
ಮಹಾರಾಷ್ಟ್ರದಲ್ಲಿ ಆಘಾತಕಾರಿಯಾಗಿ ಸೋತಿರುವ ಕಾಂಗ್ರೆಸ್‌ಗೆ ಆತ್ಮಾವಲೋಕನ ಅಗತ್ಯ
ಮಹಾರಾಷ್ಟ್ರದಲ್ಲಿ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಪಾಲುದಾರರು ಸಾಮೂಹಿಕ ಆತ್ಮಾವಲೋಕನ ಮಾಡಲಿದ್ದಾರೆ. ಮಹಾಯುತಿಯ 230 ಸ್ಥಾನಗಳ ವಿರುದ್ಧ ಕೇವಲ 46 ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಮಹಾರಾಷ್ಟ್ರದಲ್ಲಿ ಅಧಿಕಾರ ಉಳಿಸಿಕೊಂಡ ಒಂದು ದಿನದ ನಂತರ, ಕಾಂಗ್ರೆಸ್ ಭಾನುವಾರ (ನವೆಂಬರ್ 24) ತನ್ನ ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷಗಳೊಂದಿಗೆ ತಮ್ಮ 'ಆಘಾತಕಾರಿ' ಸೋಲಿನ ಹಿಂದಿನ ಕಾರಣಗಳನ್ನು ಸಾಮೂಹಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುವುದಾಗಿ ಘೋಷಿಸಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಕೇವಲ 46 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಆಘಾತಕಾರಿ'
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶವು 'ಆಘಾತಕಾರಿ' ಮತ್ತು 'ನಂಬಲಸಾಧ್ಯ' ಎಂದು ಹೇಳಿದ್ದಾರೆ.
"ಏನಾಯಿತು ಎಂದು ನಮಗೆ ಅರ್ಥವಾಗುತ್ತಿಲ್ಲ. ಇದು ಕೇವಲ ಕಾಂಗ್ರೆಸ್ ಪಕ್ಷದ ಸೋಲು ಮಾತ್ರವಲ್ಲ, ಇಡೀ ಮಹಾ ವಿಕಾಸ್ ಅಘಾಡಿಯ ಸೋಲು. ಏನಾಯಿತು ಎಂಬುದರ ಸ್ಪಷ್ಟ ಚಿತ್ರಣವನ್ನು ಪಡೆಯಬೇಕಾಗಿದೆ " ಎಂದು ಅವರು ಟಿವಿ ಚಾನೆಲ್ ಒಂದಕ್ಕೆ ತಿಳಿಸಿದರು.
ಮಹಾರಾಷ್ಟ್ರ ಮತ್ತು ಹರಿಯಾಣ ಸೋಲಿನ ನಂತರ ಇಡೀ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಮಗೆ ಆಶ್ಚರ್ಯವಾಗಿದೆ ಎಂದು ವೇಣುಗೋಪಾಲ್ ಹೇಳಿದರು.
ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಪಕ್ಷವು ಯಾವುದೇ ತಿರುಚುವಿಕೆಯನ್ನು ಶಂಕಿಸಿದೆಯೇ ಎಂದು ಕೇಳಿದ ಪ್ರಶ್ನೆಗೆ, ಸದ್ಯ ಅಂಥ ಯಾವುದೇ ಪ್ರಶ್ನೆಗಳುಇಲ್ಲ ಎಂದು ಹೇಳಿದ್ದಾರೆ.
'ಸಂಪೂರ್ಣ ಮೈತ್ರಿಯ ವೈಫಲ್ಯ'
"ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್‌ನ ಭದ್ರಕೋಟೆಗಳಲ್ಲಿ ನಾವು ಭಾರಿ ಹಿನ್ನಡೆ ಅನುಭವಿಸಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ವೈಫಲ್ಯ ಮಾತ್ರವಲ್ಲ, ಇಡೀ ಮೈತ್ರಿಕೂಟದ ವೈಫಲ್ಯ" ಎಂದು ಅವರು ಹೇಳಿದ್ದಾರೆ .
ನಾವು ಒಟ್ಟಿಗೆ ಕುಳಿತು ಸಾಮೂಹಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ( ಕಾರಣಗಳ ಬಗ್ಗೆ) ಎಂದು ವೇಣುಗೋಪಾಲ್ ಹೇಳಿದರು.
ಬಿಜೆಪಿ 132, ಶಿವಸೇನೆ 57 ಮತ್ತು ಎನ್ಸಿಪಿ 41 ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಎಂವಿಎಯಲ್ಲಿ ಎನ್ಸಿಪಿ (ಶರದ್ ಚಂದ್ರ ಪವಾರ್) ಅಭ್ಯರ್ಥಿಗಳು 10, ಕಾಂಗ್ರೆಸ್ 16, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) 20 ಸ್ಥಾನಗಳನ್ನು ಗೆದ್ದಿದ್ದಾರೆ.
ಸಂಘಟಿತ ಕೆಲಸದ ಫಲವಾಗಿ ಪ್ರಿಯಾಂಕಾ ಗೆಲುವು
ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭಾರಿ ಬಹುಮತದ ಗೆಲುವಿನ ಬಗ್ಗೆ ಕೇಳಿದಾಗ, ಇದು ಇಡೀ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಂಘಟಿತ ಕೆಲಸದ ಫಲಿತಾಂಶವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿದರು.
"ವಯನಾಡ್‌ನಲ್ಲಿ ಪಕ್ಷವು ಇಷ್ಟು ದೊಡ್ಡ ಬಹುಮತವನ್ನು ನಿರೀಕ್ಷಿಸಿತ್ತು. ಮತದಾನದ ನಂತರ, ಬಹುಮತದ ಬಗ್ಗೆ ಭಾರಿ ಕಾಳಜಿ ಇತ್ತು. ಆದರೆ, ಪಕ್ಷದ ಆಂತರಿಕ ಮೌಲ್ಯಮಾಪನದ ನಂತರ, ಕಡಿಮೆ ಮತದಾನದ ಶೇಕಡಾವಾರು ಪ್ರಿಯಾಂಕಾ ಅವರ ಬಹುಮತದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಮಗೆ ಖಾತ್ರಿಯಿದೆ" ಎಂದು ಅವರು ಹೇಳಿದರು.