Hema Committee Fallout| ನಟ ಎಡವೇಲ ಬಾಬು ಬಂಧನ, ಜಾಮೀನು ಮೇಲೆ ಬಿಡುಗಡೆ
ನಟಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಲಯಾಳಂ ನಟ ಎಡವೇಲ ಬಾಬು ಅವರನ್ನು ಬುಧವಾರ (ಸೆಪ್ಟೆಂಬರ್ 25) ಬಂಧಿಸಿದ್ದು,ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಬಿಡುಗಡೆಗೊಳಿಸಲಾಯಿತು.
ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆ ನಡೆಸಿದ ಬಳಿಕ ಬಾಬು ಅವರನ್ನು ಬಂಧಿಸಲಾಯಿತು. ಕೊಚ್ಚಿಯಲ್ಲಿ ಬಾಬು ಅವರ ವಿಚಾರಣೆ ಬೆಳಗ್ಗೆ 10 ಗಂಟೆ ಸುಮಾರಿಗೆ ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರನ್ನು ಬಂಧಿಸಲಾಗಿದೆ. ಆನಂತರ, ವೈದ್ಯಕೀಯ ಪರೀಕ್ಷೆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟಿ ದೂರು: ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ದ ಮಾಜಿ ಪ್ರಧಾನ ಕಾರ್ಯದರ್ಶಿ ಬಾಬು ಅವರ ವಿರುದ್ಧ ಎರ್ನಾಕುಲಂ ನಗರ ಉತ್ತರ ಪೊಲೀಸರು ಆಗಸ್ಟ್ 28 ರಂದು ಪ್ರಕರಣ ದಾಖಲಿಸಿದ್ದರು. ನಟಿ ನೀಡಿದ ದೂರಿನ ಪ್ರಕಾರ, ಬಾಬು ಅವರ ಕಾಲೂರು ನಿವಾಸದಲ್ಲಿ ಘಟನೆ ನಡೆದಿದೆ. ಅರ್ಜಿ ಭರ್ತಿ ಮಾಡಲು ಫ್ಲಾಟ್‌ಗೆ ಆಹ್ವಾನಿಸಿ, ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ದೂರಿದ್ದಾರೆ.
ನಟ ಮುಖೇಶ್ ಅವರನ್ನು ಮಂಗಳವಾರ ಬಂಧಿಸಿ, ವೈದ್ಯಕೀಯ ತಪಾಸಣೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ನಟರಾದ ಜಯಸೂರ್ಯ, ಸಿದ್ದಿಕ್, ಮುಖೇಶ್, ಮಣಿಯನ್ಪಿಳ್ಳ ರಾಜು ಮತ್ತು ನಿರ್ದೇಶಕ ರಂಜಿತ್ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ಮಿನು ಮುನೀರ್ ಮತ್ತು ಸೋನಿಯಾ ಮಲ್ಹಾರ್ ಸೇರಿದಂತೆ ಹಲವಾರು ನಟಿಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.