ಮದುವೆಗೆ ಪೀಡಿಸಿದ ಅಪ್ರಾಪ್ತ ಬಾಲಕಿ; ಬೆಂಕಿ ಇಟ್ಟು ಕೊಂದ ಭೂಪ
ಮದುವೆ ಆಗುವಂತೆ ಪೀಡಿಸಿದ ಅಪ್ರಾಪ್ತ ಬಾಲಕಿಗೆ ಪ್ರಿಯಕರನೇ ಬೆಂಕಿ ಹಚ್ಚಿ ಕೊಂದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಮದುವೆಯಾಗುವಂತೆ ಪೀಡಿಸಿದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ಪ್ರಿಯಕರನೇ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ಆಂಧ್ರಪ್ರದೇಶದ ಬದ್ವೇಲ್ ಹೊಲವಲಯದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಜೆ.ವಿಘ್ನೇಶ್ ಅಪ್ರಾಪ್ತ ಬಾಲಕಿಯನ್ನು ಕೊಂಚ ಕಿರಾತಕ. ಶನಿವಾರ ಬೆಳಿಗ್ಗೆ ಬಾಲಕಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಬಾಲಕಿಯನ್ನು ಕಡಪಾದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಮುಂಜಾನೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಮೈದುಕೂರು ಉಪವಿಭಾಗದ ಪೊಲೀಸ್ ಅಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಆರೋಪಿ ವಿಘ್ನೇಶ್ ಮತ್ತು ಅಪ್ರಾಪ್ತ ಬಾಲಕಿ ಕಳೆದ ಆರು ತಿಂಗಳಿಂದ ಪರಸ್ಪರ ದೈಹಿಕ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಆರೋಪಿಯು ಬೇರೆ ಯುವತಿಯನ್ನು ಮದುವೆಯಾಗಿದ್ದ. ಈ ವಿಷಯ ತಿಳಿದ ಅಪ್ರಾಪ್ತ ಬಾಲಕಿ ತನ್ನನ್ನು ಮದುವೆಯಾಗುವಂತೆ ವಿಘ್ನೇಶ್‌ನನ್ನು ಪೀಡಿಸುತ್ತಿದ್ದಳು. ಇದರಿಂದ ಬೇಸತ್ತ ಆರೋಪಿ ವಿಘ್ನೇಶ್ ಬಾಲಕಿ ಮೇಲೆ ಪೆಟ್ರೋಲ್ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ, ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಆರೋಪಿಗೆ ಕಠಿಣ ಶಿಕ್ಷೆ ನೀಡಲು ತ್ವರಿತವಾಗಿ ತನಿಖೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಸಜೀವವಾಗಿ ಸುಟ್ಟುಹಾಕಿರುವ ಘಟನೆ ಅತ್ಯಂತ ದುಃಖಕರ ಬೆಳವಣಿಗೆ. ದುಷ್ಟರ ದುಷ್ಕೃತ್ಯದಿಂದ ವಿದ್ಯಾರ್ಥಿನಿಯ ಉತ್ಕೃಷ್ಟ ಭವಿಷ್ಯ ಹಾಳಾಗಿದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕಾದರೆ ಕೊಲೆಗಾರನನ್ನು ಕಾನೂನಿನ ಪ್ರಕಾರ ತ್ವರಿತವಾಗಿ ಶಿಕ್ಷಿಸುವುದು ಅವಶ್ಯ. ಅದಕ್ಕಾಗಿ, ಅಪರಾಧಿಗೆ ಮರಣದಂಡನೆ ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯದಲ್ಲಿ ತ್ವರಿತವಾಗಿ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ನಾಯ್ಡು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.