
ಮೈತ್ರಿಯಲ್ಲಿ ಬಿರುಕು: "ಶಿಂಧೆ ರಾಜಕೀಯವನ್ನೇ ಮುಗಿಸುತ್ತೇನೆ" ಎಂದ ಬಿಜೆಪಿ ಸಚಿವ!
ಮಹಾರಾಷ್ಟ್ರದ ಬಿಜೆಪಿ-ಶಿಂಧೆ ಶಿವಸೇನೆ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. 'ಪಕ್ಷ ಅನುಮತಿ ನೀಡಿದರೆ ಶಿಂಧೆ ಹೆಸರನ್ನು ರಾಜಕೀಯದಿಂದ ಅಳಿಸುತ್ತೇನೆ' ಎಂದು ಸಚಿವ ಗಣೇಶ್ ನಾಯ್ಕ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗವಾಗಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆ ಮುಗಿಯುತ್ತಿದ್ದಂತೆಯೇ ಇತ್ತಂಡಗಳ ನಡುವಿನ ಶೀತಲ ಸಮರ ಸ್ಫೋಟಗೊಂಡಿದ್ದು, ಬಿಜೆಪಿ ಸಚಿವ ಗಣೇಶ್ ನಾಯ್ಕ್ ನೀಡಿದ ವಿವಾದಾತ್ಮಕ ಹೇಳಿಕೆ ಈಗ ಮೈತ್ರಿಕೂಟದ ಅಡಿಪಾಯವನ್ನೇ ನಡುಗಿಸಿದೆ.
"ಶಿಂಧೆ ಹೆಸರು ಅಳಿಸಿ ಹಾಕುತ್ತೇನೆ" - ಗಣೇಶ್ ನಾಯ್ಕ್ ಕಿಡಿ
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಜೆಪಿ ಸಚಿವ ಗಣೇಶ್ ನಾಯ್ಕ್, "ಪಕ್ಷ ಅನುಮತಿ ನೀಡಿದರೆ ಏಕನಾಥ್ ಶಿಂಧೆ ಅವರನ್ನು ರಾಜಕೀಯದಿಂದಲೇ ಅಳಿಸಿ ಹಾಕುತ್ತೇನೆ" ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಹೆಚ್ಚಿನ ಸ್ಥಾನ ಗೆಲ್ಲಬಹುದಿತ್ತು ಎಂಬುದು ನಾಯ್ಕ್ ವಾದ. "ಪಕ್ಷದ ನಾಯಕತ್ವದ ಆದೇಶಕ್ಕೆ ಗೌರವ ಕೊಟ್ಟು ಸುಮ್ಮನಿದ್ದೇವೆ, ಇಲ್ಲದಿದ್ದರೆ ಕಾರ್ಯಕರ್ತರು ಈ ಮೈತ್ರಿಯನ್ನು ಸಹಿಸುತ್ತಿರಲಿಲ್ಲ" ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಮುಂಬೈ ಮೇಯರ್ ಪಟ್ಟಕ್ಕಾಗಿ ಜಟಾಪಟಿ
ಬಿಎಂಸಿ ಚುನಾವಣೆಯಲ್ಲಿ ಶಿಂಧೆ ಬಣದ ಸಾಧನೆಯಿಂದಾಗಿ ಬಿಜೆಪಿ ಬಹುಮತದ ಗಡಿ ದಾಟಲು ಸಾಧ್ಯವಾಗಿದೆ. ಆದರೆ, ಈಗ ಮುಂಬೈ ಮೇಯರ್ ಪಟ್ಟ ಯಾರಿಗೆ ಸಿಗಬೇಕು ಎಂಬ ಪ್ರಶ್ನೆ ಮೈತ್ರಿಯಲ್ಲಿ ಕಿಚ್ಚು ಹಚ್ಚಿದೆ.
ತಮ್ಮದೇ ಕಾರ್ಪೊರೇಟರ್‌ಗೆ ಮೇಯರ್ ಸ್ಥಾನ ನೀಡಬೇಕು ಎಂದು ಶಿಂಧೆ ಪಟ್ಟು ಹಿಡಿದಿದ್ದಾರೆ. ಬಿಜೆಪಿಯ ಒಂದು ದೊಡ್ಡ ವರ್ಗವು ಈ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಸಂಧಾನದ ಮಾತುಕತೆ ನಡೆಯುತ್ತಿರುವಾಗಲೇ ಶಿಂಧೆ ತಮ್ಮ ಕಾರ್ಪೊರೇಟರ್‌ಗಳನ್ನು ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಿರುವುದು 'ಬಾರ್ಗೇನಿಂಗ್' ತಂತ್ರಕ್ಕೆ ಸಾಕ್ಷಿಯಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದು, ಮೇಯರ್ ಸ್ಥಾನದ ಬಗ್ಗೆ ಉಭಯ ಪಕ್ಷಗಳು ಸೌಹಾರ್ದಯುತ ತೀರ್ಮಾನ ತೆಗೆದುಕೊಳ್ಳಲಿವೆ ಎಂದು ತಿಳಿಸಿದ್ದಾರೆ.

