Maharashtra Polls| ಮಹಾಯುತಿ 100 ಸ್ಥಾನವನ್ನೂ ಗೆಲ್ಲುವುದಿಲ್ಲ- ಎನ್‌ಸಿಪಿ (ಎಸ್‌ಪಿ)
x

Maharashtra Polls| ಮಹಾಯುತಿ 100 ಸ್ಥಾನವನ್ನೂ ಗೆಲ್ಲುವುದಿಲ್ಲ- ಎನ್‌ಸಿಪಿ (ಎಸ್‌ಪಿ)


ಮುಂಬೈ: ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಅತೃಪ್ತಿ ಹೆಚ್ಚುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 100ಕ್ಕಿಂತ ಹೆಚ್ಚು ಸ್ಥಾನ ಗಳಿಸುವುದಿಲ್ಲ ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಬುಧವಾರ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ (ಎಸ್‌ಪಿ) ವಕ್ತಾರ ಮಹೇಶ್ ತಾಪಸೆ, ಬಿಜೆಪಿಯ ಕೇಂದ್ರ ನಾಯಕತ್ವದ ಬಗ್ಗೆ ಮತದಾರರ ಅಸಮಾಧಾನವು ಆಡಳಿತಾರೂಢ ಮೈತ್ರಿಕೂಟದ ಬೆಂಬಲ ಕುಸಿಯಲು ಪ್ರಮುಖ ಕಾರಣ. ಈ ನಾಯಕರು ಪ್ರತಿ ಬಾರಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದಾಗ, ಮಹಾಯುತಿಯ ಬೆಂಬಲ ಮತ್ತಷ್ಟು ಕುಸಿಯುತ್ತದೆ,ʼ ಎಂದಿದ್ದಾರೆ.

ಮಂಗಳವಾರ ನಾಗಪುರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾಯುತಿ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸಿ ಕೊಳ್ಳಲು ಬಿಜೆಪಿ ಮತಗಳನ್ನು ಕನಿಷ್ಠ ಶೇ. 10 ರಷ್ಟು ಹೆಚ್ಚಿಸಲು ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದರು.

ʻಶಾ ಅವರ ಮನವಿಯಿಂದ ಮಹಾಯುತಿಯ ಮತಗಳ ಪ್ರಮಾಣ ಶೇ. 20 ರಷ್ಟು ಕಡಿಮೆಯಾಗಲಿದೆ. ಬಿಜೆಪಿಯ ಅಧಿಕಾರ ದಾಹದಿಂದ ಮತದಾರರು ಭ್ರಮನಿರಸನಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಗೆಲುವಿಗೆ ಬಿಜೆಪಿಯು ಕೇಂದ್ರ ನಾಯಕರನ್ನು ಅವಲಂಬಿಸಿದೆ. ರಾಜ್ಯದ ಜನರಿಗೆ ಉತ್ತರದಾಯಿತ್ವ, ಅಭಿವೃದ್ಧಿ, ಉದ್ಯೋಗಗಳು ಬೇಕು. ಅದನ್ನು ನೀಡುವಲ್ಲಿ ಮಹಾಯುತಿ ವಿಫಲವಾಗಿದೆ,ʼ ಎಂದು ಹೇಳಿದರು.

ʻಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚಿದೆ. ಅಸಂವಿಧಾನಿಕ ಮೈತ್ರಿ ಜನರಿಗೆ ಸರಿ ಬಂದಿಲ್ಲ,ʼ ಎಂದು ತಾಪಸೆ ಹೇಳಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ ಮಧ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್(ಎನ್‌ಸಿಪಿ) ಮೈತ್ರಿಕೂಟವು ಅಧಿಕಾರ ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಶಿವಸೇನೆ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ (ಎಂವಿಎ) ತೀವ್ರ ಸ್ಪರ್ಧೆಯೊಡ್ಡಿದೆ.

Read More
Next Story