ಮನಮೋಹನ್ ಸಿಂಗ್, ರಘುರಾಮ್ ರಾಜನ್,  ಲ್ಯಾಟರಲ್‌ ಎಂಟ್ರಿ ಮೂಲಕ ಸರ್ಕಾರದಿಂದ ನೇಮಕಗೊಂಡ ಇತರ ತಜ್ಞರು
x
ಮನಮೋಹನ್ ಸಿಂಗ್, ರಘುರಾಮ್ ರಾಜನ್, ನಂದನ್ ನಿಲೇಕಣಿ ಮತ್ತು ಸ್ಯಾಮ್ ಪಿತ್ರೋಡಾ̤

ಮನಮೋಹನ್ ಸಿಂಗ್, ರಘುರಾಮ್ ರಾಜನ್, ಲ್ಯಾಟರಲ್‌ ಎಂಟ್ರಿ ಮೂಲಕ ಸರ್ಕಾರದಿಂದ ನೇಮಕಗೊಂಡ ಇತರ ತಜ್ಞರು


ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು 45 ಸರ್ಕಾರಿ ಅಧಿಕಾರಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್‌ ಸೇರಿದಂತೆ ಎನ್‌ ಡಿಎ ಮಿತ್ರಪಕ್ಷಗಳಿಂದ ಎದುರಾದ ತೀವ್ರ ವಿರೋಧದಿಂದಾಗಿ ಆದೇಶವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಯುಪಿಎಸ್‌ಸಿಗೆ ಸೂಚಿಸಿದೆ . ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸುದನ್ ಅವರಿಗೆ ಪತ್ರ ಬರೆದಿದ್ದು, ಸಂಬಂಧಿತ ಜಾಹೀರಾತನ್ನು ರದ್ದುಗೊಳಿಸುವಂತೆ ಕೇಳಿದ್ದಾರೆ.

ಲ್ಯಾಟರಲ್ ಎಂಟ್ರಿ ಸ್ಕೀಮ್ ಎಂದರೇನು?: ಸರ್ಕಾರದ ಮಧ್ಯಮ ಮತ್ತು ಹಿರಿಯ ಹಂತದ ಸ್ಥಾನಗಳನ್ನು ನಾಗರಿಕ ಸೇವಾ ಚೌಕಟ್ಟಿನ ಹೊರಗಿನ ವ್ಯಕ್ತಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯೇ ಲ್ಯಾಟರಲ್‌ ಎಂಟ್ರಿ ಪದ್ಧತಿ. ಈ ಪದ್ಧತಿಯಡಿ ವಿವಿಧ ಕ್ಷೇತ್ರಗಳ ತಜ್ಞರನ್ನು ನೇಮಿಸಬಹುದಾಗಿದೆ.

ಇದು ಆರಂಭವಾಗಿದ್ದು ಯುಪಿಎ ಅವಧಿಯಲ್ಲಿ. 2005ರಲ್ಲಿ ಸ್ಥಾಪನೆಯಾದ, ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಎರಡನೇ ಆಡಳಿತ ಸುಧಾರಣಾ ಆಯೋಗ (ಎಆರ್‌ಸಿ) ಇದನ್ನು ಬೆಂಬಲಿಸಿತು. 2017 ರಲ್ಲಿ ನೀತಿ ಆಯೋಗ ಮತ್ತು ಸೆಕ್ರೆಟರಿಗಳ ಎರಡನೇ ಗುಂಪು ಈ ವಿಧಾನವನ್ನು ವಿಸ್ತರಿಸಲು ಶಿಫಾರಸು ಮಾಡಿತು.

ಲ್ಯಾಟರಲ್ ಎಂಟ್ರಿ ಮೂಲಕ ಆಯ್ಕೆಯಾದವರು ಸಾಮಾನ್ಯವಾಗಿ ಮೂರು ವರ್ಷ ಸೇವೆ ಸಲ್ಲಿಸುತ್ತಾರೆ; ಇದನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಇವರು ಕೇಂದ್ರೀಯ ಸಚಿವಾಲಯದಲ್ಲಿ ಕೆಲಸ ಮಾಡುತ್ತಾರೆ.

ಈ ಹಿಂದೆ, ಕಾಂಗ್ರೆಸ್ ನೇತೃತ್ವದ ಯುಪಿಎ 2004 ರಿಂದ 2014 ರ ಅವಧಿಯಲ್ಲಿ ಮತ್ತು ಅದಕ್ಕೂ ಮುಂಚೆಯೇ ಹಲವು ಪ್ರಮುಖ ಅರ್ಥ ಶಾಸ್ತ್ರಜ್ಞರು, ತಂತ್ರಜ್ಞರು ಮತ್ತು ಉದ್ಯಮಿಗಳನ್ನು ಈ ಮಾರ್ಗದ ಮೂಲಕ ನೇಮಿಸಿಕೊಂಡಿದೆ ಎಂದು ಕೇಂದ್ರ ಗಮನ ಸೆಳೆದಿದೆ. ಅವರೆಂದರೆ.,

1. ಸ್ಯಾಮ್ ಪಿತ್ರೋಡಾ: 1980 ರ ದಶಕದಲ್ಲಿ ರಾಜೀವ್ ಗಾಂಧಿಯವರ ಅವಧಿಯಲ್ಲಿ ನೇಮಕಗೊಂಡ ತಂತ್ರಜ್ಞ ಮತ್ತು ಉದ್ಯಮಿ ಸ್ಯಾಮ್ ಪಿತ್ರೋಡಾ ಅವರು ದೇಶದ ಟೆಲಿಕಾಂ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು; ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಮತ್ತು ಆವಿಷ್ಕಾರಗಳ ಕುರಿತು ಪ್ರಧಾನಿ ಅವರ ಸಲಹೆಗಾರರಾಗಿದ್ದರು. ಪ್ರಸ್ತುತ, ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ.

2. ಮನಮೋಹನ್ ಸಿಂಗ್ : ದೇಶದ ಪ್ರಧಾನಿ ಆಗುವ ಮೊದಲು ಡಾ. ಮನಮೋಹನ್ ಸಿಂಗ್ ಅವರು 1971ರಲ್ಲಿ ವಿದೇಶ ವ್ಯಾಪಾರ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ನೇಂಕಗೊಂಡರು. 1991 ರಲ್ಲಿ ಹಣಕಾಸು ಸಚಿವರಾದರು; ದೇಶದ ಆರ್ಥಿಕ ಉದಾರೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದರು.

3. ವಿ. ಕೃಷ್ಣಮೂರ್ತಿ: ದೇಶದ ಕೈಗಾರಿಕಾ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಮತ್ತು ಮಾರುತಿ ಉದ್ಯೋಗ್‌ ನ ಅಧ್ಯಕ್ಷತೆ ಸೇರಿದಂತೆ ಹಲವು ಮಹತ್ವದ ಸ್ಥಾನಕ್ಕೆ ನೇಮಿಸಲಾಯಿತು. ರಾಷ್ಟ್ರೀಯ ಉತ್ಪಾದನಾ ಸ್ಪರ್ಧಾತ್ಮಕ ಕೌನ್ಸಿಲ್ ನ್ನು ಮುನ್ನಡೆಸಿದರು.

4. ಬಿಮಲ್ ಜಲಾನ್ : ಐಎಂಎಫ್‌ ಮತ್ತು ವಿಶ್ವ ಬ್ಯಾಂಕ್‌ನಂಥ ಜಾಗತಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅರ್ಥಶಾಸ್ತ್ರಜ್ಞ, ಬಿಮಲ್ ಜಲಾನ್, ಮುಖ್ಯ ಆರ್ಥಿಕ ಸಲಹೆಗಾರರಾಗಿ ಮತ್ತು ಆನಂತರ 1997- 2003 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ಸೇವೆ ಸಲ್ಲಿಸಿದರು.

5. ಕೌಶಿಕ್ ಬಸು: ಶೈಕ್ಷಣಿಕ ಅರ್ಥಶಾಸ್ತ್ರಜ್ಞ, ಕೌಶಿಕ್ ಬಸು ಅವರನ್ನು 2009 ರಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಿಸಲಾಯಿತು. ಆನಂತರ ಅವರು ವಿಶ್ವ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾದರು.

6. ಎನ್‌.ಕೆ. ಸಿಂಗ್: ಮಾಜಿ ಐಎಎಸ್ ಅಧಿಕಾರಿ ಎನ್‌.ಕೆ. ಸಿಂಗ್ ಅವರು ನಿವೃತ್ತಿ ಬಳಿಕ ಹಣಕಾಸು ಮತ್ತು ಸಾರ್ವಜನಿಕ ನೀತಿಯ ಸಲಹೆ ಗಾರರಾದರು. ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಮತ್ತು ಯೋಜನಾ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದರು.

7. ಅರವಿಂದ್ ವಿರ್ಮಾನಿ: ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅರ್ಥಶಾಸ್ತ್ರಜ್ಞ ಅರವಿಂದ್ ವಿರ್ಮಾನಿ, 2007 ರಿಂದ 2009 ರವರೆಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.

8. ರಘುರಾಮ್ ರಾಜನ್: ಐಎಂಎಫ್‌ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ, ರಘುರಾಮ್ ರಾಜನ್ 2012 ರಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡರು. ಆನಂತರ 2013 ರಿಂದ 2016 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದರು.

9. ಮಾಂಟೆಕ್‌ ಸಿಂಗ್ ಅಹ್ಲುವಾಲಿಯಾ: ಶೈಕ್ಷಣಿಕ ಕ್ಷೇತ್ರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರುವ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, 2004 ರಿಂದ 2014 ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.

10. ನಂದನ್ ನಿಲೇಕಣಿ: ಇನ್ಫೋಸಿಸ್‌ನ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಅವರು 2009 ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೇತೃತ್ವ ವಹಿಸಿಕೊಂಡರು. ಅವರು ಆಧಾರ್ ಯೋಜನೆಯ ಉಸ್ತುವಾರಿ ವಹಿಸಿದ್ದರು.

Read More
Next Story