ವಕ್ಫ್‌ ಮಂಡಳಿಗೆ 10 ಕೋಟಿ ಅನುದಾನ ಬಿಡುಗಡೆ ಮಾಡಿ ವಾಪಸ್‌ ಪಡೆದ ಮಹಾರಾಷ್ಟ್ರ ಸರ್ಕಾರ
x
Devendra Fadnavis

ವಕ್ಫ್‌ ಮಂಡಳಿಗೆ 10 ಕೋಟಿ ಅನುದಾನ ಬಿಡುಗಡೆ ಮಾಡಿ ವಾಪಸ್‌ ಪಡೆದ ಮಹಾರಾಷ್ಟ್ರ ಸರ್ಕಾರ

ಬಿಜೆಪಿ ಈ ನಿರ್ಧಾರವನ್ನು ವಿರೋಧಿಸಿತ್ತು. ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು ವಕ್ಫ್ ಮಂಡಳಿಗೆ ಸಂವಿಧಾನದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.


ರಾಜ್ಯ ವಕ್ಫ್ ಮಂಡಳಿಯನ್ನು ಬಲಪಡಿಸಲು 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಒಂದು ದಿನದ ಹಿಂದೆ ಹೊರಡಿಸಲಾದ ಸರ್ಕಾರದ ನಿರ್ಣಯವನ್ನು ಬಿಜೆಪಿಯ ವಿರೋಧದ ನಂತರ ಮಹಾರಾಷ್ಟ್ರ ಸರ್ಕಾರ ಹಿಂತೆಗೆದುಕೊಂಡಿದೆ. ಇದು ವಿವಾದಕ್ಕೆ ಕಾರಣವಾಗಿದೆ.

ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಖಚಿತಪಡಿಸಿದ್ದಾರೆ. ಮಹಾಯುತಿ ಮೈತ್ರಿಯ ಭಾಗವಾಗಿ ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಈ ನಿರ್ಧಾರವನ್ನು ವಿರೋಧಿಸಿತ್ತು. ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು ವಕ್ಫ್ ಮಂಡಳಿಗೆ ಸಂವಿಧಾನದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ನಿರ್ಗಮನ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತು ಹೊಸ ಸರ್ಕಾರದಲ್ಲಿ ಸಿಎಂ ಪಟ್ಟಕ್ಕೇರಲು ಸಜ್ಜಾಗಿರುವ ರಾಜ್ಯ ಬಿಜೆಪಿಯ ಉನ್ನತ ನಾಯಕ ದೇವೇಂದ್ರ ಫಡ್ನವೀಸ್ ಈ ಬಗ್ಗೆ ಹೇಳಿಕೆ ನೀಡಿದ್ದು, ಉಸ್ತುವಾರಿ ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಸೂಕ್ತವಲ್ಲದ ಕಾರಣ ಅದನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ .

'ಸಮಯ, ಸಿಂಧುತ್ವವನ್ನು ತನಿಖೆ ಮಾಡುತ್ತೇವೆ

ಹೊಸ ಸರ್ಕಾರ ರಚನೆಯಾದ ಬಳಿಕ ವಕ್ಫ್‌ ಮಂಡಳಿಗೆ ಅನುದಾನ ನೀಡಲು ಮುಂದಾಗಿರುವ ಸರ್ಕಾರಿ ನಿರ್ಣಯದ ಬಗ್ಗೆ ತನಿಖೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಶಾಸಕ ರಯೀಸ್ ಶೇಖ್ ಅವರು ಆದೇಶವನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ಇದು "ಅಲ್ಪಸಂಖ್ಯಾತ ವಿರೋಧಿ" ಎಂದು ಹೇಳಿದ್ದಾರೆ.

288 ಸದಸ್ಯರ ವಿಧಾನಸಭೆಯ ಅವಧಿ ನವೆಂಬರ್ 26ರಂದು ಕೊನೆಗೊಂಡ ನಂತರ ಏಕನಾಥ್ ಶಿಂಧೆ ಪ್ರಸ್ತುತ ಮಹಾರಾಷ್ಟ್ರದ ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದಾರೆ.

ಮಹಾಯುತಿ ಭರ್ಜರಿ ಗೆಲುವು

ಆಡಳಿತಾರೂಢ ಮಹಾಯುತಿ 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿದೆ. ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದಿದೆ.

ಛತ್ರಪತಿ ಸಂಭಾಜಿನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯನ್ನು ಬಲಪಡಿಸಲು ಹಣಕಾಸು ಮತ್ತು ಯೋಜನಾ ಇಲಾಖೆ 10 ಕೋಟಿ ರೂ.ಗಳ ಅನುದಾನ ಕೋರಿದೆ ಎಂದು ಸರ್ಕಾರ ಗುರುವಾರ ಸರ್ಕಾರದ ನಿರ್ಣಯ ಹೊರಡಿಸಲಾಗಿದೆ.

ಗುರುವಾರ ಹೊರಡಿಸಿದ ನಿರ್ಣಯದದ ಪ್ರಕಾರ, ರಾಜ್ಯ ವಕ್ಫ್ ಮಂಡಳಿಯನ್ನು ಬಲಪಡಿಸಲು 2024-25ರಲ್ಲಿ 20 ಕೋಟಿ ರೂ. ಅದರಲ್ಲಿ 2 ಕೋಟಿ ರೂ.ಗಳನ್ನು ಈಗಾಗಲೇ ಮಂಡಳಿಗೆ ವಿತರಿಸಲಾಗಿದೆ. ವೆಚ್ಚವನ್ನು ನಿಗದಿತ ಮಾನದಂಡಗಳ ಅಡಿಯಲ್ಲಿ ತರಲು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಲಾಗಿದೆ.

ಸುಳ್ಳು ಸುದ್ದಿ ಎಂದ ಬಿಜೆಪಿ

ಬಿಜೆಪಿ-ಮಹಾಯುತಿ ಸರ್ಕಾರವು ವಕ್ಫ್ ಮಂಡಳಿಗೆ 10 ಕೋಟಿ ರೂ.ಗಳ ಅನುದಾನವನ್ನು ನೀಡಿದೆ ಎಂದು "ಸುಳ್ಳು ಸುದ್ದಿ" ಹರಡಲಾಗುತ್ತಿದೆ ಎಂದು ಮಹಾರಾಷ್ಟ್ರ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

" ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬಿಜೆಪಿಯ ತೀವ್ರ ವಿರೋಧದ ನಂತರ ನಿರ್ಣಯ ರದ್ದುಗೊಳಿಸಲಾಗಿದೆ. ವಕ್ಫ್ ಮಂಡಳಿಗೆ ಸಂವಿಧಾನದಲ್ಲಿ ಸ್ಥಾನವಿಲ್ಲ ಎಂಬ ತನ್ನ ನಿಲುವಿಗೆ ಬಿಜೆಪಿ ದೃಢವಾಗಿದೆ" ಎಂದು ಬಿಜೆಪಿಯ ಮಹಾರಾಷ್ಟ್ರ ಘಟಕ ಪೋಸ್ಟ್‌ನಲ್ಲಿ ತಿಳಿಸಿದೆ.

ವಕ್ಫ್ ಮಂಡಳಿಗೆ ಸಂಪನ್ಮೂಲಗಳ ಕೊರತೆ

ಸಮಾಜವಾದಿ ಪಕ್ಷದ ಶಾಸಕ ರಯೀಸ್ ಶೇಖ್ ಮಾತನಾಡಿ, ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯವು ಶೇಕಡಾ 12 ರಷ್ಟಿದೆ ಮತ್ತು ವಕ್ಫ್ ಮಂಡಳಿಯ ಸಂಪನ್ಮೂಲಗಳ ಕೊರತೆಯಿಂದಾಗಿ, ಅದರ ಶೇಕಡಾ 60 ರಷ್ಟು ಆಸ್ತಿಗಳನ್ನು ಅತಿಕ್ರಮಣ ಮಾಡಲಾಗಿದೆ ಎಂದು ಹೇಳಿದ್ದಾರೆ

ಆಸ್ತಿ ಸಂಬಂಧಿತ ಕಾನೂನು ಹೋರಾಟಗಳನ್ನು ಮುಂದುವರಿಸಲು ಮಂಡಳಿಗೆ ಹಣದ ಕೊರತೆಯಿದೆ. ಅದೇ ರೀತಿ ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸಲು ಈ ಹಣಕಾಸಿನ ನೆರವಿನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ 37,330 ಎಕರೆ ಪ್ರದೇಶದಲ್ಲಿ 23,566 ವಕ್ಫ್ ಆಸ್ತಿಗಳಿದ್ದು, ಛತ್ರಪತಿ ಸಂಭಾಜಿನಗರ ವಿಭಾಗದಲ್ಲಿ ಅತಿ ಹೆಚ್ಚು ಆಸ್ತಿಗಳಿವೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ವಕ್ಫ್ (ತಿದ್ದುಪಡಿ) ಮಸೂದೆಯ ವಿವಾದದ ಮಧ್ಯೆ ಈ ಬೆಳವಣಿಗೆಗಳು ನಡೆದಿವೆ.

ವಕ್ಫ್ (ತಿದ್ದುಪಡಿ) ಮಸೂದೆ, 2024

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024 ಅಂಗೀಕರ ಮಾಡುವುದಾಗಿ ಶಾಸಕಾಂಗ ಕಾರ್ಯಸೂಚಿಯಲ್ಲಿ ಕೇಂದ್ರ ಸರ್ಕಾರವು ಪಟ್ಟಿ ಮಾಡಿತ್ತು.

ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿಪಾರದರ್ಶಕತೆ ಖಚಿತಪಡಿಸಿಕೊಳ್ಳಲು ವಕ್ಫ್ ಕಾಯ್ದೆ, 1995 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಈ ಸಂಸ್ಥೆಗಳಲ್ಲಿ ಮಹಿಳೆಯರನ್ನು ಕಡ್ಡಾಯವಾಗಿ ಸೇರಿಸುವ ನಿಬಂಧನೆಗಳನ್ನು ಸಹ ಹೊಂದಿದೆ.

ಈ ಮಸೂದೆಯನ್ನು ಆಗಸ್ಟ್ 8 ರಂದು ಲೋಕಸಭೆಯಲ್ಲಿ ಪ್ರಕಟಿಸಲಾಗಿತ್ತು. ಲೋಕಸಭಾ ಸಂಸದ ಜಗದಾಂಬಿಕಾ ಪಾಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಪರಿಶೀಲನೆಗಾಗಿ ಕಳುಹಿಸಲಾಯಿತು.

ಈ ವಾರದ ಆರಂಭದಲ್ಲಿ, ಜೆಸಿಪಿಯಲ್ಲಿರುವ ವಿರೋಧ ಪಕ್ಷದ ಸದಸ್ಯರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸಮಿತಿಯ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರಿತ್ತು.

Read More
Next Story