
ಮಸಾಲಾ ಬಾಂಡ್ ಹಗರಣ: ಕೇರಳ ಸಿಎಂ ಪಿಣರಾಯಿ ವಿಜಯನ್, ಮಾಜಿ ಸಚಿವರಿಗೆ ಇಡಿ ನೋಟಿಸ್
ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (KIIFB) ಮಸಾಲಾ ಬಾಂಡ್‌ಗಳ ಮೂಲಕ 2,000 ಕೋಟಿ ರೂ.ಗೂ ಹೆಚ್ಚು ಬಂಡವಾಳ ಸಂಗ್ರಹಿಸಿತ್ತು. ಈ ಹಣದ ಬಳಕೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಇಡಿಯ ಪ್ರಮುಖ ಆರೋಪವಾಗಿದೆ.
ಕೇರಳ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ 'ಮಸಾಲಾ ಬಾಂಡ್' ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಹತ್ವದ ಕ್ರಮ ಕೈಗೊಂಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಯ ಆರೋಪದಡಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಅವರಿಗೆ ಇಡಿ ಬರೋಬ್ಬರಿ 466 ಕೋಟಿ ರೂ.ಗಳ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (KIIFB) ಮಸಾಲಾ ಬಾಂಡ್‌ಗಳ ಮೂಲಕ 2,000 ಕೋಟಿ ರೂ.ಗೂ ಹೆಚ್ಚು ಬಂಡವಾಳ ಸಂಗ್ರಹಿಸಿತ್ತು. ಈ ಹಣದ ಬಳಕೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಇಡಿಯ ಪ್ರಮುಖ ಆರೋಪವಾಗಿದೆ.
ಸುಮಾರು ಮೂರು ವರ್ಷಗಳ ಸುದೀರ್ಘ ತನಿಖೆಯ ನಂತರ ಇಡಿ ಈ ಕ್ರಮಕ್ಕೆ ಮುಂದಾಗಿದೆ. ಬಾಂಡ್‌ಗಳ ಮೂಲಕ ಸಂಗ್ರಹಿಸಲಾದ ವಿದೇಶಿ ನಿಧಿಯನ್ನು ನಿಯಮಬಾಹಿರವಾಗಿ ರಿಯಲ್ ಎಸ್ಟೇಟ್ ಅಥವಾ ಭೂಮಿ ಖರೀದಿಗೆ ಬಳಸಲಾಗಿದೆ ಎಂದು ತನಿಖಾ ಸಂಸ್ಥೆ ದೂರು ನೀಡಿದೆ . ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಂದಿನ ಹಣಕಾಸು ಸಚಿವ ಥಾಮಸ್ ಐಸಾಕ್ ಮತ್ತು ಸಿಎಂ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ರಹಾಂ ಅವರಿಗೆ ಫೆಮಾ ಕಾಯ್ದೆಯಡಿ ನೋಟಿಸ್ ನೀಡಲಾಗಿದೆ. ಸುಮಾರು 10-12 ದಿನಗಳ ಹಿಂದೆಯೇ ಈ ನೋಟಿಸ್ ಜಾರಿಯಾಗಿದ್ದು, ಸದ್ಯಕ್ಕೆ ಯಾರೂ ವೈಯಕ್ತಿಕವಾಗಿ ಹಾಜರಾಗುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
"ಇದು ಚುನಾವಣಾ ಗಿಮಿಕ್": ಥಾಮಸ್ ಐಸಾಕ್ ಆಕ್ರೋಶ
ಇಡಿ ನೋಟಿಸ್ ಸ್ವೀಕರಿಸಿರುವುದನ್ನು ಖಚಿತಪಡಿಸಿರುವ ಮಾಜಿ ಸಚಿವ ಥಾಮಸ್ ಐಸಾಕ್, ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ. "ಇದು ಶುದ್ಧ ಅಸಂಬದ್ಧ. ನಾವು ಮಸಾಲಾ ಬಾಂಡ್ ನಿಧಿಯನ್ನು ಭೂಮಿ ಖರೀದಿಗೆ ಬಳಸಿಲ್ಲ. ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ನಿಯಮಾನುಸಾರವೇ ನಡೆಸಲಾಗಿದೆ. ಇದು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವ ಗಿಮಿಕ್ ಅಷ್ಟೇ," ಎಂದು ಐಸಾಕ್ ಪ್ರತಿಕ್ರಿಯಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐಸಾಕ್ ವಿಚಾರಣೆಗೆ ಗೈರಾಗಿದ್ದರು ಮತ್ತು ಇಡಿ ತನಿಖೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ಮುಖ್ಯಮಂತ್ರಿ ಮತ್ತು ಇತರರು ಮಸಾಲಾ ಬಾಂಡ್‌ಗಳ ಮೂಲಕ ಬೃಹತ್ ಆರ್ಥಿಕ ಅಕ್ರಮಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಲಾವಲಿನ್ ಪ್ರಕರಣದ ನಂಟಿರುವ ಕಂಪನಿಯೊಂದು ಇದರಲ್ಲಿ ಭಾಗಿಯಾಗಿದೆ ಎಂದು ಅವರು ಗಂಭೀರ ದೋಷಾರೋಪ ಮಾಡಿದ್ದಾರೆ.
ಏನಿದು ಕೆಐಐಎಫ್ಬಿ?
ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (KIIFB) ಎಂಬುದು ರಾಜ್ಯದಲ್ಲಿ ಬೃಹತ್ ಮತ್ತು ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವ ರಾಜ್ಯ ಸರ್ಕಾರದ ಪ್ರಮುಖ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ 50,000 ಕೋಟಿ ರೂ. ಕ್ರೋಢೀಕರಿಸುವ ಯೋಜನೆಯ ಭಾಗವಾಗಿ, 2ಫ019 ರಲ್ಲಿ ಮಸಾಲಾ ಬಾಂಡ್‌ಗಳ ಮೂಲಕ 2,150 ಕೋಟಿ ರೂ. ಸಂಗ್ರಹಿಸಲಾಗಿತ್ತು. ಇದೀಗ ಆ ಹಣದ ವಿನಿಯೋಗವೇ ವಿವಾದಕ್ಕೆ ಕಾರಣವಾಗಿದೆ.

