![Namma Metro Fare Hike | ನಮ್ಮ ಮೆಟ್ರೊ ಪ್ರಯಾಣ ದರ ಇಳಿಕೆಗೆ ಸಂಸತ್ನಲ್ಲಿ ತೇಜಸ್ವಿ ಸೂರ್ಯ ಮನವಿ Namma Metro Fare Hike | ನಮ್ಮ ಮೆಟ್ರೊ ಪ್ರಯಾಣ ದರ ಇಳಿಕೆಗೆ ಸಂಸತ್ನಲ್ಲಿ ತೇಜಸ್ವಿ ಸೂರ್ಯ ಮನವಿ](https://karnataka.thefederal.com/h-upload/2025/02/11/512053-tejaswi-surya.webp)
Namma Metro Fare Hike | ನಮ್ಮ ಮೆಟ್ರೊ ಪ್ರಯಾಣ ದರ ಇಳಿಕೆಗೆ ಸಂಸತ್ನಲ್ಲಿ ತೇಜಸ್ವಿ ಸೂರ್ಯ ಮನವಿ
Metro Fare Hike : ಬೆಲೆ ಏರಿಕೆ ಯಾರು ಮಾಡಿದ್ದು ಎಂಬ ಚರ್ಚೆಯ ನಡುವೆಯೇ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವ ಕಾರಣ, ದರ ನಿಯಂತ್ರಣ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ ಎಂಬುದು ಸ್ಪಷ್ಟವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮೆಟ್ರೊ ಪ್ರಯಾಣ ದರ ಗಗನಕ್ಕೇರಿ (Metro Fare Hike) ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ನಿತ್ಯ ಪ್ರಯಾಣಕ್ಕೆ ಮೆಟ್ರೊ ನೆಚ್ಚಿಕೊಂಡಿರುವ ಮಂದಿ ಬೆಲೆ ಏರಿಕೆಯ ಪ್ರಮಾಣ ನೋಡಿ ಹೌಹಾರಿದ್ದಾರೆ. ಇದರ ಪರಿಣಾಮವಾಗಿ, ದರ ಕಡಿಮೆ ಮಾಡಬೇಕು ಎಂದು ಒಕ್ಕೊರಲ ಪ್ರತಿರೋಧ ನಗರದಲ್ಲಿ ಸೃಷ್ಟಿಯಾಗಿದೆ.
ಈ ಆಂದೋಲನದ ಕಾವು ಕೇಂದ್ರ ಹಾಗೂ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ತಟ್ಟಿದೆ. ಏತನ್ಮಧ್ಯೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ದರ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಂಸತ್ನಲ್ಲಿ ಮಾತನಾಡಿರುವ ಕುರಿತು ತೇಜಸ್ವಿ ಸೂರ್ಯ ಅವರು ಆ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ''ಇಂದು (ಮಂಗಳವಾರ) ಸಂಸತ್ತಿನ ಶೂನ್ಯ ವೇಳೆಯಲ್ಲಿ, ಮೆಟ್ರೋ ಬೆಲೆ ಏರಿಕೆಯು ಬೆಂಗಳೂರಿನ ಮಧ್ಯಮ ವರ್ಗದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ನಾನು ಮಾತನಾಡಿದೆ. ದರ ಹೆಚ್ಚಳದ ಅಸಂಗತೆಯಿಂದಾಗಿ ಅಲ್ಪ-ದೂರದ ಪ್ರಯಾಣ ದರ ಶೇಕಡಾ 100ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಬೆಂಗಳೂರು ಮೆಟ್ರೋವನ್ನು ದೇಶದ ಅತ್ಯಂತ ದುಬಾರಿ ಮೆಟ್ರೋ ಜಾಲವನ್ನಾಗಿ ಮಾಡಿದೆ. ನಗರಕ್ಕೆ ಸುಸ್ಥಿರ ಸಾರ್ವಜನಿಕ ಸಾರಿಗೆ ಪರಿಹಾರ ಕೊಡುವ ಉದ್ದೇಶವನ್ನೇ ಬುಡಮೇಲು ಮಾಡಿದೆ. ದರ ಪರಿಶೀಲನೆಯಲ್ಲಿ ಉಂಟಾಗಿರುವ ಅಸಮರ್ಪಕತೆಯನ್ನು ಪರಿಶೀಲಿಸುವಂತೆ ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವರ ರೀತಿಯಲ್ಲಿ ಟಿಕೆಟ್ ದರ ನಿಗದಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದೇನೆ'' ಎಂದು ಅವರು ಬರೆದುಕೊಂಡಿದ್ದಾರೆ.
ಬೆಲೆ ಏರಿಕೆ ಯಾರು ಮಾಡಿದ್ದು ಎಂಬ ಚರ್ಚೆಯ ನಡುವೆಯೇ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವ ಕಾರಣ, ದರ ನಿಯಂತ್ರಣ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ ಎಂಬುದು ಸ್ಪಷ್ಟವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ನಾವು ಮಾಡಿಲ್ಲ ಎಂದ ಸಿಎಂ
ಮೆಟ್ರೊ ದರ ಏರಿಕೆ ಕುರಿತು ಸಿಎಂ ಸಿದ್ದರಾಮಯ್ಯ ಮಂಗಳವಾರ ಸೋಶಿಯಲ್ ಮೀಡಿಯಾಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರ ಮಾಡಿರುವುದು ಎಂಬ ಬಿಜೆಪಿ ಆರೋಪಗಳು ಸುಳ್ಳು ಎಂಬುದಾಗಿ ಹೇಳಿದ್ದಾರೆ. ಸುದೀರ್ಘ ಪೋಸ್ಟ್ ಮೂಲಕ ವಿವರಣೆ ಕೊಟ್ಟಿದ್ದಾರೆ.
ದೆಹಲಿ ಮೆಟ್ರೋ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮೊದಲ ಹಂತದ ಪ್ರಯಾಣ ದರವನ್ನು ಆಯಾ ರಾಜ್ಯಗಳ ಮೆಟ್ರೊ ನಿಗಮಗಳೇ ನಿಗದಿ ಪಡಿಸಿತ್ತು. ಈಗ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ನೇಮಿಸುವ ಸಮಿತಿ ನಿಗದಿಪಡಿಸುತ್ತದೆ. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆಯ ಸೆಕ್ಷನ್ 37ರ ಪ್ರಕಾರ ಪ್ರಯಾಣ ದರ ನಿಗದಿ ಸಮಿತಿ ನೀಡಿದ ವರದಿಯನ್ನು ಮೆಟ್ರೋ ರೈಲು ನಿಗಮಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ಸಿಎಂ ಹೇಳಿದ್ದಾರೆ.