Maha Kumbh Mela: ಮಹಾಕುಂಭ ಮೇಳ ಆರಂಭ: ಸಾಧು–ಸಂತರ ಮಹಾಪೂರ
Maha Kumbh Mela: ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಕೂಡುವ ಸ್ಥಳವಾದ ಸಂಗಮದಲ್ಲಿ ಸೋಮವಾರ (ಜನವರಿ 13) ಮಹಾ ಕುಂಭ ಮೇಳ (Maha Kumbh Mela) ಪ್ರಾರಂಭಗೊಂಡಿತು. ವಿವಿಧ ಕಡೆಯ 40 ಲಕ್ಷಕ್ಕೂ ಹೆಚ್ಚು ಭಕ್ತರು ಮೊದಲ ಪವಿತ್ರ ಸ್ನಾನ ಮಾಡಿದರು.
ಜನವರಿ 13ರಿಂದ ಫೆಬ್ರವರಿ 26 ರವರೆಗೆ ನಡೆಯಲಿರುವ ಮಹಾ ಕುಂಭ ಮೇಳವು ಭಾರತದ ಪ್ರಾಚೀನ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಜಾಗತಿಕ ಪ್ರಾಮುಖ್ಯತೆ ಒದಗಿಸಲಿದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಫೆಬ್ರುವರಿ 26ರವರೆಗೆ 45 ದಿನ ನಡೆಯುವ ಮೇಳದಲ್ಲಿ ದೇಶ– ವಿದೇಶಗಳಿಂದ ಭಕ್ತರು ಭಾಗವಹಿಸಲಿದ್ದಾರೆ. ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಈ ಬಾರಿ ನಡೆಯುತ್ತಿರುವುದು 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳವಾಗಿದೆ. ಹಿಂದಿನ ಬಾರಿ ಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು. ಈ ಬಾರಿ ಮಹಾಕುಂಭ ಮೇಳದಲ್ಲಿ 45 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೃಹತ್ ಜಾಗ
ಕಳೆದ ಬಾರಿ 7,900 ಎಕರೆ ಜಾಗದಲ್ಲಿ ಕುಂಭ ಮೇಳ ಆಯೋಜಿಸಲಾಗಿತ್ತು. ಈ ಬಾರಿ ಶೇ 25ರಷ್ಟು ಹೆಚ್ಚು ಸ್ಥಳವನ್ನು ಮಹಾಕುಂಭ ಮೇಳಕ್ಕಾಗಿ ಬಳಸಿಕೊಳ್ಳಲಾಗಿದೆ. ಕಳೆದ ಬಾರಿ ₹3,500 ಕೋಟಿ ವೆಚ್ಚದಲ್ಲಿ ಕುಂಭಮೇಳ ನಡೆದಿತ್ತು; ಈ ಬಾರಿ ಮಹಾಕುಂಭ ಮೇಳದ ವೆಚ್ಚ ಅದರ ಎರಡು ಪಟ್ಟು ಇದೆ. 2019ರಲ್ಲಿ ನಡೆದಿದ್ದ ಕುಂಭ ಮೇಳದ ಘಾಟ್‌ಗಳ ಉದ್ದ 8 ಕಿ.ಮೀ.ಇತ್ತು. ಈ ಬಾರಿ ಅದನ್ನು 12 ಕಿ.ಮೀ.ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಗಂಗಾ, ಯಮುನಾ ನದಿಗಳ ಸಂಗಮ ಸ್ಥಳ. ಗುಪ್ತಗಾಮಿನಿಯಾದ ಸರಸ್ವತಿ ನದಿಯೂ ಪ್ರಯಾಗ್‌ರಾಜ್‌ನಲ್ಲಿ ಸಂಗಮಿಸುತ್ತಾಳೆ ಎಂಬ ನಂಬಿಕೆ ಇದೆ. ಪುಷ್ಯ ಪೂರ್ಣಿಮೆಯ ಪವಿತ್ರ ದಿನದಂದು ಶಾಹೀ (ಪವಿತ್ರ) ಸ್ನಾನ ಮಾಡುವುದು ಭಕ್ತಾದಿಗಳ ಬಯಕೆಯಾಗಿದೆ.