ಮಣಿಪುರ: ಗುಂಡಿಗೆ ವ್ಯಕ್ತಿ ಬಲಿ, ಸೇನಾಧಿಕಾರಿಗೆ ಗಾಯ
ಇಂಫಾಲ್, ಫೆ. 13: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಂಗಳವಾರ ಎರಡು ಸಮುದಾಯಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 25 ವರ್ಷದ ಗ್ರಾಮ ಸ್ವಯಂಸೇವಕರೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಸೇನಾಧಿಕಾರಿಯೊಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿಯಿಂದ ಪುಖಾವೊ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಗುಂಡಿನ ಚಕಮಕಿಗಳು ವರದಿಯಾಗಿ ವೆ. ಕಾಂಗ್‌ಪೊಕ್ಪಿ ಜಿಲ್ಲೆಯ ಪುಖಾವೊ ಶಾಂತಿಪುರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗ್ರಾಮ ಸ್ವಯಂಸೇವಕರೊಬ್ಬರು ಹತ್ಯೆಯಾಗಿದ್ದಾರೆ. ಇಂಫಾಲ್ ಪೂರ್ವ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಸೇನಾಧಿಕಾರಿ ಗಾಯಗೊಂಡಿದ್ದಾರೆ. ಅವ ರನ್ನು ಹೆಲಿಕಾಪ್ಟರ್ ಮೂಲಕ ಲೀಮಾಖೋಂಗ್ ಮಿಲಿಟರಿ ಸ್ಟೇಷನ್‌ನಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರದಲ್ಲಿ ಕಳೆದ ವರ್ಷ ಮೇ 3 ರಂದು ಆರಂಭಗೊಂಡ ಜನಾಂಗೀಯ ಹಿಂಸಾಚಾರದಿಂದ 180 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮಣಿಪುರದ ಒಟ್ಟು ಜನಸಂಖ್ಯೆಯ ಶೇ.53 ರಷ್ಟು ಇರುವ ಮೈಥಿಗಳು ಇಂಫಾಲ್ ಕಣಿವೆಯಲ್ಲಿ ಹಾಗೂ ಶೇ.40 ರಷ್ಟಿರುವ ನಾಗಾಗಳು- ಕುಕಿಗಳು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.