ಇಂಡಿಯ ಒಕ್ಕೂಟದ ಜೂನ್ 1 ರ ಸಭೆಗೆ ಹಾಜರಾಗುವುದಿಲ್ಲ: ಮಮತಾ
ಲೋಕಸಭೆ ಚುನಾವಣೆಯ ಕೊನೆಯ ಹಂತ ಮತ್ತು ರೆಮಲ್ ಚಂಡಮಾರುತದ ಸಂತ್ರಸ್ತರ ಪರಿಹಾರ ಕಾರ್ಯಗಳಿಂದಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹೊಸದಿಲ್ಲಿ/ಕೋಲ್ಕತ್ತಾ: ಲೋಕಸಭೆ ಚುನಾವಣೆಯ ಕೊನೆಯ ಹಂತ ಮತ್ತು ರೆಮಲ್ ಚಂಡಮಾರುತದ ಸಂತ್ರಸ್ತರ ಪರಿಹಾರ ಕಾರ್ಯಗಳಿಂದಾಗಿ ಜೂನ್ 1 ರಂದು ನಡೆಯಲಿರುವ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜೂನ್ 1 ರಂದು ಮಧ್ಯಾಹ್ನ ಇಂಡಿಯ ಒಕ್ಕೂಟದ ನಾಯಕರ ಸಭೆ ಕರೆದಿದ್ದಾರೆ. ಅಂದು ಕೊನೆಯ ಸುತ್ತಿನ ಮತದಾನ ನಡೆಯಲಿದೆ.
ಕೋಲ್ಕತ್ತಾದಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ʻಅಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಪಂಜಾಬ್, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿಯೂ ಚುನಾವಣೆ ಇದೆ. ಮತದಾನ ಸಂಜೆ 6 ರವರೆಗೆ ನಡೆಯಲಿದೆ; ಕೆಲವೊಮ್ಮೆ ಅವಧಿ ವಿಸ್ತರಿಸಲೂ ಬಹುದು. ಚಂಡಮಾರುತದ ನಂತರದ ಪರಿಹಾರ ಕಾರ್ಯಗಳು ನನ್ನ ಆದ್ಯತೆ,ʼ ಎಂದು ಹೇಳಿದರು.
ರೆಮಲ್ ಚಂಡಮಾರುತ ಗಂಟೆಗೆ 135 ಕಿಮೀ ವೇಗದಿಂದ ಬೀಸುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ದೇಶದ ಕರಾವಳಿ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಆಸ್ತಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಎಂಸಿ ಕಳೆದ ಜನವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಇಂಡಿಯ ಒಕ್ಕೂಟದಿಂದ ಹಿಂದೆ ಸರಿಯಿತು. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷದ ಮೈತ್ರಿಯ ಭಾಗವಾಗಿ ಉಳಿದುಕೊಂಡಿದೆ.
ಚುನಾವಣೆ ಪ್ರಚಾರದ ಸಮಯದಲ್ಲಿ ಮಮತಾ ಅವರು ಲೋಕಸಭೆ ಚುನಾವಣೆಯಲ್ಲಿ ಇಂಡಿಯ ಒಕ್ಕೂಟ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರೋಧಿ ಮೈತ್ರಿಯಲ್ಲಿ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಿದ್ದರು.
9 ಕ್ಷೇತ್ರಗಳಲ್ಲಿ ಚುನಾವಣೆ: ಕೋಲ್ಕತ್ತಾದ ಎರಡು ಸ್ಥಾನಗಳು ಸೇರಿದಂತೆ ಒಂಬತ್ತು ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ. ಕೋಲ್ಕತ್ತಾ ದಕ್ಷಿಣ ಮತ್ತು ಕೋಲ್ಕತ್ತಾ ಉತ್ತರ ಕ್ಷೇತ್ರಗಳೊಟ್ಟಿಗೆ ಜಾದವ್‌ಪುರ, ಡಂಡಂ, ಬಸೀರ್ಹತ್, ಬಾರಾಸಾತ್, ಜಯನಗರ, ಮಥುರಾಪುರ ಮತ್ತು ಡೈಮಂಡ್ ಹಾರ್ಬರ್ ಕ್ಷೇತ್ರಗಳಲ್ಲಿ ಜೂ.1ರಂದು ಮತದಾನ ನಡೆಯಲಿದೆ. ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಇತರ ಉನ್ನತ ನಾಯಕರು ಅಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಆದ್ದರಿಂದ, ಸಿಎಂ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಟಿಎಂಸಿ ಇದನ್ನು ಸಂಘಟಕರಿಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಟಿಎಂಸಿ, ಕಾಂಗ್ರೆಸ್ ಅಥವಾ ಇತರ ಇಂಡಿಯ ಒಕ್ಕೂಟದ ಪಾಲುದಾರರೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿಲ್ಲ. ಆದರೆ, ಉತ್ತರ ಪ್ರದೇಶದ ಭದೋಹಿಯಲ್ಲಿ ಪಕ್ಷದ ಅಭ್ಯರ್ಥಿ ಲಲಿತೇಶಪತಿ ತ್ರಿಪಾಠಿ ಅವರನ್ನು ಸಮಾಜವಾದಿ ಪಕ್ಷ ಬೆಂಬಲಿಸಿದೆ.
ಇಪ್ಪತ್ತೆಂಟು ವಿರೋಧ ಪಕ್ಷಗಳು ಒಗ್ಗೂಡಿ, ಇಂಡಿಯ ಒಕ್ಕೂಟ ರಚಿಸಿಕೊಂಡಿವೆ. ಆದರೆ, ನಿತೀಶ್ ಕುಮಾರ್ ಅವರ ಜನತಾ ದಳ (ಯುನೈ ಟೆಡ್) ಮತ್ತು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಒಕ್ಕೂಟವನ್ನು ತೊರೆದು ಎನ್‌ಡಿಎ ಬೆಂಬಲಿಸುತ್ತಿವೆ.