
ಮಣಿಕರ್ಣಿಕಾ ಘಾಟ್ ಬಗ್ಗೆ ನಕಲಿ ಫೋಟೋ ಹಂಚಿಕೆ: 8 ಕೇಸ್ ದಾಖಲು
ಹಿಂದೆ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ಸಮಯದಲ್ಲೂ ಒಡೆದ ವಿಗ್ರಹಗಳನ್ನು ತೋರಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿತ್ತು.
ಪ್ರಸಿದ್ಧ ಯಾತ್ರಾಸ್ಥಳ ಕಾಶಿಯ ಐತಿಹಾಸಿಕ ಮಣಿಕರ್ಣಿಕಾ ಘಾಟ್‌ನ ಪುನರಾಭಿವೃದ್ಧಿ ಕಾಮಗಾರಿಯ ಕುರಿತು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಫೋಟೋಗಳನ್ನು ಹಂಚಿಕೊಂಡು ತಪ್ಪು ಮಾಹಿತಿ ಹಬ್ಬಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಎಂಟು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ದಾರಿ ತಪ್ಪಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ವಾರಾಣಸಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ 8 ವ್ಯಕ್ತಿಗಳು ಮತ್ತು ಕೆಲವು 'ಎಕ್ಸ್' (ಟ್ವಿಟರ್) ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸಲ್ ತಿಳಿಸಿದ್ದಾರೆ.
ಘಟನೆ ಏನು?
ತಮಿಳುನಾಡು ಮೂಲದ ಮನೋ ಎಂಬುವರು ಈ ಸಂಬಂಧ ದೂರು ನೀಡಿದ್ದಾರೆ. ಇವರ ಕಂಪನಿಯು 2025ರ ನವೆಂಬರ್ 15ರಿಂದ ಮಣಿಕರ್ಣಿಕಾ ಘಾಟ್‌ನಲ್ಲಿ ಸೌಂದರೀಕರಣ ಮತ್ತು ಅಂತ್ಯಕ್ರಿಯೆ ಸೌಲಭ್ಯಗಳ ಉನ್ನತೀಕರಣ ಕಾಮಗಾರಿಯನ್ನು ನಡೆಸುತ್ತಿದೆ. ಜನವರಿ 16 ರಂದು 'ಅಶುತೋಷ್ ಪೋಟ್ನಿಸ್' ಎಂಬ ಎಕ್ಸ್ ಬಳಕೆದಾರರು ಘಾಟ್‌ನ ಕಾಮಗಾರಿಗೆ ಸಂಬಂಧಿಸಿದಂತೆ ಎಐ ಮೂಲಕ ಸೃಷ್ಟಿಸಿದ ನಕಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿಂದೂ ದೇವತೆಗಳಿಗೆ ಸಂಬಂಧಿಸಿದ ಈ ತಿರುಚಲಾದ ಚಿತ್ರಗಳು ಮತ್ತು ತಪ್ಪು ಮಾಹಿತಿಯು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಹೊಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರಷ್ಟೇ ಅಲ್ಲದೆ, ಅದನ್ನು ರೀ-ಪೋಸ್ಟ್ ಮಾಡುವ ಮತ್ತು ಆಕ್ಷೇಪಾರ್ಹ ಕಾಮೆಂಟ್ ಮಾಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಬನ್ಸಲ್ ಸ್ಪಷ್ಟಪಡಿಸಿದ್ದಾರೆ.
ವಿರೋಧಿಗಳ ಷಡ್ಯಂತ್ರ: ಸಿಎಂ ಯೋಗಿ
ವಾರಾಣಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯೋಗಿ, "ಕಾಶಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈಗಾಗಲೇ 55,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳು ಜಾರಿಯಾಗಿವೆ. ಇದನ್ನು ಸಹಿಸದ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹತಾಶೆಯಿಂದ ಸುಳ್ಳು ಪ್ರಚಾರದಲ್ಲಿ ತೊಡಗಿವೆ," ಎಂದು ವಾಗ್ದಾಳಿ ನಡೆಸಿದರು. "ಹಿಂದೆ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ಸಮಯದಲ್ಲೂ ಒಡೆದ ವಿಗ್ರಹಗಳನ್ನು ತೋರಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿತ್ತು," ಎಂದು ಅವರು ಸ್ಮರಿಸಿದರು.
ಅಖಿಲೇಶ್ ಯಾದವ್ ಸವಾಲು
ಯೋಗಿ ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, "ನೀವು ವಾರಾಣಸಿಯ ಘಾಟ್‌ಗಳಿಗೆ ಹೋಗಿ ಅಲ್ಲಿನ ಜನರ ಕಣ್ಣಲ್ಲಿ ಕಣ್ಣಿಟ್ಟು ಈ ಮಾತನ್ನು ಹೇಳಬಲ್ಲಿರಾ? ಇದೊಂದು ಪ್ರಶ್ನೆಯಲ್ಲ, ಸವಾಲು. ಬಹಳ ದುರದೃಷ್ಟಕರ ಸಂಗತಿ," ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

