ದಕ್ಷಿಣ ಏಷ್ಯಾದ ಬಹುದೊಡ್ಡ ಆಂತರಿಕ  ಸ್ಥಳಾಂತರ ಮಣಿಪುರದಲ್ಲೇ: ಹಿಂಸಾಚಾರ ಸಂತ್ರಸ್ತರು 67,000!
x

ದಕ್ಷಿಣ ಏಷ್ಯಾದ ಬಹುದೊಡ್ಡ ಆಂತರಿಕ ಸ್ಥಳಾಂತರ ಮಣಿಪುರದಲ್ಲೇ: ಹಿಂಸಾಚಾರ ಸಂತ್ರಸ್ತರು 67,000!

ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 67,000 ಜನರು ಸ್ಥಳಾಂತರಗೊಂಡಿದ್ದಾರೆ. ಇದು 2023 ರಲ್ಲಿ ದಕ್ಷಿಣ ಏಷ್ಯಾದಲ್ಲಿ ಸಂಘರ್ಷ ಮತ್ತು ಹಿಂಸಾಚಾರದಿಂದ ಸ್ಥಳಾಂತರಗೊಂಡವರಲ್ಲಿ ಶೇ.97 ಎಂದು ವರದಿಯೊಂದು ತಿಳಿಸಿದೆದಕ್ಷಿಣ ಏಷ್ಯಾದಲ್ಲಿನ ಆಂತರಿಕ ಸ್ಥಳಾಂತರದ ಶೇ. 97 ಭಾಗ: ಐಡಿಎಂಸಿ ವರದಿ


ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 67,000 ಜನರು ಸ್ಥಳಾಂತರಗೊಂಡಿದ್ದಾರೆ. ಇದು 2023 ರಲ್ಲಿ ದಕ್ಷಿಣ ಏಷ್ಯಾದಲ್ಲಿ ಸಂಘರ್ಷ ಮತ್ತು ಹಿಂಸಾಚಾರದಿಂದ ಸ್ಥಳಾಂತರಗೊಂಡವರಲ್ಲಿ ಶೇ.97 ಎಂದು ವರದಿಯೊಂದು ತಿಳಿಸಿದೆ.

ಜಿನೀವಾ ಮೂಲದ ಆಂತರಿಕ ಸ್ಥಳಾಂತರ ಮೇಲ್ವಿಚಾರಣೆ ಕೇಂದ್ರ (ಐಡಿಎಂಸಿ) ತನ್ನ ವರದಿಯಲ್ಲಿ 2018 ರಿಂದ ದೇಶದಲ್ಲಿ ಸಂಘರ್ಷ ಮತ್ತು ಹಿಂಸಾಚಾರದಿಂದ ಪ್ರಚೋದಿಸಲ್ಪಟ್ಟ ಅತಿ ಹೆಚ್ಚು ಸ್ಥಳಾಂತರ ಇದು ಎಂದು ಹೇಳಿದೆ. ವರದಿ ಪ್ರಕಾರ, 2023ರಲ್ಲಿ ದಕ್ಷಿಣ ಏಷ್ಯಾದಲ್ಲಿಸಂಘರ್ಷ ಮತ್ತು ಹಿಂಸಾಚಾರದಿಂದ 69,000 ಮಂದಿ ಸ್ಥಳಾಂತರಗೊಂಡಿದ್ದಾರೆ.

ಆಂತರಿಕ ಸ್ಥಳಾಂತರ ಎಂದರೆ ಜನರು ಸಂಘರ್ಷ, ಹಿಂಸಾಚಾರ ಅಥವಾ ಸ್ವಾಭಾವಿಕ ವಿಪತ್ತುಗಳಿಂದ ತಮ್ಮ ಮನೆಗಳನ್ನು ತೊರೆದು, ರಾಜ್ಯದ ಗಡಿಯೊಳಗೇ ಬೇರೆಡೆ ಆಶ್ರಯ ಪಡೆಯುವುದು.

ಜನಾಂಗೀಯ ಕಲಹ: ಮೈಟಿ ಸಮುದಾಯದ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ಬೇಡಿಕೆಯನ್ನು ವಿರೋಧಿಸಿ, ಮಣಿಪುರದ ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ'ಯನ್ನು ಮೇ 3, 2023 ರಂದು ಆಯೋಜಿಸಲಾಗಿತ್ತು. ಈ ಮೆರವಣಿಗೆಯು ಮೈಟಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗೆ ಕಾರಣವಾಗಿ, 200 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು. ಮಣಿಪುರ ಹೈ ಕೋರ್ಟ್‌ 2023ರ ಮಾರ್ಚ್‌ನಲ್ಲಿ ಮೈಟಿ ಸಮುದಾಯವನ್ನು ʻಪರಿಶಿಷ್ಟ ವರ್ಗʼ ಎಂದು ಗುರುತಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಕಳುಹಿಸಲು ಸಲಹೆ ನೀಡಿತ್ತು. ಕುಕಿಗಳು ಸೇರಿದಂತೆ ಇತರ ಸ್ಥಳೀಯ ಪರಿಶಿಷ್ಟ ವರ್ಗಗಳು ಇದನ್ನು ಪ್ರತಿರೋಧಿಸಿದವು. ಈ ಉದ್ವಿಗ್ನತೆಗೆ ಭೂವಿವಾದ ಕೂಡ ಕಾರಣ.

ʻಮೇ 3 ರಂದು ಚುರಾಚಂದ್‌ಪುರ ಜಿಲ್ಲೆಯಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು. ಹಿಂಸಾಚಾರವು ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ್, ತೆಂಗ್ನುಪಾಲ್ ಮತ್ತು ಕಾಂಗ್‌ಪೋಕಿಪಿ ಸೇರಿದಂತೆ ಇತರ ಜಿಲ್ಲೆಗಳಿಗೆ ಹರಡಿತು. ಅಂದಾಜು 67,000 ಮಂದಿ ಸ್ಥಳಾಂತರಗೊಂಡರುʼ ಎಂದು ವರದಿ ಹೇಳಿದೆ.

ಮಣಿಪುರದೊಳಗೆ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಸ್ಥಳಾಂತರ ನಡೆಯಿತು; ಸುಮಾರು ಐದನೇ ಒಂದು ಭಾಗದಷ್ಟು ಮಂದಿ ನೆರೆಯ ರಾಜ್ಯ ವಾದ ಮಿಜೋರಾಂಗೆ ಹಾಗೂ ಕಡಿಮೆ ಸಂಖ್ಯೆ ಜನರು ನಾಗಾಲ್ಯಾಂಡ್ ಮತ್ತು ಅಸ್ಸಾಂಗೆ ಸ್ಥಳಾಂತರಗೊಂಡರು. ಹಿಂಸಾಚಾರ ಉಲ್ಬಣ ಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ನಿಷೇಧಾಜ್ಞೆ ವಿಧಿಸಿತು, ಇಂಟರ್ನೆಟ್ ಸ್ಥಗಿತಗೊಳಿಸಿತು ಮತ್ತು ಭದ್ರತಾ ಪಡೆಗಳನ್ನುಕಳುಹಿಸಿತು. ಪರಿ ಹಾರ ಶಿಬಿರಗಳನ್ನು ಹಾಗೂ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿಯನ್ನು ಸ್ಥಾಪಿಸಿತು. ಆದರೆ, ಈ ಉಪಕ್ರಮವು ಸಮಿತಿಯ ಸಂಯೋಜನೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳಿಂದ ಸ್ಥಗಿತಗೊಂಡಿತು. ಸ್ಥಳಾಂತರಗೊಂಡಿರುವ ಎಲ್ಲರೂ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಐಡಿಎಂಸಿ ಹೇಳಿದೆ.

ಏಷ್ಯಾದಲ್ಲಿ 5.3 ದಶಲಕ್ಷ ಆಂತರಿಕ ವಲಸೆ: 2023 ರ ಕೊನೆಯಲ್ಲಿ ಏಷ್ಯದಾದ್ಯಂತ ಸಂಘರ್ಷ ಮತ್ತು ಹಿಂಸಾಚಾರದಿಂದ ಸುಮಾರು 5.3 ದಶಲಕ್ಷ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಅದರಲ್ಲಿ ಶೇ.80 ರಷ್ಟು ಮಂದಿ ಅಫ್ಘಾನಿಸ್ತಾನದಲ್ಲಿದ್ದಾರೆ ಎಂದು ಐಡಿಎಂಸಿ ಹೇಳಿದೆ.

ಪ್ರಪಂಚದಾದ್ಯಂತ 75.9 ದಶಲಕ್ಷ ಜನರು ಆಂತರಿಕ ಸ್ಥಳಾಂತರಗೊಂಡಿದ್ದಾರೆ; ಇದರಲ್ಲಿ 68.3 ದಶಲಕ್ಷ ಜನರು ಸಂಘರ್ಷ ಮತ್ತು ಹಿಂಸಾಚಾರದಿಂದ ಹಾಗೂ 7.7 ದಶಲಕ್ಷ ಜನರು ಸ್ವಾಭಾವಿಕ ವಿಪತ್ತುಗಳಿಂದ ಸ್ಥಳಾಂತರಗೊಂಡಿದ್ದಾರೆ ಎಂದು ವರದಿ ಹೇಳಿದೆ. 9.1 ದಶ ಲಕ್ಷ ಮಂದಿ ಸ್ಥಳಾಂತರಗೊಂಡಿರುವ ಸೂಡಾನ್ ಮೊದಲ ಸ್ಥಾನದಲ್ಲಿ ಹಾಗೂ 7.2 ದಶಲಕ್ಷ ಮಂದಿ ಸ್ಥಳಾಂತರಗೊಂಡಿರುವ ಸಿರಿಯಾ 2ನೇ ಸ್ಥಾನದಲ್ಲಿದೆ. ಜನರ ಸ್ಥಳಾಂತರ ಹೆಚ್ಚುತ್ತಲೇ ಇದ್ದರೂ, 2023ರಲ್ಲಿ ಸುಡಾನ್ ಮತ್ತು ಪ್ಯಾಲೆಸ್ಟೈನ್‌ ಸಂಘರ್ಷದಿಂದ ಲಕ್ಷಾಂತರ ಜನರು ತಮ್ಮ ಮನೆಗಳನ್ನುತೊರೆಯಬೇಕಾಯಿತು ಎಂದು ವರದಿ ಹೇಳಿದೆ.



Read More
Next Story