Manipur Violence: ವಿದ್ಯಾರ್ಥಿಗಳು, ಪೊಲೀಸರ ನಡುವೆ ಘರ್ಷಣೆ
x

Manipur Violence: ವಿದ್ಯಾರ್ಥಿಗಳು, ಪೊಲೀಸರ ನಡುವೆ ಘರ್ಷಣೆ

ರಾಜಧಾನಿಯಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆಯನ್ನು ತಪ್ಪಿಸಲು ಆಗಾಗ ಗಸ್ತು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇಂಫಾ‌ಲ್:‌ ವಿದ್ಯಾರ್ಥಿಗಳು ರಾಜಭವನಕ್ಕೆ ಮೆರವಣಿಗೆ ಸಮಯದಲ್ಲಿ ಭದ್ರತಾ ಪಡೆಗಳೊಂದಿಗೆ ಮಂಗಳವಾರ ಘರ್ಷಣೆ ನಡೆಸಿದರು. ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ವಿಧಿಸಿದ್ದ ಕರ್ಫ್ಯೂ ಬುಧವಾರ ಬೆಳಗ್ಗೆವರೆಗೆ ಜಾರಿಯಲ್ಲಿರಲಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಅಹಿತಕರ ಘಟನೆಯನ್ನು ತಪ್ಪಿಸಲು ಪಟ್ಟಣದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗಿದ್ದರೂ, ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮಂಗಳವಾರ ಸಂಜೆ ಸರ್ಕಾರ ಹೇರಿದ ಇಂಟರ್ನೆಟ್ ಸೇವೆಗಳ ಸ್ಥಗಿತಗೊಳಿಸುವಿಕೆಯು ಕಣಿವೆಯ ಐದು ಜಿಲ್ಲೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಡಿಜಿಪಿ ಮತ್ತು ಭದ್ರತಾ ಸಲಹೆಗಾರರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ರಾಜಭವನದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಖ್ವೈರಂಬಂಡ್ ಮತ್ತು ಕಾಕ್ವಾ ನವೋರೆಮ್ ಲೈಕೈ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ ಸಿಡಿಸಿದರು. ಘರ್ಷಣೆಯಲ್ಲಿ 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ಹೇಳಿಕೊಂಡಿದೆ.

ರಾಜಭವನದ ಹೇಳಿಕೆ: ರಾಜಭವನ ಮಂಗಳವಾರ ತಡರಾತ್ರಿ ಹೇಳಿಕೆ ನೀಡಿದ್ದು,ʼ ವಿದ್ಯಾರ್ಥಿಗಳ ಪ್ರತಿನಿಧಿಗಳು ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳು ಮತ್ತು ಜನರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ,ʼ ಎಂದು ತಿಳಿಸಿದೆ.

ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story