು ವಿರೋಧಿಸಲಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ 123 ರಾಜಕೀಯ ಪಕ್ಷಗಳ ನಾಯಕರು ಹೇಳಿದರು.
ದಕ್ಷಿಣದ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯ ಕಡಿಮೆ ಮಾಡುವ ಯಾವುದೇ ಡಿಲಿಮಿಟೇಶನ್(Delimitation) ಪ್ರಕ್ರಿಯೆಯನ್ನು ಸರ್ವಾನುಮತದಿಂದ ತಿರಸ್ಕರಿಸಲಾಯಿತು. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕಾಗಿ ರಾಜ್ಯಗಳಿಗೆ ದಂಡ ವಿಧಿಸುವುದು ಅನ್ಯಾಯ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಸಭೆಯಲ್ಲಿದ್ದ ಎಲ್ಲ ನಾಯಕರೂ ವಾದಿಸಿದರು.
ಸಭೆಯ ನಿರ್ಣಯಗಳೇನು?
1971ರ ಜನಸಂಖ್ಯಾ ಅಂಕಿಅಂಶಗಳ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆ ಮೇಲೆ ಪ್ರಸ್ತುತ ಹೇರಲಾಗಿರುವ ತಡೆಯನ್ನು 2026ರಾಚೆಗೂ ವಿಸ್ತರಿಸಬೇಕು. ಡಿಲಿಮಿಟೇಶನ್(Delimitation) ಪ್ರಸ್ತಾಪಕ್ಕೆ ಸಾಮೂಹಿಕ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಇತರೆ ರಾಜ್ಯಗಳೊಂದಿಗೆ ತಕ್ಷಣವೇ ತೊಡಗಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಮುಂಬರುವ ದಿನಗಳಲ್ಲಿ, ಜೆಎಸಿ(ಜಂಟಿ ಕ್ರಿಯಾ ಸಮಿತಿ)ಯಲ್ಲಿ ಭಾಗವಹಿಸುವಂತೆ ಕೋರಿ ದಕ್ಷಿಣ ಭಾರತದ ಇತರ ರಾಜ್ಯಗಳ ರಾಜಕೀಯ ಪಕ್ಷಗಳೊಂದಿಗೆ ಅಧಿಕೃತ ಸಂಪರ್ಕವನ್ನು ತಮಿಳುನಾಡು(TamilNadu) ಸಾಧಿಸಲಿದೆ. ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ರಕ್ಷಿಸಲು ಮತ್ತು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನ್ಯಾಯಸಮ್ಮತತೆ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಬಲಪಡಿಸಲು ಸಂಘಟಿತ ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.