Farmers' protest | ಪೊಲೀಸ್ ಮುಖಾಮುಖಿಯಲ್ಲಿ ರೈತರಿಗೆ ಗಾಯ, ಜಾಥಾ ತಡೆದ ಹರ್ಯಾಣ ಸರ್ಕಾರ
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ವಿಧಿಸಲಾದ ನಿಷೇಧಾಜ್ಞೆ ಉಲ್ಲೇಖಿಸಿ ಮುಂದಕ್ಕೆ ಹೋಗದಂತೆ ಹರಿಯಾಣ ಪೊಲೀಸರು ರೈತರಿಗೆ ಸೂಚಿಸಿದ್ದಾರೆ.
ದೆಹಲಿಯ ಶಂಭು ಗಡಿಯಿಂದ ರೈತರು ಆರಂಭಿಸಿದ್ದ ಕಾಲ್ನಡಿಗೆ ಜಾಥಾ ಸ್ಥಗಿತಗೊಂಡಿದೆ. ಪೊಲೀಸರ ಪ್ರತಿರೋಧದಿಂದ ಇಬ್ಬರು ಗಾಯಗೊಂಡ ಬಳಿಕ ಪ್ರತಿಭಟನೆಯನ್ನು ನಿಲ್ಲಿಸಲಾಗಿದೆ. ಶಂಭು ಗಡಿಯಲ್ಲಿರುವ ತಮ್ಮ ಪ್ರತಿಭಟನಾ ಸ್ಥಳದಿಂದ ದೆಹಲಿಗೆ ಕಾಲ್ನಡಿಗೆ ಮೆರವಣಿಗೆ ಆರಂಭಗೊಂಡರೂ ಅವರನ್ನು ಅಲ್ಲಿಂದ ಮುಂದಕ್ಕೆ ಸಾಗಲು ಪೊಲೀಸರು ಬಿಡಲಿಲ್ಲ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ವಿಧಿಸಲಾದ ನಿಷೇಧಾಜ್ಞೆ ಉಲ್ಲೇಖಿಸಿ ಮುಂದಕ್ಕೆ ಹೋಗದಂತೆ ಹರಿಯಾಣ ಪೊಲೀಸರು ರೈತರಿಗೆ ಕೋರಿಕೊಂಡರು. ಆದರೆ, ರೈತರು ಅದಕ್ಕೆ ಕಿವಿಗೊಡಲಿಲ್ಲ. ಬಳಿಕ ಪೊಲೀಸರು ರೈತರ ಮೇಲೆ ಅನೇಕ ಸುತ್ತು ಅಶ್ರುವಾಯು ಶೆಲ್ ಗಳನ್ನು ಹಾರಿಸಿದರು. ಈ ವೇಳೆ ನಡೆದ ಮುಖಾಮುಖಿಯಲ್ಲಿ ಇಬ್ಬರು ರೈತರು ಗಾಯಗೊಂಡರು.
ಅಂಬಾಲಾ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ಮತ್ತು ಕಾನೂನುಬಾಹಿರ ಸಭೆ ನಡೆಸುವುದನ್ನು ನಿಷೇಧಿಸಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರಚಿಸುವುದಕ್ಕೆ ಒತ್ತಾಯಿಸಿ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಮೆರವಣಿಗೆ ನಡೆಸುತ್ತಿದ್ದಾರೆ.
ಮುಳ್ಳು ತಂತಿ, ಬ್ಯಾರಿಕೇಡ್ ಗಳನ್ನು ತೆಗೆದುಹಾಕಲು ಪ್ರಯತ್ನ
ಕೆಲವು ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಕಬ್ಬಿಣದ ಜಾಲರಿ ಮತ್ತು ಮುಳ್ಳು ತಂತಿಯನ್ನು ತಳ್ಳಿದರೆ, ಇತರರು ರಸ್ತೆಯಿಂದ ಕಬ್ಬಿಣದ ಮೊಳೆಗಳನ್ನು ಬುಡಸಮೇತ ಕಿತ್ತುಹಾಕಿದರು
ರಕ್ಷಣೆಗಾಗಿ ಸ್ಥಾಪಿಸಲಾದ ಕಬ್ಬಿಣದ ಗ್ರಿಲ್ಗಳು ಹಾಗೂ ಸಿಮೆಂಟ್ ಬ್ಯಾರಿಕೇಡ್ಗಳ ಹಿಂದೆ ನಿಂತಿದ್ದ ಭದ್ರತಾ ಸಿಬ್ಬಂದಿ, ಅನುಮತಿಯಿಲ್ಲದ ಕಾರಣ ಮುಂದೆ ಹೋಗದಂತೆ ರೈತರಿಗೆ ಸೂಚನೆ ಕೊಟ್ಟಿದ್ದರು.
ಪ್ರತಿಭಟನಾಕಾರರಲ್ಲಿ ಒಬ್ಬರು ಭದ್ರತಾ ಪಡೆಗಳನ್ನು ನಿಯೋಜಿಸಿದ್ದ ತಗಡಿನ ಚಾವಣಿ ಹತ್ತಿದರು. ಅವನನ್ನು ಕೆಳಗಿಳಿಯುವಂತೆ ಕೇಳಿಕೊಂಡರು. ಶಂಭು ಗಡಿಯಲ್ಲಿ ಜಲಫಿರಂಗಿ ವಾಹನಗಳ ಸ ನಿಯೋಜನೆ ಮಾಡಲಾಗಿದೆ.
ಇಂಟರ್ನೆಟ್ ಸ್ಥಗಿತ
ಅಂಬಾಲಾ ಜಿಲ್ಲೆಯ 11 ಹಳ್ಳಿಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ ಎಸ್ಎಂಎಸ್ ಸೇವೆಯನ್ನು ಹರಿಯಾಣ ಸರ್ಕಾರ ಡಿಸೆಂಬರ್ 9 ರವರೆಗೆ ಸ್ಥಗಿತಗೊಳಿಸಿದೆ.
ಅಂಬಾಲಾದ ಡಾಂಗ್ಡೆಹ್ರಿ, ಲೋಹಘರ್, ಮಣಕ್ಪುರ, ದಾಡಿಯಾನಾ, ಬಾರಿ ಘೇಲ್, ಲ್ಹಾರ್ಸ್, ಕಾಲು ಮಜ್ರಾ, ದೇವಿ ನಗರ, ಸದ್ದೋಪುರ್, ಸುಲ್ತಾನ್ಪುರ ಮತ್ತು ಕಕ್ರು ಗ್ರಾಮಗಳಲ್ಲಿ ಶುಕ್ರವಾರ ಮಧ್ಯಾಹ್ನ ನಿಷೇಧ ಜಾರಿಗೆ ತರಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಜಮಾಯಿಸಿದ ರೈತರು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದಾರೆ.
ದೆಹಲಿಗೆ ತೆರಳುತ್ತಿದ್ದ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಅವರು ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಸ್ಥಳಗಳಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ.