
ಸರಪಂಚ್ ಕೊಲೆ ಪ್ರಕರಣ: ಆಪ್ತನ ಬಂಧನದ ಬೆನ್ನಲ್ಲೇ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ರಾಜೀನಾಮೆ
ಮಸಾಜೋಗ್ ಗ್ರಾಮದ ಸರಪಂಚ್ ಸಂತೋಷ್ ದೇಶ್‌ಮುಖ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಸಚಿವರ ಸಹಾಯಕ ವಾಲ್ಮೀಕಿ ಕಾರಡ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ಸರಪಂಚ ಒಬ್ಬ ಕೊಲೆ ಪ್ರಕರಣದ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಹತ್ಯೆಯಲ್ಲಿ ತಮ್ಮ ಆಪ್ತನೊಬ್ಬ ಭಾಗಿಯಾಗಿದ್ದಾನೆ ಎಂಬ ಆರೋಪ ಬಂದ ಬಳಿಕ ಸಚಿವ ಧನಂಜಯ್ ಮುಂಡೆ ಮಂಗಳವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದು ಗಂಭೀರ ಪ್ರಕರಣವಾಗಿದ್ದು ಸರ್ಪಂಚ್ ಸಂತೋಷ್ ದೇಶ್‌ಮುಖ್ ಎಂಬುವನ್ನು ಅತ್ಯಂತ ಹೀನಾಯವಾಗಿ ಕೊಲೆ ಮಾಡಲಾಗಿತ್ತು. ಅದರ ವಿಡಿಯೊವನ್ನು ವೈರಲ್ ಮಾಡಲಾಗಿತ್ತು. ಇದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನೆನಪಿಸುವಂತಿದೆ. ಈ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಹಾಗೂ ಇತರರಿಗೆ ಕೋರ್ಟ್ ಜಾಮೀನು ನೀಡಿದೆ.
ಮಸಾಜೋಗ್ ಗ್ರಾಮದ ಸರಪಂಚ್ ಸಂತೋಷ್ ದೇಶ್‌ಮುಖ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಸಚಿವರ ಸಹಾಯಕ ವಾಲ್ಮೀಕಿ ಕಾರಡ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಕ್ಷಣ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೂಚನೆಯ ಮೇರೆಗೆ ಮುಂಡೆ ಅವರು ರಾಜೀನಾಮೆ ನೀಡಿದ್ದಾರೆ.
ಇಂಧನ ಕಂಪನಿಯೊಂದರಿಂದ ಹಣ ವಸೂಲಿಗೆ ನಡೆದ ಯತ್ನವನ್ನು ತಡೆಯಲು ಮುಂದಾಗಿದ್ದ ಸರಪಂಚ್ ಸಂತೋಷ್ ದೇಶ್‌ಮುಖ್ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. 2024ರ ಡಿಸೆಂಬರ್ 9ರಂದು ಈ ಕೊಲೆ ನಡೆದಿದ್ದು, ಮೃತದೇಹ ರಸ್ತೆ ಬದಿ ಪತ್ತೆಯಾಗಿತ್ತು.
ಆರೋಪಿಗಳು ಸರಪಂಚ್ ಸಂತೋಷ್ ದೇಶ್ ಮುಖ್ ಅವರ ಮೇಲೆ ಮಧ್ಯಾಹ್ನ 3.30ರಿಂದ ಸಂಜೆ 6ರವರೆಗೆ ನಿರಂತರವಾಗಿ ಹಲ್ಲೆ ನಡೆಸಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ. 41 ಇಂಚುಗಳ ಗ್ಯಾಸ್ ಪೈಪ್, ಕಬ್ಬಿಣದ ರಾಡ್, ಮರದ ಕೋಲಿನಲ್ಲಿ ಥಳಿಸಲಾಗಿತ್ತು. ಚೂಪಾದ ಆಯುಧಗಳಿಗೆ ಮೈಗೆಲ್ಲ ಚುಚ್ಚಲಾಗಿತ್ತು.
ಚಿತ್ರಹಿಂಸೆ ನೀಡುವ 15 ವಿಡಿಯೋ ಮತ್ತು 8 ಫೋಟೋಗಳನ್ನೂ ದುಷ್ಕರ್ಮಿಗಳು ಸೆರೆಹಿಡಿದಿದ್ದರು. ರಕ್ತದಿಂದ ತೋಯ್ದು ಹೋಗಿದ್ದ ದೇಶ್‌ಮುಖ್ ದೇಹದ ಮೇಲೆ ಒಬ್ಬ ಆರೋಪಿಯು ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವೂ ಇದೆ. ಪೊಲೀಸರು ಕಳೆದ ವಾರ ಬೀಡ್ ಜಿಲ್ಲೆಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವ ವೇಳೆ ಈ ಎಲ್ಲ ವಿಡಿಯೋಗಳನ್ನೂ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಲ್ಮೀಕ್ ಕರಾಡ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಾಲ್ಮೀಕ್ ಕರಾಡ್ ಸಚಿವ ಧನಂಜಯ್ ಮುಂಡೆ ಅವರ ಆಪ್ತರಾಗಿರುವ ಕಾರಣ, ಈಗ ಸಚಿವರ ತಲೆದಂಡವಾಗಿದೆ ಎಂದು ಮೂಲಗಳು ತಿಳಿಸಿವೆ.