ಮಹಾರಾಷ್ಟ್ರ ಚುನಾವಣೆ: ಶಾಯಿ ವಿವಾದಕ್ಕೆ ರಾಹುಲ್ ಗಾಂಧಿ ಆಕ್ರೋಶ
x
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಮಹಾರಾಷ್ಟ್ರ ಚುನಾವಣೆ: 'ಶಾಯಿ' ವಿವಾದಕ್ಕೆ ರಾಹುಲ್ ಗಾಂಧಿ ಆಕ್ರೋಶ

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಳಿಸಲಾಗದ ಶಾಯಿಯನ್ನು ಅಸಿಟೋನ್ ಬಳಸಿ ಅಳಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ಯುದ್ಧ ಶುರುವಾಗಿದೆ.


ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿರುವ ಬೆನ್ನಲ್ಲೇ, 'ಚುನಾವಣಾ ಶಾಯಿ' ಅಳಿಸಿ ಹೋಗುತ್ತಿರುವ ವಿವಾದ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಚುನಾವಣಾ ಕಣದಲ್ಲಿ ಈ ಬಾರಿ ರಾಜಕೀಯ ಪಕ್ಷಗಳ ಅಬ್ಬರಕ್ಕಿಂತಲೂ 'ಅಳಿಸಲಾಗದ ಶಾಯಿ'ಯದ್ದೇ ಸದ್ದು. ಮತದಾರನ ಬೆರಳ ಮೇಲಿನ ಶಾಯಿ ಪ್ರಜಾಪ್ರಭುತ್ವದ ಅತಿದೊಡ್ಡ ಸಾಕ್ಷಿ. ಆದರೆ, ಆ ಸಾಕ್ಷಿಯೇ ಸುಲಭವಾಗಿ ಅಳಿಸಿಹೋಗುತ್ತಿದೆ ಎಂಬ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಏನಿದು ವಿವಾದ?

ಗುರುವಾರ (ಜನವರಿ 15) ನಡೆದ ಬಿಎಂಸಿ (BMC) ಸೇರಿದಂತೆ ವಿವಿಧ ಪಾಲಿಕೆಗಳ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಬೆರಳಿಗೆ ಹಚ್ಚಲಾದ ಶಾಯಿಯನ್ನು ಅಸಿಟೋನ್ (Acetone) ಬಳಸಿ ಸುಲಭವಾಗಿ ಅಳಿಸಿ ಹಾಕುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಸಿಟೋನ್ ಎಂಬುದು ಸಾಮಾನ್ಯವಾಗಿ ನೇಲ್ ಪಾಲಿಷ್ ರಿಮೂವರ್ ಮತ್ತು ಕ್ಲೀನಿಂಗ್ ಏಜೆಂಟ್‌ಗಳಲ್ಲಿ ಬಳಸುವ ರಾಸಾಯನಿಕವಾಗಿದೆ. ಇದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.

ರಾಹುಲ್ ಗಾಂಧಿ ವಾಗ್ದಾಳಿ

ಈ ವೀಡಿಯೊಗಳನ್ನು ಉಲ್ಲೇಖಿಸಿ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಚುನಾವಣಾ ಆಯೋಗವು ನಾಗರಿಕರನ್ನು ದಾರಿ ತಪ್ಪಿಸುತ್ತಿದೆ. ಇದರಿಂದಾಗಿಯೇ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕುಸಿದಿದೆ. 'ವೋಟ್ ಚೋರಿ' ಎನ್ನುವುದು ರಾಷ್ಟ್ರವಿರೋಧಿ ಕೃತ್ಯ" ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಖಡಕ್ ಪ್ರತ್ಯುತ್ತರ

ರಾಹುಲ್ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, "ಸೋಲಿನ ಭೀತಿಯಿಂದ ಬಹಾನೆ (ನೆಪ) ಬ್ರಿಗೇಡ್ ಮತ್ತೆ ಸಕ್ರಿಯವಾಗಿದೆ. ಮತ ಎಣಿಕೆ ಮುಗಿಯುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ರಾಹುಲ್ ಗಾಂಧಿಯವರನ್ನು 'ಖಾಂದಾನಿ ಚೋರ್' (ಪರಂಪರಾಗತ ಕಳ್ಳ) ಎಂದು ಕರೆಯುವ ಮೂಲಕ ಹರಿಹಾಯ್ದಿದ್ದಾರೆ.

ಚುನಾವಣಾ ಆಯೋಗದ ಸ್ಪಷ್ಟನೆ

ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ (SEC) ಸ್ಪಷ್ಟನೆ ನೀಡಿದ್ದು, "ಶಾಯಿಯನ್ನು ಅಳಿಸಿ ಹಾಕಿದ ತಕ್ಷಣ ಒಬ್ಬ ವ್ಯಕ್ತಿ ಮತ್ತೆ ಮತದಾನ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮತದಾರನ ದಾಖಲೆಯನ್ನು ಪೋಲಿಂಗ್ ಬೂತ್‌ನಲ್ಲಿ ನಿರ್ವಹಿಸಲಾಗುತ್ತದೆ. ಶಾಯಿ ಅಳಿಸಿದರೂ ದಾಖಲೆಗಳಲ್ಲಿ ಈಗಾಗಲೇ ಮತದಾನ ಮಾಡಿರುವುದು ನಮೂದಾಗಿರುವುದರಿಂದ ಮರು ಮತದಾನಕ್ಕೆ ಅವಕಾಶವಿರುವುದಿಲ್ಲ" ಎಂದು ತಿಳಿಸಿದೆ.

Read More
Next Story