Manipur Violence: 3 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿಕೆ
x
ಇಂಫಾಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ವಿರುದ್ಧ ಅಖಿಲ ಮಣಿಪುರ ವಿದ್ಯಾರ್ಥಿಗಳ ಒಕ್ಕೂಟ (ಎಎಂಎಸ್‌ಯು)ದ ಸದಸ್ಯರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು

Manipur Violence: 3 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿಕೆ

ರಾಜ್ಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾದ ಡಿಜಿಪಿ ಮತ್ತು ಭದ್ರತಾ ಸಲಹೆಗಾರರನ್ನು ವಜಾಗೊಳಿಸುವುದು ಸೇರಿದಂತೆ 6 ಬೇಡಿಕೆಗಳನ್ನು ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ.


ಇಂಫಾಲ್ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಒಂದು ದಿನದ ಬಳಿಕ ಮಣಿಪುರದ ಮೂರು ಜಿಲ್ಲೆಗಳಲ್ಲಿ ಮಂಗಳವಾರ (ಸೆಪ್ಟೆಂಬರ್ 10) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇಂಫಾಲ್ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದ್ದು,ಜನರು ಮನೆಗಳಿಂದ ಹೊರಗೆ ಬರದಂತೆ ನಿರ್ಬಂಧಿಸ ಲಾಗಿದೆ. ತೌಬಲ್‌ ಜಿಲ್ಲೆಯಲ್ಲಿ ಸೆಕ್ಷನ್ 163 (2) ರ ಅಡಿ ನಿಷೇಧಾಜ್ಞೆ ಹೇರಲಾಗಿದೆ.

ʻಕಾನೂನು-ಸುವ್ಯವಸ್ಥೆ ಪರಿಸ್ಥಿತಿಯಿಂದ ಕರ್ಫ್ಯೂ ಸಡಿಲಿಕೆಯನ್ನು ಸೆಪ್ಟೆಂಬರ್ 10 ರ ಬೆಳಗ್ಗೆ 11 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಿಂ ಪಡೆಯಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಸಂಪೂರ್ಣ ಕರ್ಫ್ಯೂ ಇರಲಿದೆ,ʼ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದ ಪ್ರಕಾರ, ʼಸೆಪ್ಟೆಂಬರ್ 10 ರಿಂದ ಕರ್ಫ್ಯೂ ಸಡಿಲಿಕೆಯನ್ನು ತೆಗೆದುಹಾಕಲಾಗಿದೆʼ.

ಮಾಧ್ಯಮ, ವಿದ್ಯುತ್, ನ್ಯಾಯಾಲಯ ಮತ್ತು ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳಿಗೆ ಕರ್ಫ್ಯೂ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಆದೇಶ ಹೇಳಿದೆ.

ಪೊಲೀಸ್ ಗೆ ಗುಂಡೇಟು: ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆಯನ್ನು ನಿಭಾಯಿಸಲು ಅಸಮರ್ಥರಾಗಿರುವ ಡಿಜಿಪಿ ಮತ್ತು ಭದ್ರತಾ ಸಲಹೆಗಾರರನ್ನು ವಜಾಗೊಳಿಸುವಂತೆ ಒತ್ತಾಯಿಸಿ, ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತೀವ್ರಗೊಳಿಸಲು ಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶಗಳು ಬಂದಿವೆ.

ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಹಾರಿಸಿದ ಗುಂಡಿನಿಂದ ಪೊಲೀಸ್ ಅಧಿಕಾರಿಯೊಬ್ಬರ ತೊಡೆಗೆ ಗಾಯವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತೌಬಲ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರುವುದನ್ನು ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ: ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಾಗೂ ರಾಜ್ಯದ ಪ್ರಾದೇಶಿಕತೆ ಮತ್ತು ಆಡಳಿತದ ಸಮಗ್ರತೆಯನ್ನು ರಕ್ಷಿಸಬೇಕೆಂದು ಆಗ್ರಹಿಸಿ, ಸಾವಿರಾರು ವಿದ್ಯಾರ್ಥಿಗಳು ಮಣಿಪುರ ಸೆಕ್ರೆಟರಿಯೇಟ್ ಮತ್ತು ರಾಜಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಡ್ರೋನ್‌-ಆರ್‌ ಪಿಜಿ ದಾಳಿ: ಇತ್ತೀಚೆಗೆ ನಡೆದ ಡ್ರೋನ್-ಕ್ಷಿಪಣಿ ದಾಳಿಯಿಂದ ಕನಿಷ್ಠ ಎಂಟು ಜನ ಸಾವನ್ನಪ್ಪಿದ್ದಾರೆ ಮತ್ತು 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆಯಲ್ಲಿ ಸಿಲುಕಿ 46 ವರ್ಷದ ಮಹಿಳೆ ಸಾವಿಗೀಡಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ತಂಗ್‌ಬುಹ್ ಗ್ರಾಮದ ನೆಮ್ಜಾಖೋಲ್ ಲುಂಗ್ಡಿಮ್ ಮೃತರು. ಚುರಚಂದಪುರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಸ್ಥಳೀಯರು ಹತ್ತಿರದ ಅರಣ್ಯಗಳಿಗೆ ಪಲಾಯನ ಮಾಡಿದರು. ಘರ್ಷಣೆ ಸಮಯದಲ್ಲಿ ಶಕ್ತಿಯುತ ಬಾಂಬ್‌ಗಳನ್ನು ಸಿಡಿಸಲಾಗಿದೆ. ಅದೇ ರಾತ್ರಿ, ಸಮೀಪದ ಶಾಲೆಯಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ಬೇಡಿಕೆಗಳು : ಸೋಮವಾರ ವಿವಿಧ ಶಾಲೆ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಇಂಫಾಲ್‌ನ ಖ್ವೈರಂಬಂಡ್ ಮಹಿಳಾ ಮಾರುಕಟ್ಟೆಯಲ್ಲಿನ ಶಿಬಿರಗಳಲ್ಲಿ ರಾತ್ರಿಯನ್ನು ಕಳೆದರು.

ʻನಮ್ಮ ಆರು ಬೇಡಿಕೆಗಳಿಗೆ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರ ಪ್ರತಿಕ್ರಿಯೆಗೆ 24 ಗಂಟೆಗಳ ಗಡುವು ನೀಡಿದ್ದೇವೆ,ʼ ಎಂದು ವಿದ್ಯಾರ್ಥಿ ಮುಖಂಡ ಸಿ.ವಿಕ್ಟರ್ ಸಿಂಗ್ ಮಂಗಳವಾರ ಬೆಳಗ್ಗೆ ಸುದ್ದಿಗಾರರಿಗೆ ತಿಳಿಸಿದರು. ಆನಂತರ ವಿದ್ಯಾರ್ಥಿಗಳು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ರಾಜ್ಯಪಾಲ ಆಚಾರ್ಯ ಅವರನ್ನು ಭೇಟಿ ಮಾಡಿದರು.

ಭೇಟಿ ಬಳಿಕ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಡಿಜಿಪಿ ಮತ್ತು ಭದ್ರತಾ ಸಲಹೆಗಾರರ ವಜಾ ಸೇರಿದಂತೆ ಆರು ಬೇಡಿಕೆ ಇರಿಸಿದ್ದೇವೆ. ಸಿಆರ್‌ಪಿಎಫ್‌ನ ಮಾಜಿ ಡಿಜಿ ಕುಲದೀಪ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿರುವ ಏಕೀಕೃತ ಕಮಾಂಡ್ ನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

2023ರ ಮೇ ತಿಂಗಳಿನಿಂದ ಆರಂಭಗೊಡ ಮೈಟಿ ಮತ್ತು ಕುಕಿಗಳ ನಡುವಿನ ಜನಾಂಗೀಯ ಕಲಹದಲ್ಲಿ 200 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

Read More
Next Story