Classical language status | ಮರಾಠಿ, ಬಂಗಾಳಿ ಸೇರಿದಂತೆ 3 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ
ಪಾಲಿ, ಪ್ರಾಕೃತ, ಅಸ್ಸಾಮಿ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದರಿಂದ, ಶೈಕ್ಷಣಿಕ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಸರ್ಕಾರ ಹೇಳಿದೆ.
ಪಾಲಿ, ಪ್ರಾಕೃತ, ಬಂಗಾಳಿ, ಮರಾಠಿ ಮತ್ತು ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ʻ ಶಾಸ್ತ್ರೀಯ ಭಾಷೆಗಳು ದೇಶದ ಸಾಂಸ್ಕೃತಿಕ ಪರಂಪರೆಯ ಪಾಲಕರಾಗಿವೆ. ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಮತ್ತು ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನದಿಂದ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಭಾಷೆಗಳ ಪ್ರಾಚೀನ ಪಠ್ಯಗಳ ಸಂರಕ್ಷಣೆ, ದಾಖಲೀಕರಣ ಮತ್ತು ಡಿಜಿಟಲೀಕರಣದಿಂದ ಅನುವಾದ, ಪ್ರಕಾಶನ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸರ್ಕಾರ ಹೇಳಿದೆ.
ಮಹಾರಾಷ್ಟ್ರ (ಮರಾಠಿ), ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ (ಪಾಲಿ ಮತ್ತು ಪ್ರಾಕೃತ), ಪಶ್ಚಿಮ ಬಂಗಾಳ (ಬಂಗಾಳಿ) ಮತ್ತು ಅಸ್ಸಾಂ (ಅಸ್ಸಾಮಿ)ನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಭಾವ ವಿಸ್ತರಿಸುತ್ತದೆ ಎಂದಿದೆ.
ಪ್ರಧಾನಿ ಟ್ವೀಟ್: ʻಕೇಂದ್ರ ಸಚಿವ ಸಂಪುಟವು ಅಸ್ಸಾಮಿ, ಬೆಂಗಾಲಿ, ಮರಾಠಿ, ಪಾಲಿ ಮತ್ತು ಪ್ರಾಕೃತಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿರುವುದರಿಂದ ನನಗೆ ಅತ್ಯಂತ ಸಂತೋಷವಾಗಿದೆ. ಸರ್ಕಾರ ದೇಶದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತದೆ,ʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ʻಮರಾಠಿ ಭಾರತದ ಹೆಮ್ಮೆ. ಶಾಸ್ತ್ರೀಯ ಭಾಷೆ ಸ್ಥಾನಮಾನವು ದೇಶದ ಇತಿಹಾಸದಲ್ಲಿ ಮರಾಠಿಯ ಶ್ರೀಮಂತ ಸಾಂಸ್ಕೃತಿಕ ಕೊಡುಗೆಯನ್ನು ಗುರುತಿಸುತ್ತದೆ,ʼ ಎಂದು ಹೇಳಿದರು.
ಮತ್ತೊಂದು ಪೋಸ್ಟ್‌ನಲ್ಲಿʻಮಹಾನ್ ಬಂಗಾಳಿ ಭಾಷೆಗೆ ದುರ್ಗಾ ಪೂಜೆಯ ಶುಭ ಸಮಯದಲ್ಲಿ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ನೀಡಿರುವುದರಿಂದ ನನಗೆ ತುಂಬ ಸಂತೋಷವಾಗಿದೆ. ಅಸ್ಸಾಮಿ, ಪಾಲಿ ಮತ್ತು ಪ್ರಾಕೃತಗಳು ದೇಶದ ಸಂಸ್ಕೃತಿಯ ಮೂಲವಾಗಿದೆ,ʼ ಎಂದು ಬರೆದಿದ್ದಾರೆ.
ರಾಜ್ಯ ಸರ್ಕಾರ ಶ್ರಮಿಸಿದೆ: ಮಮತಾ- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ʻಬಂಗಾಲಿ/ಬಂಗ್ಲಾಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಇದಕ್ಕಾಗಿ ನಾವು ಮೂರು ಸಂಪುಟಗಳ ಸಂಶೋಧನೆ ವರದಿ ಸಲ್ಲಿಸಿದ್ದೇವೆ,ʼ ಎಂದಿದ್ದಾರೆ.
ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬಂಗಾಳಿ ಭಾಷೆ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿದ ಸಂಸ್ಥೆ ಅಥವಾ ವ್ಯಕ್ತಿಗೆ 5 ಲಕ್ಷ ರೂ.ಗಳ ʻದುರ್ಗಾ ಬೆಂಗಾಲ್ ಪ್ರಶಸ್ತಿʼ ನೀಡಲಾಗುವುದು ಎಂದು ಘೋಷಿಸಿದರು.
ಮಾತೃಭಾಷೆಯನ್ನು ಸಂರಕ್ಷಿಸಲು ಸಾಧ್ಯವಾಗಲಿದೆ: ಶರ್ಮಾ- ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಮಿ ಭಾಷೆಯನ್ನು ಶಾಸ್ತ್ರೀಯ ಭಾಷೆಯಾಗಿ ಕೇಂದ್ರ ಗುರುತಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಸಚಿವ ಅಜಿತ್ ಪವಾರ್ ಮರಾಠಿಗೆ ಶಾಸ್ತ್ರೀಯ ಭಾಷೆ ಗೌರವ ನೀಡುವ ಕೇಂದ್ರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಜೈರಾಮ್ ರಮೇಶ್ ಟೀಕೆ: ಮರಾಠಿಯನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಬೇಕೆಂಬ ಬೇಡಿಕೆ ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರದ ಬಳಿ ಬಾಕಿ ಉಳಿದುಕೊಂಡಿತ್ತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಈ ಸಂಬಂಧ ಪ್ರಧಾನಿ ಅವರಿಗೆ ಹಲವು ಬಾರಿ ನೆನಪಿಸಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಸನ್ನಿಹಿತವಾಗಿದ್ದು, ಕೆಲವೇ ವಾರ ಮೊದಲು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೊದಲು ಗೌರವ ಪಡೆದ ತಮಿಳು: ಅಕ್ಟೋಬರ್ 12, 2004 ರಂದು ಭಾರತ ಸರ್ಕಾರ ʻಶಾಸ್ತ್ರೀಯ ಭಾಷೆಗಳುʼ ಎಂಬ ಹೊಸ ವರ್ಗದ ಭಾಷೆಗಳನ್ನು ರಚಿಸಲು ನಿರ್ಧರಿಸಿತು. ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು ಮತ್ತು ಈ ಗೌರವ ಪಡೆಯಲು ಅಗತ್ಯ ಮಾನದಂಡಗಳನ್ನು ನಿಗದಿಪಡಿಸಿತು.
ನವೆಂಬರ್ 2004 ರಲ್ಲಿ ಸಂಸ್ಕೃತಿ ಸಚಿವಾಲಯವು ಸಾಹಿತ್ಯ ಅಕಾಡೆಮಿಯಡಿ ಭಾಷಾ ತಜ್ಞರ ಸಮಿತಿ (ಎಲ್‌ಇಸಿ) ಯನ್ನು ರಚಿಸಿತು. ನವೆಂಬ ರ್ 2005 ರಲ್ಲಿ ಮಾನದಂಡಗಳನ್ನು ಪರಿಷ್ಕರಿಸಲಾಯಿತು. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಹಾಗೂ ಮೈಸೂರಿ ನಲ್ಲಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ(ಸಿಐಐಎಲ್) ಆಶ್ರಯದಲ್ಲಿ ಶಾಸ್ತ್ರೀಯ ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾದಲ್ಲಿ ಅಧ್ಯಯನಕ್ಕಾಗಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.
ಆನಂತರ, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲಾಯಿತು.