Menstruating Dalit Student Made To Take Exams Outside Class In Tamil Nadu
x
ಎಐ ಸೃಷ್ಟಿಸಿದ ಚಿತ್ರ.

ಮುಟ್ಟಾದ ದಲಿತ ವಿದ್ಯಾರ್ಥಿನಿಯನ್ನು ಶಾಲೆಯ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಶಿಕ್ಷಕರು!

ಕೊಯಮತ್ತೂರು ಜಿಲ್ಲೆಯ ಖಾಸಗಿ ಶಾಲೆಯೊಂದರ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮುಟ್ಟಾಗಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಶಾಲೆಯಿಂದ ಹೊರಕ್ಕೆ ಮೆಟ್ಟಿಲಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆದಿದ್ದು, ದೊಡ್ಡ ವಿವಾದ ಸೃಷ್ಟಿಯಾಗಿದೆ.


ನಮ್ಮ ದೇಶದಲ್ಲಿ ಶಿಕ್ಷಣದ ಮಟ್ಟ ಎಷ್ಟೇ ಏರಿಕೆಯಾದರೂ ತಾರತಮ್ಯ ಹಾಗೂ ಅಮಾನವೀಯ ಪ್ರಸಂಗಗಳು ಪ್ರತಿ ನಿತ್ಯ ದಾಖಲಾಗುತ್ತಿರುತ್ತವೆ. ಇಂಥದ್ದೇ ಒಂದು ನಾಚಿಕೆಗೇಡಿನ ಪ್ರಸಂಗ ತಮಿಳುನಾಡಿನಲ್ಲಿ ನಡೆದಿದೆ. ಅದೂ ಶಿಕ್ಷಣ ಕೊಟ್ಟು ಎಲ್ಲರನ್ನೂ ವಿವೇಕಶೀಲರನ್ನಾಗಿ ಮಾಡಬೇಕಾದ ಶಾಲೆಯಲ್ಲಿ ಎಂಬುದು ಖೇದಕರ ವಿಚಾರ.

ಕೊಯಮತ್ತೂರು ಜಿಲ್ಲೆಯ ಖಾಸಗಿ ಶಾಲೆಯೊಂದರ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮುಟ್ಟಾಗಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಶಾಲೆಯಿಂದ ಹೊರಕ್ಕೆ ಮೆಟ್ಟಿಲಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆದಿರುವುದೇ ಈ ಮೂರ್ಖತನದ ಕೆಲಸ. ಅಲ್ಲದೆ ಆಕೆ, ದಲಿತ ಸಮುದಾಯದವಳು ಎಂಬುದು ಇನ್ನೊಂದು ಆಘಾತಕಾರಿ ವಿಚಾರ.

ವಿದ್ಯಾರ್ಥಿನಿ ತರಗತಿಯ ಮೆಟ್ಟಿಲುಗಳ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಘಟನೆಯಿಂದ ಆಕ್ರೋಶ ವ್ಯಕ್ತಗೊಂಡಿದ್ದು, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

1 ನಿಮಿಷ 22 ಸೆಕೆಂಡ್‌ಗಳ ಈ ವೀಡಿಯೊ ಎನ್​​ಟಿವಿಯಲ್ಲಿ ಪ್ರಕಟವಾಗಿದ್ದು, ವಿದ್ಯಾರ್ಥಿನಿ ಮೆಟ್ಟಿಲುಗಳ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವುದನ್ನು ಕಾಣಬಹುದು. ಅವಳ ಉತ್ತರ ಪತ್ರಿಕೆಯಲ್ಲಿ ಶಾಲೆಯ ಹೆಸರು "ಸ್ವಾಮಿ ಚಿದ್ಭವಾನಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಸ್ಕೂಲ್, ಸೆಂಗುಟ್ಟೈಪಾಳಯಂ" ಎಂದು ಇದೆ. ವೀಡಿಯೊದಲ್ಲಿ, ವಿದ್ಯಾರ್ಥಿನಿ ಮಹಿಳೆಯೊಬ್ಬರ ಜತೆ ಮಾತನಾಡುತ್ತಿದ್ದಾಳೆ. ಆ ಮಹಿಳೆ ಅವಳ ತಾಯಿ ಎಂದು ಹೇಳಲಾಗಿದೆ. "ಮುಖ್ಯ ಶಿಕ್ಷಕರು ನನ್ನನ್ನು ಇಲ್ಲಿ ಕುಳಿತು ಪರೀಕ್ಷೆ ಬರೆಯಲು ಹೇಳಿದರು" ಎಂದು ಆಕೆ ದೂರುವುದನ್ನು ಕಾಣಹುದು. ಇದು ಮೊದಲ ಬಾರಿಯಲ್ಲ, ಈ ಹಿಂದೆಯೂ ಆಕೆಯನ್ನು ಬೇರೊಂದು ಪ್ರತ್ಯೇಕ ಸ್ಥಳದಲ್ಲಿ ಪರೀಕ್ಷೆ ಬರೆಯುವಂತೆ ಮಾಡಲಾಗಿತ್ತು ಎಂದು ಆಕೆ ಹೇಳಿದ್ದಾರೆ.

"ನೀನು ಮುಟ್ಟಾದರೆ ತರಗತಿಯೊಳಗೆ ಪರೀಕ್ಷೆ ಬರೆಯಲು ಬಿಡುವುದಿಲ್ಲವೇ?" ಎಂದು ತಾಯಿ ಪ್ರಶ್ನಿಸುವ ಧ್ವನಿ ಕೇಳಿಸುತ್ತದೆ. ಆ ದಿನವೇ ವಿದ್ಯಾರ್ಥಿನಿಗೆ ಋತುಸ್ರಾವ ಪ್ರಾರಂಭವಾಯಿತೋ ಅಥವಾ ಹಿಂದಿನ ದಿನಗಳಲ್ಲಿ ಆಗಿತ್ತೋ ಎಂಬುದು ಸ್ಪಷ್ವವಾಗಿಲ್ಲ.

ಶಾಲೆಯ ಸಮಜಾಯಿಷಿ

ಶಾಲೆಯ ಆಡಳಿತ ಮಂಡಳಿ ಸಮಜಾಯಿಷಿ ನೀಡಿದ್ದು. ವಿದ್ಯಾರ್ಥಿನಿಯ ತಾಯಿಯೇ ಮಗಳನ್ನು ಪರೀಕ್ಷೆ ಸಮಯದಲ್ಲಿ ಹೊರಗೆ ಕುಳಿತು ಬರೆಯುವಂತೆ ಕೊರಿದ್ದರು ಎಂದು ಹೇಳಿಕೊಂಡಿದೆ.

ಘಟನೆ ಬಗ್ಗೆ ಆಕ್ರೋಶ ಉಂಟಾಗಿದ್ದು, ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ ಔಪಚಾರಿಕ ತನಿಖೆಗೆ ಆದೇಶಿಸಿದೆ. ಶಾಲಾ ಶಿಕ್ಷಣ ಇಲಾಖೆಯು ಶಾಲೆಯ ಆಡಳಿತ ಮಂಡಳಿಯಿಂದ ವಿವರಣೆ ಕೋರಿದೆ. "ಖಾಸಗಿ ಶಾಲೆಗಳ ಶಿಕ್ಷಣ ನಿರ್ದೇಶಕ ಡಾ. ಎಂ. ಪಳನಿಸಾಮಿ ಅವರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ತಪ್ಪು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ ಎಂದು ಎನ್​​ಡಿವಿಯಲ್ಲಿ ವರದಿಯಾಗಿದೆ.

ಶಿಕ್ಷಣ ಸಚಿವರ ಹೇಳಿಕೆಯೇನು?

ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರು, ಮಕ್ಕಳ ವಿರುದ್ಧ ಯಾವುದೇ ರೀತಿಯ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, "ಖಾಸಗಿ ಶಾಲೆಯ ವಿರುದ್ಧ ಇಲಾಖಾ ತನಿಖೆ ನಡೆಸಲಾಗಿದೆ. ಶಾಲೆಯ ಪ್ರಧಾನ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಮಕ್ಕಳ ಮೇಲಿನ ಯಾವುದೇ ರೀತಿಯ ದೌರ್ಜನ್ಯ ಸಹಿಸಲಾಗುವುದಿಲ್ಲ" ಎಂದು ಬರೆದಿದ್ದಾರೆ.

Read More
Next Story