![Maha Kumbh 2025: ಕುಂಭ ಮೇಳ ನಡೆಯುವ ಪ್ರಯಾಗ್‌ರಾಜ್‌ಗೆ ವಾಹನಗಳ ಪ್ರವೇಶ ನಿಷೇಧ! Maha Kumbh 2025: ಕುಂಭ ಮೇಳ ನಡೆಯುವ ಪ್ರಯಾಗ್‌ರಾಜ್‌ಗೆ ವಾಹನಗಳ ಪ್ರವೇಶ ನಿಷೇಧ!](https://karnataka.thefederal.com/h-upload/2025/02/11/512022-mahakumbh1.webp)
Maha Kumbh 2025: ಕುಂಭ ಮೇಳ ನಡೆಯುವ ಪ್ರಯಾಗ್‌ರಾಜ್‌ಗೆ ವಾಹನಗಳ ಪ್ರವೇಶ ನಿಷೇಧ!
Maha Kumbh 2025: ಜೊತೆಗೆ ಪುಣ್ಯಸ್ನಾನದ ದಿನವಾಗಿರುವ ಹಿನ್ನೆಲೆಯಲ್ಲಿ ಮಹಾಕುಂಭಮೇಳಕ್ಕೆ ಭಾರೀ ಸಂಖ್ಯೆಯ ಜನರು ದೇಶದ ಮೂಲೆ ಮೂಲೆಗಳಿಂದಲೂ ಬರುತ್ತಿದ್ದು 300 ಕಿ.ಮೀಗೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗಿದೆ.
ಪ್ರಯಾಗ್‌ರಾಜ್: ಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂತೆಯೇ ಫೆಬ್ರವರಿ 12ರ ಬುಧವಾರ ಮಾಘ ಪೂರ್ಣಿಮೆಯ ಪುಣ್ಯಸ್ನಾನ ನೆರವೇರಲಿದ್ದು, ಏಕಾಏಕಿ ಕೋಟ್ಯಂತರ ಭಕ್ತರು ಹರಿದು ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳು ನಡೆಯದಂತೆ ಪೂರ್ವತಯಾರಿ ಮಾಡಿಕೊಂಡಿರುವ ಉತ್ತರಪ್ರದೇಶ ಸರ್ಕಾರ, ಮಹಾಕುಂಭ ಪ್ರದೇಶಕ್ಕೆ ಮಂಗಳವಾರ ಮುಂಜಾನೆ 4 ಗಂಟೆಯಿಂದಲೇ ವಾಹನಗಳ ಪ್ರವೇಶ ನಿಷೇಧಿಸಿದೆ. ಸಂಜೆ 5ರಿಂದ ಈ ನಿರ್ಬಂಧವು ಪ್ರಯಾಗ್‌ರಾಜ್‌ಗೆ ಅನ್ವಯವಾಗಲಿದೆ.
ಮಹಾಕುಂಭಮೇಳದ ಸಮಯದಲ್ಲಿ ‘ಕಲ್ಪವಾಸ್’ ವ್ರತ ಕೈಗೊಂಡರೆ ಸಾವಿರಾರು ವರ್ಷಗಳ ತಪಸ್ಸಿನ ಫಲ ಲಭಿಸುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಮಾಘ ಪೂರ್ಣಿಮೆ(ಫೆ.12)ಯ ದಿನದಂದು ಕಲ್ಪವಾಸ್ ಕೊನೆಯಾಗುತ್ತದೆ. ಎಲ್ಲ ವ್ರತಧಾರಿಗಳು ಬುಧವಾರ ಪೂರ್ಣಿಮ ತಿಥಿಯಂದು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ವ್ರತ ಪೂರೈಸುತ್ತಾರೆ. ಜೊತೆಗೆ ಪುಣ್ಯಸ್ನಾನದ ದಿನವಾಗಿರುವ ಹಿನ್ನೆಲೆಯಲ್ಲಿ ಮಹಾಕುಂಭಮೇಳಕ್ಕೆ ಭಾರೀ ಸಂಖ್ಯೆಯ ಜನರು ದೇಶದ ಮೂಲೆ ಮೂಲೆಗಳಿಂದಲೂ ಬರುತ್ತಿದ್ದಾರೆ. ಹೀಗಾಗಿ ಸೋಮವಾರದಿಂದಲೇ ಪರಿಣಾಮ 300 ಕಿ.ಮೀ.ಗೂ ಅಧಿಕ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಸುಳಿವಿನ ಕಾರಣ ಉತ್ತರಪ್ರದೇಶ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ವಾಹನ ನಿಷೇಧ ಹೇರಲಾಗಿದೆ. .
ಪ್ರಯಾಗ್‌ರಾಜ್‌ನ ಹೊರಗಿನಿಂದ ಬರುವ ಎಲ್ಲ ಯಾತ್ರಿಗಳ ಖಾಸಗಿ ಮತ್ತು ಸಾರ್ವಜನಿಕ ವಾಹನಗಳನ್ನು ಬೆಳಗ್ಗೆ 4ರಿಂದ ನಿರ್ದಿಷ್ಟ ಪಾರ್ಕಿಂಗ್ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಯಾವುದೇ ದಟ್ಟಣೆ ಉಂಟಾಗದಂತೆ, ಸ್ನಾನ ಘಟ್ಟಗಳಿಗೆ ಜನರು ಸರಾಗವಾಗಿ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಗ್‌ರಾಜ್ ನಗರವನ್ನು ಸಂಜೆ 5ರಿಂದ ವಾಹನಮುಕ್ತ ವಲಯ ಎಂದು ಘೋಷಿಸಲಾಗಿದ್ದು ತುರ್ತು ಸೇವೆಗಳಿಗೆ ವಿನಾಯ್ತಿ ಇದೆ.
ಮಾಘ ಪೂರ್ಣಿಮೆ ಸ್ನಾನ ಮುಗಿಯುವವರೆಗೂ ವಿಶೇಷ ಟ್ರಾಫಿಕ್ ಯೋಜನೆ ಚಾಲ್ತಿಯಲ್ಲಿರಲಿದೆ. ಕಲ್ಪವಾಸ್ ವ್ರತ ಕೈಗೊಂಡವರು, ತಾತ್ಕಾಲಿಕ ಟೆಂಟ್‌ನಲ್ಲಿ ವಾಸಿಸುವವರಿಗೂ ನಿಯಮ ಅನ್ವಯವಾಗುತ್ತದೆ.
ಹೆಚ್ಚಿನ ಅಧಿಕಾರಿಗಳ ನೇಮಕ
ಮಹಾಕುಂಭಮೇಳ ಪ್ರದೇಶದಲ್ಲಿ ಹೆಚ್ಚಿನ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ. 3 ಐಎಎಸ್ ಅಧಿಕಾರಿಗಳು 25 ಪಿಸಿಎಸ್ ಅಧಿಕಾರಿಗಳು ಎಲ್ಲ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ. ಭಕ್ತಾದಿಗಳ ಅನುಕೂಲಕ್ಕಾಗಿ 28 ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.