ಚುನಾವಣೆ 2024:  ಮಹಾರಾಷ್ಟ್ರದಲ್ಲಿ ಇಂಡಿಯ ಒಕ್ಕೂಟದ ತ್ರಿಶಂಕು ಸ್ಥಿತಿ
x

ಚುನಾವಣೆ 2024: ಮಹಾರಾಷ್ಟ್ರದಲ್ಲಿ ಇಂಡಿಯ ಒಕ್ಕೂಟದ ತ್ರಿಶಂಕು ಸ್ಥಿತಿ


ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೆ ವಾರಗಳು ಬಾಕಿಯಿರುವಾಗ, ಮಹಾರಾಷ್ಟ್ರದಲ್ಲಿ ಇಂಡಿಯ ಒಕ್ಕೂಟ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಎದುರಿಸುತ್ತಿದೆ.

ಮೈತ್ರಿ ಕೂಟದ ದೊಡ್ಡ ಘಟಕವಾದ ಕಾಂಗ್ರೆಸ್, ಬಿಹಾರದಲ್ಲಿ ಲಾಲೂ ಪ್ರಸಾದ್ ಮತ್ತು ತೇಜಸ್ವಿ ಯಾದವ್ ಅವರ ಆರ್‌ಜೆಡಿ, ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಆಗಡಿ (ವಿಬಿಎ) ಜೊತೆ ಸೀಟು ಹಂಚಿಕೆ ಮಾತುಕತೆಯನ್ನು ಅಂತಿಮಗೊಳಿಸಬೇಕಿದೆ. ಮಹಾರಾಷ್ಟ್ರದ 48 ಲೋಕಸಭೆ ಸ್ಥಾನಗಳಿಗೆ ಸೀಟು ಹಂಚಿಕೆ ಅಂತಿಮಗೊಳಿಸುವಲ್ಲಿನ ವಿಳಂಬದಿಂದ ಅಸಮಾಧಾನಗೊಂಡ ಪ್ರಕಾಶ್‌ ಅಂಬೇಡ್ಕರ್, ಎಂಟು ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಶರದ್ ಪವಾರ್ ಅವರ ಎನ್ಸಿಪಿ ಹಾಗೂ ಥ್ಯಾಕರೆ ಅವರಲ್ಲಿ ವಿಶ್ವಾಸ ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್‌, ರಾಜ್ಯದ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದ ಕೆಲವೇ ದಿನಗಳಲ್ಲಿ ಆಗಡಿ ಈ ನಿರ್ಧಾರಕ್ಕೆ ಬಂದಿದೆ.ಒಂದು ಸ್ಥಾನಕ್ಕೆ ಬೆಂಬಲ: ಪ್ರಕಾಶ್ ಅಂಬೇಡ್ಕರ್ ಫೆಡರಲ್‌‌ ಜೊತೆ ಮಾತನಾಡಿ,ʻಕಾಂಗ್ರೆಸ್ ಸ್ಪರ್ಧಿಸುತ್ತಿರುವ ಏಳು ಸ್ಥಾನಗಳಲ್ಲಿ ಒಂದರಲ್ಲಿ ಬೆಂಬಲದ ಪ್ರಸ್ತಾಪ ಇನ್ನೂಇದೆ. ಕೊಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಛತ್ರಪತಿ ಶಾಹು ಮಹಾರಾಜ ಮತ್ತು ನಾಗ್ಪುರದಿಂದ ವಿಕಾಸ್ ಠಾಕರೆ ಅವರಿಗೆ ವಿಬಿಎ ಬೆಂಬಲ ಘೋಷಿಸಿದೆʼ ಎಂದು ಹೇಳಿದರು. ಅಕೋಲಾದಿಂದ ಸ್ಪರ್ಧಿಸಲಿರುವ ಪ್ರಕಾಶ್ ಅಂಬೇಡ್ಕರ್, ‌ʻಅವರಿಗೆ ಸೀಟು ಹಂಚಿಕೆ ಸೂತ್ರದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ; ಉದ್ಧವ್ ಠಾಕ್ರೆ ಮತ್ತು ಪವಾರ್ ಮೈತ್ರಿ ಬಗ್ಗೆ ಗಂಭೀರವಾಗಿಲ್ಲ. ನಾವು ಅವರಿಗಾಗಿ ಅನಿರ್ದಿಷ್ಟವಾಗಿ ಕಾಯಲು ಸಾಧ್ಯವಾಗಲಿಲ್ಲʼ ಎಂದು ಹೇಳಿದರು.

ಅನಿಯಂತ್ರಿತ ವರ್ತನೆ: ಠಾಕ್ರೆ ಅವರ ಸೇನೆಯು ಸಾಂಗ್ಲಿ ಮತ್ತು ಮುಂಬೈನ ಹಲವಾರು ಕ್ಷೇತ್ರಗಳು ಸೇರಿದಂತೆ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದನ್ನು ವಿರೋಧಿಸಿ, ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಸದಸ್ಯರು ಪ್ರತಿಭಟನೆ ಮಾಡಿದರು. ಮುಂಬೈ ವಾಯವ್ಯ ಕ್ಷೇತ್ರದಿಂದ ಹಿರಿಯ ಸೇನಾ ನಾಯಕ ಗಜಾನನ ಕೀರ್ತಿಕರ್ ಅವರ ಪುತ್ರ ಅಮೋಲ್ ಕೀರ್ತಿಕರ್ ಅವರ ಉಮೇದುವಾರಿಕೆ ಯನ್ನು ಶಿವಸೇನೆ ಘೋಷಿಸಿದ್ದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮಾಜಿ ಸಂಸದ ಸಂಜಯ್ ನಿರುಪಮ್ , ಠಾಕ್ರೆ ಅವರೊಂದಿಗೆ ಮೈತ್ರಿಯನ್ನು ಮುರಿಯಿರಿ ಎಂದು ಹೈಕಮಾಂಡ್‌ಗೆ ಹೇಳಿದರು. ಇಂಡಿಯ ಒಕ್ಕೂಟದ ಪಾಲುದಾರರನ್ನು ಕೇಳದೆ, ಶಿವಸೇನೆಯು ಕೀರ್ತಿಕರ್ ಅವರ ಉಮೇದುವಾರಿಕೆಯನ್ನು ಘೋಷಿಸಿದೆ. ಶಿವಸೇನೆ ಮತ್ತು ಎನ್‌ಸಿಪಿಯೊಂದಿಗಿನ ಮಾತುಕತೆಯ ಭಾಗವಾಗಿದ್ದ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಅವರನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ನಿರುಪಮ್ ಆರೋಪಿಸಿದರು. ನಿರುಪಮ್ 2019 ರ ಲೋಕಸಭೆ ಚುನಾವಣೆಯಲ್ಲಿ ಅಮೋಲ್ ಅವರ ತಂದೆ ಗಜಾನನ್ ಕೀರ್ತಿಕರ್ ವಿರುದ್ಧ ಸೋತಿದ್ದರು (ಆಗ ಅವಿಭಜಿತ ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು).

ಠಾಕ್ರೆ ಬಣ ಕೀರ್ತಿಕರ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ʻಖಿಚಡಿ ಹಗರಣʼ ದಲ್ಲಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತು. ‘ಖಿಚಡಿ ಕಳ್ಳʼನನ್ನು ಕಣಕ್ಕಿಳಿಸಲು ಶಿವಸೇನೆಗೆ ಅವಕಾಶ ನೀಡುವ ಮೂಲಕ ಕಾಂಗ್ರೆಸ್ ʻಪ್ರಮಾದ ಮಾಡುತ್ತಿದೆʼ ಎಂದು ನಿರುಪಮ್ ಹೇಳಿದರು. ಶಿವಸೇನೆಯಲ್ಲಿ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ನಿರುಪಮ್‌, 2005 ರಲ್ಲಿ ಕಾಂಗ್ರೆಸ್ ಸೇರಿದರು.ನಿರುಪಮ್ ಅವರ ಅಸಮಾಧಾನ ರಾಜಕೀಯಪ್ರೇರಿತ ಎನ್ನಬಹುದಾದರೂ, ಠಾಕ್ರೆ ಅವರ ಕ್ರಮ ನಿರಂಕುಶ ಎಂದು ರಾಜ್ಯದ ಇತರ ಕಾಂಗ್ರೆ ಸ್ ಮತ್ತು ಎನ್‌ಸಿಪಿ ನಾಯಕರು ಫೆಡರಲ್‌ಗೆ ತಿಳಿಸಿದರು. ʻಭಿವಂಡಿ, ಮುಂಬೈ ನಾರ್ತ್ ವೆಸ್ಟ್, ಮುಂಬೈ ನಾರ್ತ್ ಸೆಂಟ್ರಲ್ ಮತ್ತು ಸಾಂಗ್ಲಿ ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಕುರಿತು ಮಾತುಕತೆ ಮುಗಿದಿಲ್ಲ. ಪಾಲುದಾರರು ಸಮ್ಮತಿಯಿಲ್ಲದೆ ಅಭ್ಯರ್ಥಿಯನ್ನು ಘೋಷಿಸಬಾರದು ಎಂಬ ಒಪ್ಪಂದಕ್ಕೆ ಬರಲಾಗಿದೆʼ ಎಂದು ಮೂಲಗಳು ತಿಳಿಸಿವೆ.

ಸಾಂಗ್ಲಿಗಾಗಿ ಜಗಳ: ʻನಾವು ಸೀಟು ಹಂಚಿಕೆ ಸೂತ್ರವನ್ನುರೂಪಿಸುತ್ತಿದ್ದೆವು. ನಾಲ್ಕು ಅಥವಾ ಐದು ಸ್ಥಾನಗಳ ಮೇಲೆ ನಾವು ಒಮ್ಮತ ರೂಪಿಸಬೇಕಿತ್ತು. ಠಾಕ್ರೆ ಶಿವಸೇನೆಯ ಪಟ್ಟಿಯನ್ನು ಘೋಷಿಸಿದ್ದಾರೆ ಮತ್ತು ಸಂಧಾನ ನಡೆಸುತ್ತಿದ್ದ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಹಾಕಿದ್ದಾರೆ ಎಂಬುದು ನಮಗೆ ಆಶ್ಚರ್ಯ ಉಂಟುಮಾಡಿದೆ. ಸಾಂಗ್ಲಿ ಕ್ಷೇತ್ರದ ಬಗ್ಗೆ ಮಾತುಕತೆ ಸಾಧ್ಯವಿಲ್ಲ. ಏಕೆಂದರೆ, ಸಮೀಕ್ಷೆಗಳು ನಮ್ಮ ಅಭ್ಯರ್ಥಿಯ ಗೆಲುವು ತೋರಿ ಸುತ್ತವೆ .ಆದರೆ, ಶಿವಸೇನೆ ಸಾಂಗ್ಲಿಯಿಂದ ಚಂದ್ರಹರ ಪಾಟೀಲ್ ಅವರನ್ನು ಘೋಷಿಸಿದೆ. ಇದು ಸ್ವೀಕಾರಾರ್ಹವಲ್ಲʼ ಎಂದು ಥೋರಟ್ ಫೆಡರಲ್‌ಗೆ ತಿಳಿಸಿದರು. ʻ2019 ರಲ್ಲಿ ಗೆದ್ದ ಕ್ಷೇತ್ರಗಳ ಮೇಲಿನ ನಮ್ಮ ಹಕ್ಕು ಹಿಂಪಡೆಯುವ ಪ್ರಶ್ನೆಯಿಲ್ಲʼ ಎಂದು ಸೇನೆ ಪ್ರತಿಪಾದಿಸಿದೆ. ಉದ್ಧವ್ ಠಾಕ್ರೆ ಅವರಿಗೆ ಆದ ಅನ್ಯಾಯದ ಹಿನ್ನೆಲೆಯಲ್ಲಿ ʻಅವರಿಗೆ ಭಾರಿ ಬೆಂಬಲ ಮತ್ತು ಸಹಾನುಭೂತಿ ಅಲೆʼ ಇದೆ ಎಂದು ಹಿರಿಯ ಸೇನಾ ನಾಯಕರೊಬ್ಬರು ಫೆಡರಲ್‌ಗೆ ತಿಳಿಸಿದರು.

ಪವಾರ್ ನಿಷ್ಠರಿಂದ ಪ್ರತಿಭಟನೆ: ಮುಂಬೈ ಈಶಾನ್ಯ ಕ್ಷೇತ್ರದಿಂದ ಎನ್‌ಸಿಪಿಯ ಮಾಜಿ ನಾಯಕ ಸಂಜಯ್ ದಿನಾ ಪಾಟೀಲ್ ಅವರನ್ನು ಕಣಕ್ಕಿಳಿಸುವ ಶಿವಸೇನೆಯ ನಿರ್ಧಾ ರವು ಪವಾರ್ ಅವರ ಪಕ್ಷಕ್ಕೆ ಸರಿ ಕಂಡಿಲ್ಲ. 2019ರಲ್ಲಿ ಎನ್‌ಸಿಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಪಾಟೀಲ್, 2019 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಶಿವಸೇನೆಗೆ ಹೋಗಿದ್ದರು; ಆಗ ಸೇನೆ, ಬಿಜೆಪಿಯ ಮಿತ್ರ ಪಕ್ಷವಾಗಿತ್ತು. ಪಾಟೀಲ್‌ ಅವರ ಪಕ್ಷಾಂತರವ ನ್ನು ಎನ್‌ಸಿಪಿ ʻನಂಬಿಕೆಗೆ ದ್ರೋಹʼ ಎಂದಿದೆ. ಮುಂಬೈ ಈಶಾನ್ಯ ಸ್ಥಾನವನ್ನು ಠಾಕ್ರೆ ಅವರ ಪಕ್ಷಕ್ಕೆ ನೀಡಲು ಪವಾರ್ ವಿರೋಧಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್‌ಗೆ ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ ಮತ್ತು ಸಮ್ಮಿಶ್ರ ಧರ್ಮವನ್ನು ಉಲ್ಲಂಘಿಸಬಾರ ದು ಎಂದು ಠಾಕ್ರೆಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ಫೆಡರಲ್‌ಗೆ ತಿಳಿಸಿವೆ. ಪ್ರಕಾಶ್‌ ಅಂಬೇಡ್ಕರ್‌ ಅವರು ತಮ್ಮ ನಿಲುವು ಮರುಪರಿಶೀಲಿಸಲು ನಿರಾಕರಿಸಿದರೂ, ವಿಬಿಎ ಪ್ರಭಾವವಿರುವ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ವಿನಂತಿಸಬಹುದು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

Read More
Next Story