ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾದ ಸಿಆರ್‌ಪಿಎಫ್ ಯೋಧ ವಜಾ
x

ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾದ ಸಿಆರ್‌ಪಿಎಫ್ ಯೋಧ ವಜಾ

ಮೇಲಧಿಕಾರಿಗಳಿಗೆ ಮಾಹಿತಿ ನೀಡದೇ ಪಾಕ್​ ಮಹಿಳೆಯನ್ನು ಮದುವೆಯಾಗುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹದ್ದು ಎಂದು ಸಿಆರ್‌ಪಿಎಫ್ ಆರೋಪಿಸಿದೆ.


ಮಾಹಿತಿ ನೀಡದೇ ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧ ಮುನೀರ್ ಅಹ್ಮದ್ ಎಂಬುವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ಮುನೀರ್​ ಪಾಕ್ ಮಹಿಳೆ ಮೀನಲ್ ಖಾನ್‌ರನ್ನು ಮದುವೆಯಾಗಿದ್ದ ಹಾಗೂ ವೀಸಾ ಅವಧಿ ಮುಗಿಯುವ ತನಕ ಇರಲು ಅವಕಾಶ ಕೊಟ್ಟಿದ್ದ.

ಮಾಹಿತಿ ನೀಡದೇ ಪಾಕ್​ ಮಹಿಳೆಯನ್ನು ಮದುವೆಯಾಗುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹದ್ದು ಎಂದು ಸಿಆರ್‌ಪಿಎಫ್ ಆರೋಪಿಸಿದೆ. ಪಹಲ್ಗಾಂ ಘಟನೆ ಬಳಿಕ ಭಾರತ ಪಾಕ್​ ಪ್ರಜೆಗಳ ವೀಸಾವನ್ನು ರದ್ದು ಮಾಡಿದ ನಂತರ ಈ ತಪ್ಪು ಬೆಳಕಿಗೆ ಬಂದಿದೆ.

ಮುನೀರ್ ಅಹ್ಮದ್, ಜಮ್ಮುವಿನ ಘರೋಟಾ ಪ್ರದೇಶದ ನಿವಾಸಿಯಾಗಿದ್ದು, 2017ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದರು. ಇವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೀನಲ್ ಖಾನ್ ಎಂಬ ಮಹಿಳೆಯನ್ನು ಆನ್‌ಲೈನ್ ಮೂಲಕ ಭೇಟಿಯಾಗಿ 2024ರ ಮೇ 24ರಂದು ವಿಡಿಯೊ ಕರೆ ಮೂಲಕ 'ನಿಕಾಹ್' ಆಗಿದ್ದರು. ಮೀನಲ್ ಖಾನ್ ಫೆಬ್ರವರಿ 28ರಂದು 15 ದಿನಗಳ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದರು. ಆದರೆ, ಆಕೆಯ ವೀಸಾ ಮಾರ್ಚ್ 22ರಂದು ಮುಕ್ತಾಯಗೊಂಡಿತ್ತು. ಮುನೀರ್ ದೀರ್ಘಕಾಲೀನ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನಿ ನಾಗರಿಕರ ವೀಸಾಗಳನ್ನು ರದ್ದುಗೊಳಿಸಿತ್ತು. ಹೀಗಾಗಿ ಮೀನಲ್ ಅವರಿಗೂ ವೀಸಾ ಸಿಗುವ ಸಾಧ್ಯತೆಗಳು ಇಲ್ಲ.

ಸಿಆರ್‌ಪಿಎಫ್ ಪ್ರಕಾರ, ಮುನೀರ್ ಅಹ್ಮದ್. ತಮ್ಮ ಮದುವೆಯ ವಿಚಾವನ್ನು ಮೇಲಧಿಕಾರಿಗಳಿಗೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ ಮತ್ತು ಮೀನಲ್ ಖಾನ್‌ರ ವೀಸಾ ಮೀರಿದ ನಂತರವೂ ಆಕೆಗೆ ಭಾರತದಲ್ಲಿ ಇರಲು ಬಿಟ್ಟಿದ್ದರು. "ಇದು ಸೇವಾ ನಿಯಮಗಳ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಕೃತ್ಯ," ಎಂದು ಸಿಆರ್‌ಪಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಮುನೀರ್​ ಅಹ್ಮದ್ ಈ ಆರೋಪ ತಳ್ಳಿಹಾಕಿದ್ದಾರೆ. ತಾವು ಡಿಸೆಂಬರ್ 31, 2022ರಂದು ಮದುವೆಯ ಬಗ್ಗೆ ಸಿಆರ್‌ಪಿಎಫ್ ಮುಖ್ಯ ಕಚೇರಿಗೆ ಮಾಹಿತಿ ನೀಡಿದ್ದು, ಏಪ್ರಿಲ್ 30ರಂದು ಅನುಮತಿ ಪಡೆದ ನಂತರವೇ ಮದುವೆಯಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ನಾನು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿದ್ದೇನೆ. ಈ ವಜಾದ ವಿರುದ್ಧ ನ್ಯಾಯಾಲಯದಲ್ಲಿ ಸವಾಲು ಹಾಕುತ್ತೇನೆ ಮತ್ತು ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ," ಎಂದು ಮುನೀರ್ ಹೇಳಿದ್ದಾರೆ.

ಪಹಲ್ಗಾಂ ಭಯೋತ್ಪಾದಕ ದಾಳಿ ಮತ್ತು ಭಾರತ-ಪಾಕಿಸ್ತಾನ ಸಂಬಂಧ

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನ ಬೈಸರನ್ ಮೆಡೋಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನಡೆಸಿದೆ. ಈ ಘಟನೆಯು ಭಾರತ-ಪಾಕಿಸ್ತಾನ ಸಂಬಂಧದಲ್ಲಿ ತೀವ್ರ ಒತ್ತಡವನ್ನು ಉಂಟುಮಾಡಿದ್ದು, ಭಾರತವು ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ.

ಭಾರತ ಸರ್ಕಾರವು ಈ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಿತು, ಅಟಾರಿ-ವಾಘಾ ಗಡಿ ಪ್ರವೇಶ ಮುಚ್ಚಿದೆ. ಪಾಕಿಸ್ತಾನಿ ನಾಗರಿಕರಿಗೆ ವೀಸಾ ರದ್ದುಗೊಳಿಸಿದೆ. ಇಂಡಸ್ ವಾಟರ್ಸ್ ಟ್ರೀಟಿಯನ್ನು ಸ್ಥಗಿತಗೊಳಿಸಿದೆ.

Read More
Next Story