
`ಅತ್ಯಾಚಾರಕ್ಕೆ ಸುಂದರ ಹುಡುಗಿಯರೇ ಕಾರಣ’- ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯಾ ಅತ್ಯಾಚಾರದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಸಂಚಲನ ಮೂಡಿಸಿದೆ.
ಮಧ್ಯಪ್ರದೇಶದ ಭಾಂಡರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯಾ ಅವರು ಅತ್ಯಾಚಾರದಂತಹ ಘೋರ ಕೃತ್ಯದ ಕುರಿತು ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಭಾರಿ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅತ್ಯಾಚಾರಕ್ಕೆ ವಿಲಕ್ಷಣವಾದ ಕಾರಣಗಳನ್ನು ನೀಡಿದ ಅವರು, ಒಬ್ಬ ಪುರುಷನು ರಸ್ತೆಯಲ್ಲಿ ಹೋಗುವಾಗ ಸುಂದರವಾದ ಹುಡುಗಿಯನ್ನು ನೋಡಿದರೆ ಅವನ ಮನಸ್ಸು ಚಂಚಲಗೊಂಡು ದಾರಿ ತಪ್ಪುತ್ತದೆ ಮತ್ತು ಇದು ಅತ್ಯಾಚಾರಕ್ಕೆ ಪ್ರೇರೇಪಿಸುತ್ತದೆ ಎಂದಿದ್ದಾರೆ.
ಏನಿದು ವಿವಾದ?
ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡುತ್ತಾ, ಅತ್ಯಾಚಾರ ಪ್ರಕರಣಗಳಿಗೆ ಮಹಿಳೆಯರ ಸೌಂದರ್ಯವೇ ಕಾರಣ ಎಂದಿದ್ದಾರೆ. ಇದಷ್ಟೇ ಅಲ್ಲದೆ, ಭಾರತದಲ್ಲಿ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಮಹಿಳೆಯರೇ ಅತಿ ಹೆಚ್ಚು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ ಶಾಸಕರು, ಇದಕ್ಕೆ ಪುರಾತನ ಧರ್ಮಗ್ರಂಥಗಳ ತಪ್ಪು ವ್ಯಾಖ್ಯಾನವೇ ಕಾರಣ ಎಂದು ವಾದಿಸಿದ್ದಾರೆ.
ಫೂಲ್ ಸಿಂಗ್ ಬರೈಯಾ ವಿಡಿಯೊ ಇಲ್ಲಿದೆ
ರುದ್ರಯಾಮಲ ತಂತ್ರ ಎಂಬ ಪುರಾತನ ಗ್ರಂಥವನ್ನು ಉಲ್ಲೇಖಿಸಿದ ಅವರು, ಅಂತಹ ಸಮುದಾಯದ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದುವುದರಿಂದ ಪುಣ್ಯಕ್ಷೇತ್ರಗಳ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ವಿಕೃತ ನಂಬಿಕೆ ಕೆಲವು ಪುರುಷರಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. ಈ ರೀತಿಯ ಪುಣ್ಯದ ಆಸೆಗೆ ಬಿದ್ದೇ ಜನರು ಎಳೆಹಸುಳೆಗಳ ಮೇಲೆಯೂ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆಘಾತಕಾರಿ ಹೇಳಿಕೆಯನ್ನು ಅವರು ನೀಡಿದ್ದಾರೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್
ಶಾಸಕರ ಈ ವಿವಾದಾತ್ಮಕ ಹೇಳಿಕೆಯು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೂಡಲೇ ಎಚ್ಚೆತ್ತುಕೊಂಡ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು, ಅತ್ಯಾಚಾರವನ್ನು ಯಾವುದೇ ರೂಪದಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಇದು ಶಾಸಕರ ವೈಯಕ್ತಿಕ ಹೇಳಿಕೆಯಾಗಿದೆಯೇ ಹೊರತು ಪಕ್ಷದ ನಿಲುವಲ್ಲ ಎಂದು ಸ್ಪಷ್ಟಪಡಿಸಿ ಅಂತರ ಕಾಯ್ದುಕೊಂಡಿದ್ದಾರೆ.
ಬರೈಯಾ ಹೇಳಿಕೆಗೆ ಬಿಜೆಪಿ ಭಾರೀ ವಿರೋಧ
ಮತ್ತೊಂದೆಡೆ ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ಮಹಿಳಾ ವಿರೋಧಿ ಮತ್ತು ದಲಿತ ವಿರೋಧಿ ಮನಸ್ಥಿತಿಯ ಪರಮಾವಧಿ ಎಂದು ಕಿಡಿಕಾರಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂತಹ ವಿಕೃತ ಚಿಂತನೆ ಹೊಂದಿರುವ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಬೇಕು ಅಥವಾ ಕಾಂಗ್ರೆಸ್ ಇಂತಹ ಚಿಂತನೆಗಳನ್ನು ಬೆಂಬಲಿಸುತ್ತದೆ ಎಂದು ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಸವಾಲು ಹಾಕಿದೆ. ಒಟ್ಟಾರೆಯಾಗಿ, ಅತ್ಯಾಚಾರದಂತಹ ಗಂಭೀರ ವಿಷಯಕ್ಕೆ ಜಾತಿ ಮತ್ತು ಪುರಾತನ ನಂಬಿಕೆಗಳ ಬಣ್ಣ ಬಳಿಯಲು ಪ್ರಯತ್ನಿಸಿದ ಶಾಸಕ ಬರೈಯಾ ಅವರ ಮಾತುಗಳು ಈಗ ದೊಡ್ಡ ಮಟ್ಟದ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿವೆ.

