
ಯಾರಿದು ನಂದಿನಿ ಚಕ್ರವರ್ತಿ? ಬಂಗಾಳದ ಇತಿಹಾಸದಲ್ಲೇ ಇಂತಹ ನೇಮಕಾತಿ ಇದೇ ಮೊದಲು!
ಪಶ್ಚಿಮ ಬಂಗಾಳದ ಆಡಳಿತದಲ್ಲಿ ಇತಿಹಾಸ ಸೃಷ್ಟಿಸಿದ ನಂದಿನಿ ಚಕ್ರವರ್ತಿ. ರಾಜ್ಯದ ಮೊದಲ ಬಂಗಾಳಿ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಮಮತಾ ಬ್ಯಾನರ್ಜಿ ನೇಮಕ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ರಾಜ್ಯದ ಆಡಳಿತ ಯಂತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿದ್ದಾರೆ. ಹಿರಿಯ ಐಎಎಸ್ (IAS) ಅಧಿಕಾರಿ ನಂದಿನಿ ಚಕ್ರವರ್ತಿ ಅವರನ್ನು ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದ ಇತಿಹಾಸದಲ್ಲೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಬಂಗಾಳಿ ಮಹಿಳೆ ಎಂಬ ಹೆಗ್ಗಳಿಕೆಗೆ ನಂದಿನಿ ಪಾತ್ರರಾಗಿದ್ದಾರೆ.
ಮನೋಜ್ ಪಂತ್ ಸ್ಥಾನಕ್ಕೆ ನಂದಿನಿ ನಿಯೋಜನೆ
ಇಲ್ಲಿಯವರೆಗೆ ಮುಖ್ಯ ಕಾರ್ಯದರ್ಶಿಯಾಗಿದ್ದ ಮನೋಜ್ ಪಂತ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರನ್ನು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. 1994ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ನಂದಿನಿ ಚಕ್ರವರ್ತಿ ಅವರು ಮೂರು ದಶಕಗಳ ಕಾಲ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇತ್ತೀಚಿನ ಈ ನೇಮಕಾತಿಯಲ್ಲಿ ಅವರು ತಮ್ಮಗಿಂತ ಹಿರಿಯ ಅಧಿಕಾರಿಗಳನ್ನು ಹಿಂದಿಕ್ಕಿ ಈ ಸ್ಥಾನ ಪಡೆದಿರುವುದು ಆಡಳಿತ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ನಂದಿನಿ ಚಕ್ರವರ್ತಿ ಹಿನ್ನೆಲೆ
ಗೃಹ ಇಲಾಖೆ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕೈಗಾರಿಕಾ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯದಲ್ಲೂ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರಲ್ಲಿ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ನಂದಿನಿ ಅವರು, ರಾಜ್ಯಪಾಲರ ಆಕ್ಷೇಪದ ನಂತರ ಆ ಸ್ಥಾನದಿಂದ ವರ್ಗಾವಣೆಗೊಂಡಿದ್ದರು. ನಂತರ ಮಮತಾ ಬ್ಯಾನರ್ಜಿ ಅವರು ಇವರಿಗೆ ರಾಜಕೀಯವಾಗಿ ಸೂಕ್ಷ್ಮ ಪ್ರದೇಶಗಳಾದ 'ಮಲೆನಾಡು' ಪ್ರದೇಶಗಳ ಜವಾಬ್ದಾರಿಯನ್ನು ನೀಡಿದ್ದರು.
ಜಗದೀಶ್ ಪ್ರಸಾದ್ ಮೀನಾ ನೂತನ ಗೃಹ ಕಾರ್ಯದರ್ಶಿ
ರಾಜ್ಯದ ಮತ್ತೊಂದು ಪ್ರಮುಖ ಹುದ್ದೆಯಾದ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಜಗದೀಶ್ ಪ್ರಸಾದ್ ಮೀನಾ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿಯಲ್ಲೂ ಹಿರಿಯ ಅಧಿಕಾರಿಗಳನ್ನು ಹಿಂದಿಕ್ಕಿ ಬಡ್ತಿ ನೀಡಲಾಗಿದೆ.
ಚುನಾವಣಾ ಹೊತ್ತಲ್ಲಿ ಮಹಿಳಾ ಟ್ರಂಪ್ ಕಾರ್ಡ್?
ಪಶ್ಚಿಮ ಬಂಗಾಳವು ಶೀಘ್ರದಲ್ಲೇ ಚುನಾವಣಾ ಹಂತಕ್ಕೆ ಪ್ರವೇಶಿಸುತ್ತಿರುವ ಈ ಸಮಯದಲ್ಲಿ, ಒಬ್ಬ ಬಂಗಾಳಿ ಮಹಿಳೆಯನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಅತ್ಯಂತ ಮಹತ್ವದ ನಡೆಯೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನಂಬಿಕಸ್ಥ ಮತ್ತು ಅನುಭವಿ ಅಧಿಕಾರಿಗಳ ಮೇಲೆ ಮಮತಾ ಬ್ಯಾನರ್ಜಿ ಭರವಸೆ ಇಟ್ಟಿದ್ದಾರೆ ಎಂಬುದು ಈ ಬದಲಾವಣೆಯಿಂದ ಸ್ಪಷ್ಟವಾಗುತ್ತದೆ.

