![Maha Kumbh 2025 : ಮಹಾಕುಂಭಮೇಳದಲ್ಲಿ ರಾಷ್ಟ್ರಪತಿ ಮುರ್ಮು ಪುಣ್ಯಸ್ನಾನ Maha Kumbh 2025 : ಮಹಾಕುಂಭಮೇಳದಲ್ಲಿ ರಾಷ್ಟ್ರಪತಿ ಮುರ್ಮು ಪುಣ್ಯಸ್ನಾನ](https://karnataka.thefederal.com/h-upload/2025/02/10/511806-droupadi-murmu.webp)
Maha Kumbh 2025 : ಮಹಾಕುಂಭಮೇಳದಲ್ಲಿ ರಾಷ್ಟ್ರಪತಿ ಮುರ್ಮು ಪುಣ್ಯಸ್ನಾನ
Maha Kumbh 2025 : ಸೋಮವಾರ ಬೆಳಗ್ಗೆ ಪ್ರಯಾಗ್‌ರಾಜ್‌ಗೆ ಬಂದಿಳಿದ ಮುರ್ಮು ಅವರನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವಾಗತಿಸಿದರು.
ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಭೇಟಿ ನೀಡಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಪ್ರಯಾಗ್‌ರಾಜ್‌ಗೆ ಬಂದಿಳಿದ ಮುರ್ಮು ಅವರನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ವಾಗತಿಸಿದರು. ಅಲ್ಲಿಂದ ನೇರವಾಗಿ ಮಹಾಕುಂಭ ಪ್ರದೇಶಕ್ಕೆ ತೆರಳಿದ ರಾಷ್ಟ್ರಪತಿ ಮುರ್ಮು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಪುಣ್ಯ ಕೈಗೊಂಡರು.
ತದನಂತರ ಅವರು ಅಕ್ಷಯವಾಟ್ ಮತ್ತು ಬಡೇ ಹನುಮಾನ್ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುರ್ಮು ಅವರಿಗೆ ಸಾಥ್ ನೀಡಿದರು.
ಈ ಹಿಂದೆ ರಾಷ್ಟ್ರಪತಿ ಭವನ ಹೊರಡಿಸಿದ್ದ ಪ್ರಕಟಣೆಯಲ್ಲಿ, ಪವಿತ್ರ ಸ್ನಾನದ ಬಳಿಕ ರಾಷ್ಟ್ರಪತಿ ಮರ್ಮು ಅಕ್ಷಯವಟ ಮತ್ತು ಹನುಮಾನ್ ಮಂದಿರದ ದರ್ಶನ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತು. "ಅವರು ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ" ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮಹಾ ಕುಂಭ ಮೇಳದ ವೇಳೆ ಪವಿತ್ರ ಸ್ನಾನ ಮಾಡಿದ್ದರು. ಕೇವಲ ಕಳೆದ ವಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು.
ಜನವರಿ 13ರಿಂದ ಆರಂಭವಾಗಿರುವ ಮಹಾಕುಂಭಮೇಳ ಫೆಬ್ರವರಿ 26ರವರೆಗೆ ನಡೆಯಲಿದೆ.
50 ಕೋಟಿ ಮಂದಿ ಪುಣ್ಯಸ್ನಾನ
ಮಹಾಕುಂಭಮೇಳದಲ್ಲಿ ಇದುವರೆಗೆ 42 ಕೋಟಿಗೂ ಹೆಚ್ಚು ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ಜ.13ರಿಂದ ಆರಂಭವಾದ ಕುಂಭಮೇಳದಲ್ಲಿ ಫೆ.8ರವರೆಗಿನ ಮಾಹಿತಿ ಪ್ರಕಾರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದವರ ಸಂಖ್ಯೆ 42 ಕೋಟಿ ಮೀರಿದೆ. ಫೆ.26ರಂದು ಮಹಾಕುಂಭ ಮೇಳ ಮುಕ್ತಾಯವಾಗಲಿದ್ದು, ಇನ್ನೂ 2 ಪುಣ್ಯ ಸ್ನಾನಗಳು ಬಾಕಿಯಿವೆ. ಆ ವೇಳೆಗೆ ಈ ಸಂಖ್ಯೆ 50 ಕೋಟಿ ದಾಟುವ ನಿರೀಕ್ಷೆ ಇದೆ.