Loksabha Election 2024 | ಅಂತಿಮ ಸುತ್ತಿನಲ್ಲಿ 904 ಅಭ್ಯರ್ಥಿಗಳ ಹಣೆಬರಹ ನಿರ್ಧಾರ
8 ರಾಜ್ಯಗಳ 57 ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮ ಹಂತದ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ನಟಿ ಕಂಗನಾ ರನೌತ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕಣದಲ್ಲಿದ್ದಾರೆ.
ಜೂನ್ 1ರಂದು ಶನಿವಾರ ಲೋಕಸಭೆಯ ಏಳನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ದೇಶದ ಎಂಟು ರಾಜ್ಯಗಳ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಕಣದಲ್ಲಿ 904 ಅಭ್ಯರ್ಥಿಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ನಟ ಮತ್ತು ರಾಜಕಾರಣಿ ರವಿ ಕಿಶನ್ (ಗೋರಖ್‌ಪುರ, ಬಿಜೆಪಿ), ರವಿಶಂಕರ್ ಪ್ರಸಾದ್ (ಪಟ್ನಾ ಸಾಹಿಬ್, ಬಿಜೆಪಿ), ಬೈಜಯಂತ್ ಪಾಂಡಾ (ಕೇಂದ್ರಪಾರ, ಬಿಜೆಪಿ), ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ (ಪಾಟಲಿಪುತ್ರ, ಆರ್‌ಜೆಡಿ), ನಟಿ ಕಂಗನಾ ರನೌತ್ (ಮಂಡಿ, ಬಿಜೆಪಿ), ಕೇಂದ್ರ ಸಚಿವ ಅನುರಾಗ್ ಠಾಕೂರ್ (ಹಮೀರ್‌ಪುರ, ಬಿಜೆಪಿ), ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (ಜಲಂಧರ್, ಕಾಂಗ್ರೆಸ್), ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ (ಭಟಿಂಡಾ, ಎಸ್‌ಎಡಿ), ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (ಡೈಮಂಡ್ ಹಾರ್ಬರ್, ಟಿಎಂಸಿ) ಕಣದಲ್ಲಿರುವ ಪ್ರಮುಖರು.
ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಹಿಮಾಚಲ ಪ್ರದೇಶ ವಿಧಾನಸಭೆಯ ಆರು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆ, ಸುಖ್ವಿಂದರ್ ಸಿಂಗ್ ಸುಖು ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತದೆ: ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ ನಾಲ್ಕು ಸ್ಥಾನ ಗೆಲ್ಲಬೇಕಿದೆ.
ಉತ್ತರ ಪ್ರದೇಶ
80ರಲ್ಲಿ 13(ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ, ಬನ್ಸ್‌ಗಾಂವ್, ಘೋಸಿ, ಸೇಲಂಪುರ್, ಬಲ್ಲಿಯಾ, ಘಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ್, ರಾಬರ್ಟ್ಸ್‌ಗಂಜ್) ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರತಿಷ್ಠೆ ಪ್ರಶ್ನೆಯಾಗಿದೆ. ವಾರಣಾಸಿಯಲ್ಲಿ ಮೋದಿ ಅವರು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಅವರನ್ನು ಎದುರಿಸಲಿದ್ದಾರೆ. ಕಾಂಗ್ರೆಸ್‌ನ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಐದು ಅವಧಿಗೆ ಪ್ರತಿನಿಧಿಸಿದ್ದ ಗೋರಖ್ ಪುರ ಕ್ಷೇತ್ರದಲ್ಲಿ ನಟ ರವಿ ಕಿಶನ್, ಎಸ್‌ಪಿಯ ಕಾಜಲ್ ನಿಶಾದ್ ವಿ ರುದ್ಧ ಸ್ಪರ್ಧಿಸುತ್ತಿದ್ದಾರೆ. ಪೂರ್ವಾಂಚಲ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಸಾಮಾಜಿಕ-ಆರ್ಥಿಕ ನ್ಯಾಯದ ಘೋಷಣೆ ಮತದಾರರೊಂದಿಗೆ ಹೆಚ್ಚು ಅನುರಣಿಸುತ್ತದೆ ಎಂದು ಎಸ್ಪಿ-ಕಾಂಗ್ರೆಸ್ ಮೈತ್ರಿ ಭಾವಿಸಿದೆ. ಇಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳಾದ ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ, ಸಂಜಯ್ ನಿಶಾದ್ ಅವರ ನಿಶಾದ್ ಪಕ್ಷ ಮತ್ತು ಒ.ಪಿ. ರಾಜ್‌ಭರ್ ಅವರ ಎಸ್‌ಬಿಎಸ್‌ಪಿ ಅವರನ್ನು ಅವಲಂಬಿಸಿದೆ.
ಕೇಂದ್ರ ಸಚಿವ, ಕುರ್ಮಿ ನಾಯಕರಾದ ಪಟೇಲ್, ಮಿರ್ಜಾಪುರ ಕ್ಷೇತ್ರದಲ್ಲಿ ಎಸ್‌ಪಿಯ ರಮೇಶ್ ಬಿಂದ್ ಅವರಿಂದ ಕಠಿಣ ಸವಾಲು ಎದುರಿಸು ತ್ತಿದ್ದಾರೆ. ರಾಜ್‌ಭರ್ ಅವರ ಪುತ್ರ ಅರವಿಂದ್ ರಾಜ್‌ಭರ್, ಎಸ್‌ಪಿಯ ರಾಜೀವ್ ರೈ ವಿರುದ್ಧ ಸ್ಪರ್ಧಿಸಿದ್ದಾರೆ. ಒಬಿಸಿ ಮತ್ತು ದಲಿತರ ಪ್ರಭಾವದ ಹಿನ್ನೆಲೆಯಲ್ಲಿ ಇಲ್ಲಿ ಹೊಸ ಸಾಮಾಜಿಕ ಹೊಂದಾಣಿಕೆಗಳ ಸಾಧ್ಯತೆಯಿದೆ. ಸಾಮಾಜಿಕ-ಆರ್ಥಿಕ ನ್ಯಾಯ, ಬೆಲೆ ಏರಿಕೆ, ನಿರು ದ್ಯೋಗ ಮತ್ತು ಅಗ್ನಿವೀರ್ ಯೋಜನೆಯನ್ನು ಇಂಡಿಯ ಒಕ್ಕೂಟ ಪ್ರಶ್ನಿಸಿದೆ.
ಘಾಜಿಪುರದಲ್ಲಿ ಹಾಲಿ ಸಂಸದ, ಎಸ್‌ಪಿಯ ಅಫ್ಜಲ್ ಅನ್ಸಾರಿ ಮತ್ತು ಬಿಜೆಪಿಯ ಪರಸ್ ನಾಥ್ ರಾಯ್ ನಡುವೆ ಸ್ಪರ್ಧೆ ಇದೆ. ಅಫ್ಜಲ್ ಸಹೋದರ, ದರೋಡೆಕೋರ ಮುಖ್ತಾರ್ ಅನ್ಸಾರಿ ಈ ವರ್ಷದ ಆರಂಭದಲ್ಲಿ ಜೈಲಿನಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದರು. ಘಾಜಿಪುರ ಅನ್ಸಾರಿಗಳ ಭದ್ರಕೋಟೆ. ಮುಖ್ತಾರ್ ನಿರ್ಮೂಲನೆಗೆ ಆತನಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ಪಂಜಾಬ್: ಗುರುದಾಸ್‌ಪುರ್, ಅಮೃತಸರ, ಖಾದೂರ್ ಸಾಹಿಬ್, ಜಲಂಧರ್, ಹೋಶಿಯಾರ್‌ಪುರ್, ಆನಂದಪುರ ಸಾಹಿಬ್, ಲೂಧಿಯಾನ, ಫತೇಘರ್ ಸಾಹಿಬ್, ಫರೀದ್‌ಕೋಟ್, ಫಿರೋಜ್‌ಪುರ, ಬಟಿಂಡಾ, ಸಂಗ್ರೂರ್, ಪಟಿಯಾಲ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. 2014 ಮತ್ತು 2019 ರಲ್ಲಿ ಮೋದಿ ಅಲೆ ಹೊರತಾಗಿಯೂ, ಬಿಜೆಪಿಯನ್ನು ಹಿಮ್ಮೆಟ್ಟಿಸಿದ ವಿಂಧ್ಯದ ಉತ್ತರದ ಏಕೈಕ ರಾಜ್ಯ. ಅದರ 13 ಲೋಕಸಭೆ ಕ್ಷೇತ್ರಗಳಲ್ಲಿ ಚತುಷ್ಕೋನ ಸ್ಪರ್ಧೆ ನಡೆಯುತ್ತಿದೆ. ಇಂಡಿಯ ಒಕ್ಕೂಟದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್, ದೆಹಲಿ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಆದರೆ ಪಂಜಾಬ್‌ನಲ್ಲಿ ಏಕಾಂಗಿಯಾಗಿ ಹೋರಾಡುತ್ತಿವೆ. ಶಿರೋಮಣಿ ಅಕಾಲಿದಳ (ಎಸ್‌ಎಡಿ), 2022 ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಎನ್‌ಡಿಎಯಿಂದ ಹೊರನಡೆಯಿತು.
2019 ರಲ್ಲಿ 13ರಲ್ಲಿ ಒಂಬತ್ತು ಸ್ಥಾನ ಗೆದ್ದಿದ್ದ ಕಾಂಗ್ರೆಸ್, 2022ರಲ್ಲಿ ಆಪ್ 117 ಸದಸ್ಯರ ಪಂಜಾಬ್ ಅಸೆಂಬ್ಲಿಯಲ್ಲಿ 92 ಸ್ಥಾನ ಗಳಿಸಿದ ಬಳಿಕ ಬಲ ಕಳೆದುಕೊಂಡಿದೆ. ಆನಂತರ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸುನೀಲ್ ಜಾಖರ್ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ನಾಯಕರು ಬಿಜೆಪಿ ಸೇರಿದರು. ಕಳಪೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ವಿವಾದಗಳಿಂದಾಗಿ ಎಎಪಿ ಕೂಡ ಹೊಳಪು ಕಳೆದುಕೊಂಡಿದೆ.
ಆದರೆ, ರಾಜ್ಯದಲ್ಲಿ ಬಿಜೆಪಿಯನ್ನು ರೈತ ವಿರೋಧಿ ಪಕ್ಷವಾಗಿ ನೋಡಲಾಗುತ್ತಿದೆ. 2017 ರಿಂದೀಚೆಗೆ ಸರಣಿ ಸೋಲಿನಿಂದ ಎಸ್‌ಎಡಿ ಹೆಣಗಾಡುತ್ತಿದೆ. ಕಾಂಗ್ರೆಸ್ ಮತ್ತು ಎಎಪಿ ನಡುವೆ ಸ್ಪರ್ಧೆಯಿದೆ. ಬಿಜೆಪಿ ಸಾಂಪ್ರದಾಯಿಕ ಮತಬ್ಯಾಂಕ್ ನ್ನು ನೆಚ್ಚಿಕೊಂಡಿದೆ. ಪಕ್ಷ ಅರ್ಧ ಡಜನ್‌ಗಿಂತಲೂ ಹೆಚ್ಚು ಪಕ್ಷಾಂತರಿಗಳನ್ನು ಸ್ಪರ್ಧೆಗೆ ನಿಲ್ಲಿಸಿದೆ. ಪಟಿಯಾಲಾದಿಂದ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್, ಲೂಧಿಯಾನದಿಂದ ರವನೀತ್ ಬಿಟ್ಟು ಮತ್ತು ಜಲಂಧರ್ ನಿಂದ ಸುಶೀಲ್ ಕುಮಾರ್ ರಿಂಕು ಅವರನ್ನು ಸ್ಪರ್ಧೆಗಿಳಿಸಿದೆ.
ಹಿಮಾಚಲ ಪ್ರದೇಶ: ಕಾಂಗ್ರಾ, ಮಂಡಿ, ಹಮೀರ್‌ಪುರ, ಶಿಮ್ಲಾದಲ್ಲಿ ಲೋಕಸಭೆ ಹಾಗೂ ಗ್ಯಾಗ್ರೇಟ್, ಧರ್ಮಶಾಲಾ, ಬರ್ಸರ್, ಲಾಹೌಲ್ ಮತ್ತು ಸ್ಪಿತಿ, ಕುಟ್ಲೆಹಾರ್ ಮತ್ತು ಸುಜಾನ್‌ಪುರ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧಿಕಾರದಲ್ಲಿರುವ ಉತ್ತರ ಭಾರತದ ಏಕೈಕ ರಾಜ್ಯ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಅಧಿಕಾರ ಉಳಿಸಿಕೊಳ್ಳುವರೇ ಎಂಬುದನ್ನು ಆರು ವಿಧಾನಸಭೆ ಉಪಚುನಾವಣೆಗಳು ನಿರ್ಧರಿಸಲಿವೆ.
ಕಳೆದ ಫೆಬ್ರವರಿಯಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರು ಆರು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಸೋತಿದ್ದರು.ಈ 6 ಮಂದಿಯನ್ನು ಅನರ್ಹಗೊಳಿಸಲಾಯಿತು. ಇವರೆಲ್ಲರೂ ಬಿಜೆಪಿ ಸೇರಿದ್ದು, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಕನಿಷ್ಠ 4 ಸ್ಥಾನ ಗೆಲ್ಲಬೇಕಿದೆ.
ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಅಗ್ನಿವೀರ್ ಯೋಜನೆ (ಹಿಮಾಚಲವು ಸಾಂಪ್ರದಾಯಿಕವಾಗಿ ಸಶಸ್ತ್ರ ಪಡೆಗಳಿಗೆ ಪ್ರಮುಖ ನೇಮಕ ಕೇಂದ್ರ) ಮತ್ತು ಬಿಜೆಪಿ ಬಗ್ಗೆ ಅಸಮಾಧಾನವು ಕಾಂಗ್ರೆಸ್ಸಿಗೆ ಗೆಲುವಿನ ನಿರೀಕ್ಷೆ ಮೂಡಿಸಿದೆ. ಮಂಡಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ನಟಿ ಕಂಗನಾ ರನೌತ್ ಅವರು ಸಚಿವ ವಿಕ್ರಮಾದಿತ್ಯ ಸಿಂಗ್ ಅವರನ್ನು ಎದುರಿಸುತ್ತಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಮೀರ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಸತ್ಪಾಲ್ ರೈಜಾದಾ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರಾದಲ್ಲಿ, ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಅವರು ಬಿಜೆಪಿಯ ರಾಜೀವ್ ಭಾರದ್ವಾಜ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶಿಮ್ಲಾದಲ್ಲಿ ಕಾಂಗ್ರೆಸ್ ಶಾಸಕ ವಿನೋದ್ ಸುಲ್ತಾನಪುರಿ ಅವರು ಬಿಜೆಪಿ ಸಂಸದ ಸುರೇಶ್ ಕಶ್ಯಪ್ ವಿರುದ್ಧ ಸ್ಪರ್ಧಿಸಿದ್ದಾರೆ.
ಚಂಡೀಗಢ: 2014 ಮತ್ತು 2019 ರಲ್ಲಿ ಬಿಜೆಪಿಯಿಂದ ಗೆದ್ದಿರುವ ಕಿರಣ್ ಖೇರ್ ಬದಲು ಚಂಡೀಗಢದ ಮಾಜಿ ಮೇಯರ್ ಸಂಜಯ್ ಟಂಡ ನ್ ಅವರನ್ನು ಕಣಕ್ಕಿಳಿಸಿದೆ. ಆದರೆ, ಚಂಡೀಗಢದ ಮೇಯರ್ ಸ್ಥಾನವನ್ನು ಕದಿಯಲು ಯತ್ನಿಸಿದ ಬಿಜೆಪಿ ವಿರುದ್ಧ ಸಾರ್ವಜನಿಕರ ಅಸಮಾಧಾನವಿದೆ. ಮೇಯರ್ ಆಗಿ ಮನೋಜ್ ಕುಮಾರ್ ಅವರ ಆಯ್ಕೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಆ ಸ್ಥಾನಕ್ಕೆ ಎಎಪಿಯ ಕುಲದೀಪ್ ಕುಮಾರ್ ಅವರನ್ನು ನೇಮಿಸಿತ್ತು. ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರಿಗೆ ವಾಗ್ದಂಡನೆ ವಿಧಿಸಿತ್ತು. ಸಂಜಯ್ ಟಂಡನ್ ವಿರುದ್ಧ ಕಾಂಗ್ರೆಸ್-ಎಎಪಿ ಮನೀಶ್ ತಿವಾರಿ ಅವರನ್ನು ಕಣಕ್ಕಿಳಿಸಿದೆ.
ಬಿಹಾರ: ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರ್ರಾ, ಬಕ್ಸರ್, ಸಸಾರಂ, ಕರಕಟ್, ಜಹಾನಾಬಾದ್, ನಳಂದಾ ಚುನಾವಣೆ ನಡೆಯಲಿದೆ. ಕೇಂದ್ರ ಸಚಿವ ಆರ್.ಕೆ. ಸಿಂಗ್ ಅರ್ರಾದಿಂದ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಸಿಂಗ್ ವಿರುದ್ಧ ಸಿಪಿಐ(ಎಂಎಲ್) ಲಿಬರೇಶನ್ ಸದಸ್ಯ ಸುದಾಮ ಪ್ರಸಾದ್ ಕಣಕ್ಕಿಳಿದಿದ್ದಾರೆ. ರವಿಶಂಕರ್ ಪ್ರಸಾದ್ ಅವರ ವಿರುದ್ಧ ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರ ಪುತ್ರ ಅನ್ಶುಲ್ ಅವಿಜಿತ್ ಸ್ಪರ್ಧಿಸಿದ್ದಾರೆ. ಅವಿಜಿತ್ ಅವರು ಬಿಹಾರದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಾಬು ಜಗಜೀವನ್ ರಾಮ್ ಅವರ ಮೊಮ್ಮಗ.
ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ ಅವರು ಮಾಜಿ ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್ ವಿರುದ್ಧ ಪಾಟಲಿಪುತ್ರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಕಾರಕಟ್ಟಿ ಲೋಕಸಭೆ ಕ್ಷೇತ್ರದಲ್ಲಿ ಬಹುಕೋನ ಕದನವಿದೆ. ಎನ್‌ಡಿಎ ಅಭ್ಯರ್ಥಿ ಉಪೇಂದ್ರ ಕುಶ್ವಾಹ ಅವರು ಸ್ವತಂತ್ರ ಅಭ್ಯರ್ಥಿ, ಭೋಜ್‌ಪುರಿ ಗಾಯಕ ಪವನ್ ಸಿಂಗ್, ಇಂಡಿಯಾ ಒಕ್ಕೂಟದಿಂದ ಸಿಪಿಐ(ಎಂಎಲ್) ಲಿಬರೇಶನ್ ಮಾಜಿ ಶಾಸಕ ರಾಜಾ ರಾಮ್ ಕುಶ್ವಾಹ ಕಣಕ್ಕಿಳಿದಿದ್ದಾರೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂನಿಂದ ಜಿಲ್ಲಾ ಪರಿಷತ್ ಸದಸ್ಯೆ ಪ್ರಿಯಾಂಕಾ ಚೌಧರಿ ಕಣದಲ್ಲಿ ಇದ್ದಾರೆ.
ಜಾರ್ಖಂಡ್: ರಾಜಮಹಲ್, ದುಮ್ಕಾ, ಗೊಡ್ಡಾದಲ್ಲಿ ಚುನಾವಣೆ ನಡೆಯಲಿದೆ. ದುಮ್ಕಾದಿಂದ ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ ಅವರ ಸೊಸೆ ಸೀತಾ ಸೊರೆನ್(ಬಿಜೆಪಿ) ವಿರುದ್ಧ ಜೆಎಂಎಂನ ನಳಿನ್ ಸೊರೆನ್ ಸ್ಪರ್ಧಿಸುತ್ತಿದ್ದಾರೆ. ರಾಜಮಹಲ್ ಕ್ಷೇತ್ರದಲ್ಲಿ ಹಾಲಿ ಸಂಸದ ವಿಜಯ್ ಹಂಸ್ದಾ ವಿರುದ್ಧ ಜೆಎಂಎಂ ಶಾಸಕ ಲೋಬಿನ್ ಹೆಂಬ್ರೋಮ್ ಸ್ವತಂತ್ರ ಅಭ್ಯರ್ಥಿಯಾಗಿ ಹಾಗೂ ಬಿಜೆಪಿಯಿಂದ ತಲಾ ಮರಾಂಡಿ ಕಣದಲ್ಲಿ ಇದ್ದಾರೆ.
ಒಡಿಶಾ: ಮಯೂರ್‌ಭಂಜ್, ಬಾಲಸೋರ್, ಭದ್ರಕ್, ಜಾಜ್‌ಪುರ್, ಕೇಂದ್ರಪಾರ, ಜಗತ್‌ಸಿಂಗ್‌ಪುರ ಲೋಕಸಭೆ ಕ್ಷೇತ್ರ ಹಾಗೂ 42 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಕೇಂದ್ರಪಾರದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರು ಬಿಜೆಡಿ ಅಭ್ಯರ್ಥಿ ಅಂಶುಮನ್ ಮೊಹಂತಿ ವಿರುದ್ಧ ಸೆಣಸಲಿದ್ದಾರೆ. ಪಾಂಡಾ ಅವರನ್ನು ಬಿಜೆಡಿ ಟಿಕೆಟ್‌ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ ಸಿನಿ ತಾರೆ ಅನುಭವ್ ಮೊಹಂತಿ, ಪಕ್ಷವನ್ನು ತೊರೆದು, ಬಿಜೆಪಿ ಸೇರಿದರು.
ಬಾಲಸೋರ್ ಲೋಕಸಭಾ ಕ್ಷೇತ್ರದಲ್ಲಿಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಕಾಂಗ್ರೆಸ್‌ನ ಶ್ರೀಕಾಂತ್ ಜೆನಾ ಮತ್ತು ಬಿಜೆಡಿಯ ಲೇಖಾಶ್ರೀ ಸಮಂತಸಿಂಗರ್ ಕಣದಲ್ಲಿದ್ದಾರೆ. ಸಾರಂಗಿ ಅವರು ಕೇಂದ್ರ ಸರ್ಕಾರದ ರಾಜ್ಯ ಸಚಿವ. ಐ.ಕೆ. ಗುಜ್ರಾಲ್ ಹಾಗೂ 2009 ರಲ್ಲಿ ಮನಮೋಹನ್ ಸಿಂಗ್ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದರು. 1999 ರಲ್ಲಿ ಮಯೂರ್‌ಭಂಜ್ ಜಿಲ್ಲೆಯಲ್ಲಿ ಆಸ್ಟ್ರೇಲಿಯನ್ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ದಹಿಸಿದಾಗ ಸಾರಂಗಿ ಅವರು ಬಲಪಂಥೀಯ ಸಂಘಟನೆಯ ಮುಖ್ಯಸ್ಥರಾಗಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗ್ರಾಮ ಉಪರಬೇಡವನ್ನು ಒಳಗೊಂಡಿರುವ ಕ್ಷೇತ್ರ ಮಯೂರ್‌ಭಂಜ್. ರಾಯರಂಗಪುರದ ಶಾಸಕ ನಬಾ ಚರಣ್ ಮಾಝಿ ಅವರು ಬಿಜೆಪಿಯಿಂದ, ಶಾಸಕ ಸುದಮ್ ಮಾರಂಡಿ ಮತ್ತು ಇಂಡಿಯ ಒಕ್ಕೂಟದಿಂದ ಶಿಬು ಸೊರೆನ್ ಅವರ ಪುತ್ರಿ ಶಾಸಕಿ ಅಂಜನಿ ಕಣದಲ್ಲಿ ಇದ್ದಾರೆ.
ಪಶ್ಚಿಮ ಬಂಗಾಳ: ಡಮ್ ಡಮ್, ಬರಾಸತ್, ಬಸಿರ್‌ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್‌ಪುರ, ಕೋಲ್ಕತ್ತಾ ದಕ್ಷಿಣ, ಕೋಲ್ಕತ್ತಾ ಉತ್ತರ ಚುನಾವಣೆ ನಡೆಯಲಿದೆ. ಈ ಹಂತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಬಹಳ ಮಹತ್ವದ್ದು. 2019 ರಲ್ಲಿ ಟಿಎಂಸಿ ಬಲ 22 ಕ್ಕೆ ಹೆಚ್ಚಲು ಸಹಾಯ ಮಾಡಿತು. 42 ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನ ಗೆದ್ದುಕೊಂಡಿದೆ. ಒಂಬತ್ತು ಸ್ಥಾನಗಳ ಪೈಕಿ ಕನಿಷ್ಠ ಐದು ಸ್ಥಾನಗಳಲ್ಲಿ ಟಿಎಂಸಿ ತ್ರಿಕೋನ ಸ್ಪರ್ಧೆ ಎದುರಿಸುತ್ತಿದೆ. ಅವೆಂದರೆ, ಕೋಲ್ಕತ್ತಾ ಉತ್ತರ, ಕೋಲ್ಕತ್ತಾ ದಕ್ಷಿಣ, ಡಂಡಂ, ಜಾದವ್‌ಪುರ ಮತ್ತು ಬಸಿರ್‌ಹತ್.
ಡಂಡಂನಿಂದ ಟಿಎಂಸಿಯ ಸೌಗತ ರಾಯ್, ಬಿಜೆಪಿಯಿಂದ ಸಿಲ್ಭದ್ರ ದತ್ತಾ ಮತ್ತು ಸುಜನ್ ಚಕ್ರವರ್ತಿ ಸಿಪಿಐ(ಎಂ) ಅಭ್ಯರ್ಥಿಯಾಗಿದ್ದಾರೆ. ಬಸಿರ್ಹತ್ ಕ್ಷೇತ್ರದಲ್ಲಿ ಬಿಜೆಪಿಯ ರೇಖಾ ಪಾತ್ರ, ಸಿಪಿಐ(ಎಂ) ನ ನಿರಪಾದ ಸರ್ಕಾರ್ ಹಾಗೂ ಟಿಎಂಸಿಯಿಂದ ಹಾಜಿ ನೂರುಲ್ ಇಸ್ಲಾಂ ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇತರ ಟಿಎಂಸಿ ಪ್ರಮುಖರೆಂದರೆ, ಉತ್ತರ ಕೋಲ್ಕತ್ತಾದಿಂದ ಸುದೀಪ್ ಬಂಡೋಪಾಧ್ಯಾಯ, ದಕ್ಷಿಣ ಕೋಲ್ಕತ್ತಾದಿಂದ ಮಾಲಾ ರಾಯ್ ಮತ್ತು ಬರಾಸತ್‌ನಿಂದ ಕಾಕೋಲಿ ಘೋಷ್ ದಸ್ತಿದಾರ್.