Mahakumbh 2025 : ದುರಂತದ ಬಳಿಕ 2ನೇ ಶಾಹಿಸ್ನಾನ ಆರಂಭ: ಮೆರವಣಿಗೆಗೆ ಚಾಲನೆ
Mahakumbh 2025 : ಮಹಾಕುಂಭ ಮೇಳದ ಪ್ರತೀತಿಯಂತೆ ಮೆರವಣಿಗೆಗಳ ಮೂಲಕ ತ್ರಿವೇಣಿ ಸಂಗಮಕ್ಕೆ ಒಂದೊಂದೇ ಅಖಾಡಗಳು ಆಗಮಿಸಿ ಅಮೃತ ಸ್ನಾನ ಮಾಡಲಿವೆ.
ಪ್ರಯಾಗ್ರಾಜ್ನ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ. ಹಲವರನ್ನು ಬಲಿ ಪಡೆದಿದೆ ಎಂದು ಪ್ರಾಥಮಿಕ ವರದಿ ಹೇಳಿದೆ. ಬುಧವಾರ ಮುಂಜಾನೆ ವೇಳೆ ಘಟನೆ ಸಂಭವಿಸಿದ್ದು ಬೆಳಗ್ಗೆಯಾದ ತಕ್ಷಣ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಹೀಗಾಗಿ ಮೌನಿ ಅಮವಾಸ್ಯೆಯ ವಿಶೇಷ ಶಾಹಿ ಸ್ನಾನ ನಿಗದಿಯಂತೆ ಆರಂಭಗೊಂಡಿದೆ. ಅದರಂತೆ ಮಹಾಕುಂಭ ಮೇಳದ 2ನೇ ಶಾಹಿ ಸ್ನಾನ ಆರಂಭಗೊಂಡಿದೆ.
ಮಹಾಕುಂಭ ಮೇಳಕ್ಕೆ ಬಂದಿರುವ ನಾನಾ ಅಖಾಡಗಳ ಸಾಧು, ಸಂತರು, ಅಘೋರಿಗಳು ತಮ್ಮ ತಮ್ಮ ತಂಡದೊಂದಿಗೆ ತ್ರಿವೇಣಿ ಸಂಗಮಕ್ಕೆ ಮೆರವಣಿಗೆ ಆರಂಭಿಸಿದ್ದಾರೆ. ಮಹಾಕುಂಭ ಮೇಳದ ಪ್ರತೀತಿಯಂತೆ ಮೆರವಣಿಗೆಗಳ ಮೂಲಕ ತ್ರಿವೇಣಿ ಸಂಗಮಕ್ಕೆ ಒಂದೊಂದೇ ಅಖಾಡಗಳು ಆಗಮಿಸಿ ಅಮೃತ ಸ್ನಾನ ಮಾಡಲಿವೆ
ಮುಂಜಾನೆ ವೇಳೆಗೆ ಕಾಲ್ತುಳಿತ ಘಟನೆ ಉಂಟಾಗಿರುವ ಕಾರಣ ಶಾಹಿ ಸ್ನಾನದ ಸಮಯವನ್ನು ಮುಂದೂಡಲು ಎಲ್ಲ ಅಖಾಡಗಳು ತೀರ್ಮಾನ ಮಾಡಿದ್ದವು. ಆದರೆ, ಬೆಳಗಾಗುವಷ್ಟರಲ್ಲಿ ಅಧಿಕಾರಿಗಳು ಜನರನ್ನು ನಿಯಂತ್ರಣ ಮಾಡಿದರು. ಹೀಗಾಗಿ ದಟ್ಟಣೆ ಕಡಿಮೆಯಾಯಿತು. ಬಳಿಕ ಬುಧವಾರವೇ ಅಮೃತ ಸ್ನಾನ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಪೊಲೀಸರ ಬಿಗಿಭದ್ರತೆಯ ನಡುವೆ ಅಖಾಡಗಳ ಸಾಧುಗಳು ತಮ್ಮ ಧಾರ್ಮಿಕ ಪ್ರಕ್ರಿಯೆಯನ್ನು ಈಗ ಆರಂಭಿಸಿದ್ದಾದರೆ.
10 ಗಂಟೆವರೆಗೆ 3.61 ಕೋಟಿ ಜನರಿಂದ ಸ್ನಾನ:
ಕಾಲ್ತುಳಿತದ ದುರ್ಘಟನೆ ಹೊರತಾಗಿಯೂ ಪ್ರಯಾಗ್ರಾಜ್ಗೆ ಭಕ್ತರ ಆಗಮನ ನಿರಂತರವಾಗಿದೆ. ಬೆಳಗ್ಗೆ 10 ಗಂಟೆಯವರೆಗೆ ತ್ರಿವೇಣಿ ಸಂಗಮದಲ್ಲಿ 3.61 ಕೋಟಿ ಮಂದಿ ಮಿಂದೆದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಸಂಜೆಯ ವೇಳೆಗೆ ಸುಮಾರು 10 ಕೋಟಿ ಮಂದಿ ಪುಣ್ಯಸ್ನಾನ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ.13ರಿಂದ ಅಂದರೆ ಮಹಾಕುಂಭ ಆರಂಭ ಆದಾಗಿನಿಂದಲೂ ಈವರೆಗೆ ಸುಮಾರು 20 ಕೋಟಿ ಭಕ್ತರು ಅಮೃತ ಸ್ನಾನ ಮಾಡಿದ್ದು, ಈ ಸಂಖ್ಯೆ 40 ಕೋಟಿಯಾಗುವ ಸಾಧ್ಯತೆಗಳಿವೆ.