ವಿಶಾಖಪಟ್ಟಣಂನಲ್ಲಿ ಲಘು ಭೂಕಂಪ: ಬೆಚ್ಚಿಬಿದ್ದ ಜನತೆ
x

ವಿಶಾಖಪಟ್ಟಣಂನಲ್ಲಿ ಲಘು ಭೂಕಂಪ: ಬೆಚ್ಚಿಬಿದ್ದ ಜನತೆ

ನಗರದ ಅರಿಲೋವ, ಅಕ್ಕಯ್ಯಪಾಳ್ಯ, ಎಚ್‌ಬಿ ಕಾಲೋನಿ, ಸೀಮಾಚಲಂ, ಭೀಮಿಲಿ, ಪೆಂಡುರ್ತಿ, ಮಾಧವಧಾರ, ಗಾಂಧಿನಗರ, ಮುರಳಿ ನಗರ, ಗಾಜುವಾಕ, ಮಧುರವಡ ಮತ್ತು ಎಂವಿಪಿ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ 3 ರಿಂದ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.


ಆಂಧ್ರಪ್ರದೇಶದ ಕರಾವಳಿ ನಗರ ವಿಶಾಖಪಟ್ಟಣಂನಲ್ಲಿ ಮಂಗಳವಾರ (ನವೆಂಬರ್ 4) ಮುಂಜಾನೆ ಲಘು ಭೂಕಂಪ ಸಂಭವಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿಬಂದ ಘಟನೆ ನಡೆದಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.7 ಎಂದು ದಾಖಲಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Centre for Seismology) ನೀಡಿರುವ ಮಾಹಿತಿಯ ಪ್ರಕಾರ, ಮುಂಜಾನೆ ಸುಮಾರು 4:19ಕ್ಕೆ ಭೂಮಿ ಕಂಪಿಸಿದೆ. ಇದರ ಕೇಂದ್ರಬಿಂದು ವಿಶಾಖಪಟ್ಟಣಂಗೆ ಸಮೀಪದ ಅಲ್ಲುರಿ ಸೀತಾರಾಮ ರಾಜು (ASR) ಜಿಲ್ಲೆಯ ಹುಕುಂಪೇಟ ಮಂಡಲದ ಜೋಗುಲಪುಟ್ಟು ಗ್ರಾಮದ ಬಳಿ, 10 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಅರಿಲೋವ, ಅಕ್ಕಯ್ಯಪಾಳ್ಯ, ಎಚ್‌ಬಿ ಕಾಲೋನಿ, ಸೀಮಾಚಲಂ, ಭೀಮಿಲಿ, ಪೆಂಡುರ್ತಿ, ಮಾಧವಧಾರ, ಗಾಂಧಿನಗರ, ಮುರಳಿ ನಗರ, ಗಾಜುವಾಕ, ಮಧುರವಡ ಮತ್ತು ಎಂವಿಪಿ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ 3 ರಿಂದ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಗಾಢ ನಿದ್ರೆಯಲ್ಲಿದ್ದ ಜನರು ಹಾಸಿಗೆ ಮತ್ತು ಕಿಟಕಿಗಳು ಅಲುಗಾಡುತ್ತಿದ್ದಂತೆ ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವು ಕಡೆಗಳಲ್ಲಿ ಭೂಕಂಪನದ ಜೊತೆಗೆ ದೊಡ್ಡ ಶಬ್ದವೂ ಕೇಳಿಬಂದಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ.

ಹಾನಿ ವರದಿಯಾಗಿಲ್ಲ

ಭೂಕಂಪದ ತೀವ್ರತೆ ಕಡಿಮೆ ಇದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಆದಾಗ್ಯೂ, ಸಂಭವನೀಯ ಪಶ್ಚಾತ್​ ಕಂಪನಗಳ (aftershocks) ಬಗ್ಗೆ ಜಾಗರೂಕರಾಗಿರಲು ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ನಾಗರಿಕರಿಗೆ ಸಲಹೆ ನೀಡಿದ್ದಾರೆ.

Read More
Next Story