
ಬಿಜೆಪಿಯಿಂದ ಮಹಿಳೆಯರ ಕಡೆಗಣನೆ: ಟಿಎಂಸಿ
ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಕಟಿಸಿದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಮಹಿಳೆಯರಿಗೆ ಅಧಿಕಾರ ನೀಡುವ ಪ್ರಧಾನಿ ಅವರ ಭರವಸೆಗಳನ್ನು ಕೇಸರಿ ಪಾಳಯ ಎಂದಿಗೂ ಜಾರಿಗೆ ತಂದಿಲ್ಲ ಎಂದು ದೂರಿದೆ.
ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ, ಪಟ್ಟಿಯಲ್ಲಿ ತಪ್ಪು ಹುಡುಕಲು ಪ್ರಯತ್ನಿಸುತ್ತಿದೆ ಎಂದಿದೆ. ʻಟಿಎಂಸಿಯ ರಾಜ್ಯಸಭೆ ನಾಮನಿರ್ದೇಶನಗಳಲ್ಲಿ ಶೇ.75 ರಷ್ಟು ಮಹಿಳೆಯರಿದ್ದರು. ಆದರೆ, ಬಿಜೆಪಿ ಘೋಷಿಸಿದ ಅಭ್ಯರ್ಥಿಗಳಲ್ಲಿ ಶೇ.14 ಕ್ಕಿಂತ ಹೆಚ್ಚು ಮಹಿಳೆಯರಿಲ್ಲ. ಇದು ನರೇಂದ್ರ ಮೋದಿ ಮತ್ತು ಜೆ.ಪಿ. ನಡ್ಡಾ ಅವರ ಪಕ್ಷ ಮಹಿಳೆಯರನ್ನು ಹೇಗೆ ಕೀಳಾಗಿ ನೋಡುತ್ತದೆ ಎಂಬುದನ್ನು ತೋರಿಸುತ್ತದೆʼ ಎಂದು ಟಿಎಂಸಿ ನಾಯಕ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಶಂತನು ಸೇನ್ ಹೇಳಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳದಲ್ಲಿರುವ 42 ಲೋಕಸಭೆ ಸ್ಥಾನಗಳಲ್ಲಿ 20ಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಸಮತೋಲಿತ ಪಟ್ಟಿ: ಬಿಜೆಪಿ
ಬಿಜೆಪಿ ವಕ್ತಾರ ಮತ್ತು ರಾಜ್ಯಸಭೆ ಸಂಸದ ಸಾಮಿಕ್ ಭಟ್ಟಾಚಾರ್ಯ ಮಾತನಾಡಿ, ʻಪಟ್ಟಿ ಅತ್ಯಂತ ಸಮತೋಲಿತವಾಗಿದೆ. ಪಶ್ಚಿಮ ಬಂಗಾ ಳದ ಜನರಲ್ಲಿ ಪಕ್ಷದ ನಾಯಕರ ಜನಪ್ರಿಯತೆ ಮತ್ತು ಸ್ವೀಕಾರಾರ್ಹತೆ ಬಗ್ಗೆ ತಿಳಿವಳಿಕೆ ಇದೆ ಎಂಬುದನ್ನು ತೋರಿಸುತ್ತದೆ. ಮತದಾರರು ಉತ್ತಮ ಆಡಳಿತ, ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ಟಿಎಂಸಿಯ ದೌರ್ಜನ್ಯ, ಸರ್ವಾಧಿಕಾರ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ನೀತಿ ವಿರುದ್ಧ ತೀರ್ಪು ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆʼ ಎಂದು ಹೇಳಿದರು.
ಬಾಳೂರ್‌ಘಾಟ್ ಕ್ಷೇತ್ರದಿಂದ ಮರು ನಾಮನಿರ್ದೇಶನಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ಸುಕಾಂತ ಮಜುಂದಾರ್, ʼನಮ್ಮ ರಾಷ್ಟ್ರದ ಸುಧಾರಣೆಗೆ ಕೆಲಸ ಮಾಡುತ್ತೇನೆʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.