
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಕೇಸರಿ ಅಲೆಯ ನಡುವೆ ಮಾಲೆಗಾಂವ್‌ನಲ್ಲಿ 'ಇಸ್ಲಾಂ' ಪಾರಮ್ಯ
ಶುಕ್ರವಾರ (ಜ.16) ಪ್ರಕಟವಾದ ಫಲಿತಾಂಶದ ಪ್ರಕಾರ, ಮಾಲೆಗಾಂವ್ ಪಾಲಿಕೆಯ ಒಟ್ಟು 84 ಸ್ಥಾನಗಳ ಪೈಕಿ ಇಸ್ಲಾಂ ಪಕ್ಷವು ಬರೋಬ್ಬರಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಮಹಾರಾಷ್ಟ್ರದಾದ್ಯಂತ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಿ ಕೇಸರಿ ಅಲೆ ಎಬ್ಬಿಸಿದೆ. ಆದರೆ, ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮಹಾನಗರ ಪಾಲಿಕೆ (ಎಂಎಂಸಿ) ಚುನಾವಣೆಯಲ್ಲಿ ಮಾತ್ರ ಚಿತ್ರಣ ಸಂಪೂರ್ಣ ವಿಭಿನ್ನವಾಗಿದೆ. ಇಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ, ಕೇವಲ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ 'ಇಸ್ಲಾಂ' (ISLAM - Indian Secular Largest Assembly of Maharashtra) ಪಕ್ಷವು ಭರ್ಜರಿ ಗೆಲುವು ಸಾಧಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ.
ಶುಕ್ರವಾರ (ಜ.16) ಪ್ರಕಟವಾದ ಫಲಿತಾಂಶದ ಪ್ರಕಾರ, ಮಾಲೆಗಾಂವ್ ಪಾಲಿಕೆಯ ಒಟ್ಟು 84 ಸ್ಥಾನಗಳ ಪೈಕಿ ಇಸ್ಲಾಂ ಪಕ್ಷವು ಬರೋಬ್ಬರಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಸ್ಲಿಂ ಬಾಹುಳ್ಯದ ಈ ಪವರ್‌ಲೂಮ್ ಪಟ್ಟಣದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಯಾವುದೇ ಪ್ರಭಾವ ಬೀರಲು ವಿಫಲವಾಗಿದ್ದು, ಹೀನಾಯ ಸೋಲು ಕಂಡಿದೆ.
ಏನಿದು ಇಸ್ಲಾಂ ಪಕ್ಷ?
ಎನ್‌ಸಿಪಿ (ಶರದ್ ಪವಾರ್ ಬಣ) ಮಾಜಿ ಶಾಸಕ ಆಸಿಫ್ ಶೇಖ್ ರಶೀದ್ ಅವರು 2024ರ ಆಗಸ್ಟ್‌ನಲ್ಲಿ ಪಕ್ಷ ತೊರೆದು 'ಇಸ್ಲಾಂ' ಪಕ್ಷವನ್ನು ಸ್ಥಾಪಿಸಿದ್ದರು. 2021ರಲ್ಲಿ ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ್ದ ಅವರು, ತಮ್ಮದು ಜಾತ್ಯತೀತ ಪಕ್ಷವಾಗಿದ್ದು, ಎಲ್ಲ ಜಾತಿ ಮತ್ತು ಸಮುದಾಯಗಳನ್ನು ಪ್ರತಿನಿಧಿಸುವುದಾಗಿ ಘೋಷಿಸಿದ್ದರು. ಮಾಲೆಗಾಂವ್‌ನ ಸಮಗ್ರ ಅಭಿವೃದ್ಧಿಯೇ ತಮ್ಮ ಪಕ್ಷದ ಪ್ರಮುಖ ಅಜೆಂಡಾ ಎಂದು ಅವರು ಹೇಳಿಕೊಂಡಿದ್ದಾರೆ. ಈ ಹೊಸ ಪಕ್ಷ ಈಗ ಮಾಲೆಗಾಂವ್‌ನಲ್ಲಿ ದೊಡ್ಡ ಶಕ್ತಿಯಾಗಿ ಉದ್ಭವಿಸಿದೆ.
ರಾಜ್ಯಾದ್ಯಂತ ಇತರೆಡೆ ಉತ್ತಮ ಪ್ರದರ್ಶನ ನೀಡಿರುವ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ (AIMIM) ಮಾಲೆಗಾಂವ್‌ನಲ್ಲಿ 21 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 18 ಸ್ಥಾನಗಳನ್ನು ಪಡೆದರೆ, ಸಮಾಜವಾದಿ ಪಕ್ಷ 5 ಮತ್ತು ಕಾಂಗ್ರೆಸ್ ಕೇವಲ 3 ಸ್ಥಾನಗಳಿಗೆ ಕುಸಿದಿವೆ. ಇನ್ನು ಬಿಜೆಪಿ ಕೇವಲ 2 ಸ್ಥಾನಗಳನ್ನು ಗೆಲ್ಲುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ. 2017ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 9 ಸ್ಥಾನಗಳನ್ನು ಹೊಂದಿತ್ತು ಎಂಬುದು ಗಮನಾರ್ಹ.
ಕಾಂಗ್ರೆಸ್ ಭದ್ರಕೋಟೆ ಛಿದ್ರ
2017ರ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಮಾಲೆಗಾಂವ್‌ನಲ್ಲಿ ಏಕೈಕ ದೊಡ್ಡ ಪಕ್ಷವಾಗಿತ್ತು. ಅಂದು ಅವಿಭಜಿತ ಎನ್‌ಸಿಪಿ 26 ಸ್ಥಾನಗಳನ್ನು ಮತ್ತು ಶಿವಸೇನೆ 13 ಸ್ಥಾನಗಳನ್ನು ಪಡೆದಿದ್ದವು. ಎಐಎಂಐಎಂ 7 ಸ್ಥಾನಗಳನ್ನು ಗಳಿಸಿತ್ತು. ಆದರೆ ಈ ಬಾರಿ ಹಳೆಯ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಆಗಿದ್ದು, ಕಾಂಗ್ರೆಸ್ ಮತ್ತು ಎನ್‌ಸಿಪಿ ಮತಬ್ಯಾಂಕ್ ಇಸ್ಲಾಂ ಪಕ್ಷದ ಕಡೆಗೆ ವಾಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗುರುವಾರ (ಜ.15) ನಡೆದ ಮತದಾನದಲ್ಲಿ 4.81 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಪಾಲಿಕೆಯು ನಗರದ ಸಂಕೀರ್ಣ ಮೂಲಸೌಕರ್ಯ ಮತ್ತು ನಗರ ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ.

